ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೌದು ಸ್ಕ್ಯಾಮರ್ಸ್‌ಗಳು ಸುಲಭ ದಾರಿಯಲ್ಲಿ ಹಣ ಗಳಿಸಲು ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ, ಆಧಾರ್ ಕಾರ್ಡ್ ಇನ್ನಿತರೆ ಪರ್ಸನಲ್ ಡಾಕ್ಯಮೆಂಟ್‌ಗಳ ಮಾಹಿತಿಯನ್ನು ಕಲೆ ಹಾಕಿ ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ ಎಂದು ಹೆದರಿಸಿ ಜನರಿಂದ ಹಣ ದೋಚುತ್ತಿದ್ದಾರೆ. ಇಂತಹ ಸ್ಕ್ಯಾಮ್‌ಗಳಿಗೆ ಬಲಿಯಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಲಕ್ಷಾನುಗಟ್ಟಲೆ ಹಣ ಕಳೆದುಕೊಂಡವರು ಹಲವರಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರೂ ಸ್ಕ್ಯಾಮರ್ಸ್‌ಗಳು ಜನರನ್ನು ಮ್ಯಾನಿಪುಲೇಟ್ ಮಾಡಿ ಹಣ ದೋಚುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ವ್ಯಕ್ತಿಯೊಬ್ಬರಿಗೂ ಇದೇ ವಂಚಕರು ಕರೆ ಮಾಡಿದ್ದು, ನಾನು ಈ ಸ್ಕ್ಯಾಮ್‌ನಿಂದ ಸ್ವಲ್ಪದರಲ್ಲಿಯೇ ಪಾರಾದೆ, ನೀವು ಕೂಡಾ ಈ ಬಗ್ಗೆ ಜಾಗೃತವಾಗಿರಿ ಎಂದು ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸ್ಕ್ಯಾಮರ್ಸ್ ಕರೆ ಮಾಡಿ ಹೇಗೆಲ್ಲಾ ಮ್ಯಾನಿಪುಲೇಟ್ ಮಾಡ್ತಾರೆ, ಕೊನೆಗೆ ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಅಂತ ಹೇಳಿ ಹಣ ದೋಚಲು ಹೇಗೆಲ್ಲಾ ಪ್ರಯತ್ನ ಮಾಡ್ತಾರೆ ಈ ಎಲ್ಲದರ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲೂ ಕೂಡಾ ಮಾಹಿತಿಯನ್ನು ಶೇರ್ ಮಾಡಿದ್ದಾರೆ.
ಇದು ಕೂಡಾ ಒಂದು ರೀತಿಯ ಸೈಬರ್ ವಂಚನೆಯಾಗಿದ್ದು, ಇಲ್ಲಿ ಸೈಬರ್ ಸ್ಕ್ಯಾಮರ್ಸ್ ತಾವು ಈಡಿಯವರು, ದೆಹಲಿ ಕ್ರೈಂ ಪೊಲೀಸ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ಹೀಗೆ ವಿವಿಧ ತನಿಖಾ ಸಂಸ್ಥೆಯ ಅಧಿಕಾರಿಗಳು ಅಂತ ಕರೆ ಮಾಡಿ, ಆಧಾರ್ ಕಾರ್ಡ್ ಡಿಟೇಲ್ಸ್ ಹೇಳಿ ಸುಳ್ಳು ಆರೋಪಗಳನ್ನು ಹೊರಿಸಿ, ಕೊನೆಗೆ ಬೆದರಿಸಿ ಅಥವಾ ನಿಮ್ಮನ್ನು ಇದರಿಂದ ಪಾರು ಮಾಡುತ್ತೇವೆ ಎಂದು ಹೇಳಿ ಜನರಿಂದ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣವನ್ನು ದೋಚುತ್ತಾರೆ.
ಸುಮಾರು 18 ವರ್ಷಗಳಿಂದ ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವಂತಹ ನವೀನ್ ಶೌರಿ ಎಂಬವರಿಗೆ ಸೈಬರ್ ವಂಚಕರು ಕರೆ ಮಾಡಿ ಹಣ ಎಗರಿಸಲು ಪ್ರಯತ್ನಿಸಿದ್ದಾರೆ. ತಮ್ಮ ಚಾಣಾಕ್ಷತೆಯಿಂದ ಅವರು ವಂಚನೆಗೆ ಒಳಗಾಗುವುದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದು, ಕೇವಲ ಒಂದು ಕರೆ ಮೂಲಕ ಸ್ಕ್ಯಾಮರ್ಸ್ ನಮ್ಮನ್ನು ಹೇಗೆಲ್ಲಾ ವಂಚನೆ ಮಾಡ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಗ್ಲೋಬಲ್ ಲಾಜಿಸ್ಟಿಕ್ ಕಂಪೆನಿಯಾದ ಡಿ.ಹೆಚ್.ಎಲ್ ನಿಂದ ಕರೆ ಮಾಡಿರುವುದಾಗಿ ಹೇಳಿ ವಂಚಕರು ನವೀನ್ ಅವರನ್ನು ವಂಚಿಸಲು ಯತ್ನಿಸಿದ್ದಾರೆ. ಮೊದಲಿಗೆ ಕರೆ ಮಾಡಿ ನಾವು ಡಿ.ಹೆಚ್.ಎಲ್ ಕಂಪೆನಿಯಿಂದ ಕರೆ ಮಾಡ್ತಿದ್ದೇವೆ, ಏನಂದ್ರೆ ನಿಮ್ಮ ಪ್ಯಾಕೆಜ್ ಒಂದನ್ನು ಥೈಲ್ಯಾಂಡ್‌ಗೆ ಡೆಲಿವರಿ ಮಾಡಲು ಆಗ್ತಿಲ್ಲ, ನಾವು ಕೂಡಾ ತುಂಬಾ ಟ್ರೈ ಮಾಡ್ತಿದ್ದೇವೆ ಎಂದು ಹೇಳಿ ಜೊತೆಗೆ ನವೀನ್ ಅವರ ಹುಟ್ಟಿದ ದಿನಾಂಕದಿಂದ ಹಿಡಿದು ಆಧಾರ್ ಕಾರ್ಡ್‌ನಲ್ಲಿರುವ ಎಲ್ಲಾ ಮಾಹಿತಿಗಳ ಬಗ್ಗೆ ಸರಿಯಾಗಿ ಹೇಳಿ ಕಸ್ಟಮ್ಸ್‌ನವರು ಕರೆ ಮಾಡುವುದಕ್ಕೂ ಮುಂಚೆ ನಾವು ನಿಮಗೆ ಕರೆ ಮಾಡ್ತಿದ್ದೇವೆ. ಥೈಲ್ಯಾಂಡ್‌ಗೆ ಹೋಗಬೇಕಿರುವ ನಿಮ್ಮ ಪ್ಯಾಕೆಜ್‌ನಲ್ಲಿ ಕೆಲವೊಂದಷ್ಟು ನಿಷೇಧಿತ ವಸ್ತುಗಳಿವೆ. ಅದರಲ್ಲಿ ಮೂರು ಲ್ಯಾಪ್‌ಟಾಪ್, ನಾಲ್ಕು ಪಾಸ್‌ಪೋರ್ಟ್, 1700 ಗ್ರಾಂ ಎಂ.ಡಿ.ಎಂ ಎಂಬ ನಿಷೇಧಿತ ವಸ್ತುಗಳಿವೆ ಎಂದು ಹೇಳಿ ಹೆದರಿಸಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಸಿಂಪತಿ ಟ್ರಿಕ್ಸ್ ವರ್ಕ್ ಆಯ್ತು; ರ‍್ಯಾಪಿಡೊ ಕ್ಯಾಬ್ ಚಾಲಕನ ಮೋಸದಾಟದಿಂದ ಪಾರದ ಕಥೆಯನ್ನು ಹಂಚಿಕೊಂಡ ಬೆಂಗಳೂರಿನ ಯುವಕ
ನನಗೆ ಈ ಬಗ್ಗೆ ಏನು ಗೊತ್ತಿಲ್ಲ, ನಾನು ಯಾರಿಗೂ ಪಾರ್ಸೆಲ್ ಕಳುಹಿಸಿಲ್ಲ ಎಂದು ನವೀನ್ ಅವರು ಹೇಳಿದರೂ ಬೆನ್ನು ಬಿಡದ ಸ್ಕ್ಯಾಮರ್ಸ್ ಹಾಗದ್ರೆ ಡೆಲ್ಲಿ ಕ್ರೈಂ ಬ್ರ್ಯಾಂಚ್‌ನಲ್ಲಿ ನೀವು ಒಂದು ಕಂಪ್ಲೇಂಟ್ ಕೊಡಿ ಎಂದು ಹೇಳಿ, ಯಾವುದೋ ಒಂದು ಕರೆಗೆ ನವೀನ್ ಕರೆಯನ್ನು ಟ್ರಾನ್ಸ್‌ಫರ್ ಮಾಡ್ತಾರೆ. ಆ ಕಡೆಯಿಂದ ನಾವು ದೆಹಲಿ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಮಾತಾಡ್ತಿರೋದು ಎಂದು ಹೇಳಿ ನೀವು ಒಂದು ವಿಡಿಯೋ ಕನ್ಫರ್‌ಮೇಷನ್ ಕೊಡ್ಬೇಕು ಹಾಗಾಗಿ ಸ್ಕೈಪ್‌ಗೆ ಬನ್ನಿ ಎಂದು ಹೇಳ್ತಾರೆ. ಸುರಕ್ಷತೆಯ ದೃಷ್ಟಿಯಿಂದ ನವೀನ್ ಅವರು ಸ್ಕೈಪ್ ಎಲ್ಲಾ ಬೇಡ ಐಫೋನ್ ಫೇಸ್‌ಟೈಮ್‌ನಲ್ಲಿ ಬೇಕಾದ್ರೆ ವಿಡಿಯೋ ಕನ್ಫರ್‌ಮೇಷನ್ ಕೊಡ್ಬೇದು ಇಲ್ಲಾಂದ್ರೆ ಗೂಗಲ್ ಮೀಟ್ ಕೂಡಾ ಆಗ್ಬೋದು ಎಂದು ಹೇಳಿದಾಗ ಕೇಂದ್ರ ಸರ್ಕಾರದ ರೂಲ್ಸ್ ಪ್ರಕಾರ ಪರ್ಸನಲ್ ಮೊಬೈಲ್ ನಂಬರ್‌ಗೆ ಹಾಗೆಲ್ಲಾ ಫೇಸ್‌ಟೈಮ್‌ನಲ್ಲಿ ವಿಡಿಯೋ ಕಾಲ್ ಮಾಡಲು ನೀವು ಸ್ಕೈಪ್‌ನಲ್ಲಿಯೇ ಕನ್ಫರ್‌ಮೇಷನ್ ಕೊಡ್ಬೇಕು, ಜೊತೆಗೆ ಆ ಸಮಯದಲ್ಲಿ ನಿಮ್ಮ ಸುತ್ತಮುತ್ತ ಯಾರು ಕೂಡಾ ಇರಬಾರದು ನಿಮ್ಮ ಸಹಾಯಕ್ಕೆ ಯಾರು ಕೂಡಾ ಬರಬಾರದು ಎಂದು ಎಚ್ಚರ ನೀಡ್ತಾರೆ.
ಸ್ಕೈಪ್‌ನಲ್ಲಿ ನವೀನ್ ಮಾಹಿತಿ ನೀಡಿದ ತಕ್ಷಣವೇ ನಿಮ್ಮ ಆಧಾರ್ ದುರ್ಬಲಕೆ ಮಾಡ್ತಿದ್ದಾರೆ, ನಿಮ್ಮ ಆಧಾರ್ ಹೆಸರಲ್ಲಿ ಕಾಳಧನ, ಕಿಡ್ನ್ಯಾಪ್, ಮಾನವ ಕಳ್ಳಸಾಗಾಣಿಕೆ ಈ ಎಲ್ಲಾ ಕೇಸ್‌ಗಳಿವೆ ನಿಮಗೆ ಎರಡು ವಾರಗಳೊಳಗೆ ಅರೆಸ್ಟ್ ವಾರಂಟ್ ಬರುತ್ತೆ ಎಂದು ಹೇಳಿ ಹೆದರಿಸುತ್ತಾರೆ. ನಂತರ ಹೆಚ್.ಡಿ.ಎಫ್.ಸಿ ಬ್ಯಾಂಕ್‌ನಲ್ಲಿ ನಿಮ್ಮ ಫೇಕ್ ಅಕೌಂಟ್ ಇದೆ ಅದರಲ್ಲಿ 2 ಮಿಲಿಯನ್‌ನಷ್ಟು ಕಾಳಧನ ಇದೆ, ಇದೆಲ್ಲಾ ನಿಮ್ಮದೇ ಹಣ ಅಂತೆಲ್ಲಾ ಭಯಪಡಿಸಲು ಯತ್ನಿಸಿ ಕೊನೆಗೆ ನಿಮ್ಮನ್ನು “ಡಿಜಿಟಲ್ ಅರೆಸ್ಟ್ʼ ಮಾಡ್ತೀವಿ ಎಂದು ಹೇಳ್ತಾರೆ. ಆದ್ರೆ ನಮ್ಮ ಭಾರತೀಯ ಕಾನೂನಿನಲ್ಲಿ ಈ ರೀತಿಯ ಯಾವುದೇ ಕಾನೂನು ಇಲ್ಲದ ಕಾರಣ, ಜೊತೆಗೆ ನಾನು ಕೂಡಾ ನಿಮ್ಮ ಮುಖವನ್ನು ನೋಡಬೇಕು ಎಂದು ಸ್ಕೈಪ್ ಕಾಲ್‌ನಲ್ಲಿ ಅವರ ಮುಖವನ್ನು ತೋರಿಸುವಂತೆ ಒತ್ತಾಯಿಸಿದಾಗ ಸಿಬಿಐ ಬ್ಯಾಗ್‌ರೌಂಡ್‌ನಲ್ಲಿ ಪೊಲೀಸ್ ಯುನಿಫಾರ್ಮ್ ಹಾಕಿ ಕೂತ ಖದೀಮನ ಎದೆ ಭಾಗದಲ್ಲಿರುವ ಟ್ಯಾಟೂ ನೋಡಿ ಇದು ಪಕ್ಕಾ ಸ್ಕ್ಯಾಮರ್ಸ್ ಎಂದು ಗೊತ್ತಾಗಿ ಕಾಲ್ ಕಟ್ ಮಾಡಿ ನಂತರ ಬ್ಯಾಂಕ್‌ನವರಿಗೆ ಕರೆ ಮಾಡಿ ತಕ್ಷಣ ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವಂತೆ ಹೇಳಿ ನವೀನ್ ಅವರು ತಮ್ಮ ಬುದ್ಧಿವಂತಿಕೆಯಿಂದ ದೊಡ್ಡ ಸ್ಕ್ಯಾಮ್‌ನಿಂದ ಪಾರಾಗಿದ್ದಾರೆ.
ಆದರೆ ಎಷ್ಟೋ ಜನ ಇಂತಹ ಸ್ಕ್ಯಾಮ್‌ಗಳಿಗೆ ಬಲಿಯಾಗಿ ತಾವು ಬ್ಯಾಂಕ್‌ನಲ್ಲಿ ಕೂಡಿಟ್ಟ ಹಣವನ್ನೆಲ್ಲಾ ಕಳೆದುಕೊಂಡಿದ್ದಾರೆ. ಒಂದು ವೇಳೆ ಹೀಗೆ ನಿಮಗೂ ಕೂಡಾ ಇದೇ ರೀತಿ ಕರೆ ಬಂದರೆ ನೀವು ಕಾಲ್ ಕಟ್ ಮಾಡದೆ ಸ್ಕ್ಯಾಮರ್ಸ್‌ಗಳ ಜೊತೆ ಮಾತನಾಡುತ್ತಾ ಹೋದರೆ ಕೊನೆಗೆ ಅವರು ಹೆದರಿಸಿಯೋ ಅಥವಾ ನಿಮ್ಮನ್ನು ಈ ಕೇಸ್‌ನಿಂದ ಪಾರು ಮಾಡುತ್ತೇವೆ ನಮಗೆ ಇಂತಿಷ್ಟು ಹಣ ಕೊಡ್ಬೇಕು ಅಂತ ಹೇಳಿ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನೆಲ್ಲಾ ದೋಚುತ್ತಾರೆ. ಹಾಗಾಗಿ ಇಂತಹ ಕರೆಗಳು ಬಂದಾಗ ಆದಷ್ಟು ಜಾಗರೂಕರಾಗಿರಬೇಕು, ಹೀಗೆನಾದರೂ ಆಗ್ತಿದೆ ಅಂದಾಗ ತಕ್ಷಣ ಬ್ಯಾಂಕ್ ಅಕೌಂಟ್‌ಗಳನ್ನು ಸ್ಥಗಿತಗೊಳಿಸಬೇಕೇ ವಿನಃ ಭಯಪಟ್ಟು ಯಾವುದೇ ಕಾರಣಕ್ಕೂ ಹಣ ಟ್ರಾನ್ಸ್‌ಫರ್ ಮಾಡ್ಬೇಡಿ ಎಂದು ನವೀನ್ ಅವರು ಜನರಿಗೆ ಸಲಹೆ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ