Injection: ಇಂಜೆಕ್ಷನ್ ಎಂದರೆ ಮಕ್ಕಳು ಹೋಗಲಿ ದೊಡ್ಡವರಲ್ಲಿಯೂ ಕೆಲವರಿಗೆ ಸಣ್ಣಗೆ ಮೈನಡುಕ ಬರುತ್ತದೆ. ಎಷ್ಟು ಬೇಕಾದರೂ ಮಾತ್ರೆ ಕೊಡಿ ಇಂಜೆಕ್ಷನ್ ಮಾತ್ರ ಬೇಡ ಎನ್ನುತ್ತಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಲಸಿಕೆ (Corona Vaccination) ತೆಗೆದುಕೊಳ್ಳುವ ವಿಡಿಯೋಗಳನ್ನು ನೋಡಿದ ಮೇಲೆ ಗೊತ್ತಾಗಿರಬೇಕಲ್ಲ, ದೊಡ್ಡವರೆನ್ನಿಸಿಕೊಂಡ ಕೆಲವರಿಗೆ ಇಂಜೆಕ್ಷನ್ ಕೊಡುವುದೆಂದರೆ ಎಷ್ಟೊಂದು ಹರಸಾಹಸ ಮಾಡಬೇಕಾಗುತ್ತದೆ ಅಂತ. ಅದು ಬಿಡಿ, ಬೆಂಗಳೂರಿನ ಈ ಹೈಫೈ ಡಾಕ್ಟರ್ ಕಡೆ ಇಂಜೆಕ್ಷನ್ ಹಾಕಿಸಿಕೊಳ್ಳುವ ಮಕ್ಕಳು ಮಾತ್ರ ಇಂಜೆಕ್ಷನ್ ಕೊಟ್ಟಾದ ಮೇಲೆಯೂ ನಗುತ್ತಲೇ ಇರುತ್ತವೆ ಎನ್ನುವ ವಿಷಯ ನಿಮಗೆ ಗೊತ್ತೆ? ಮಕ್ಕಳ ತಜ್ಞ ಡಾ. ಸಯ್ಯದ್ ಮುಜಾಹಿದ್ ಹುಸೇನ್ (Dr Sayed Mujahid Husain)ರ ಕೈಯಲ್ಲಿ ಅಂಥಾ ಮಾಂತ್ರಿಕತೆ ಏನಿದೆ?
ಇದನ್ನೂ ಓದಿ : Viral: ಕುಡಿದ ಅಮಲಿನಲ್ಲಿ ಐಫೆಲ್ ಟವರ್ ಮೇಲೆ ನಿದ್ದೆಹೋದ ಅಮೆರಿಕದ ಪ್ರವಾಸಿಗರು
ಇನ್ಸ್ಟಾಗ್ರಾಂನ ಈ ಡಾಕ್ಟರ್ ಪುಟವನ್ನು ನೋಡಿದ ಮೇಲೆ ಇವರ ವ್ಯಕ್ತಿತ್ವವೇ ಒಟ್ಟಾರೆ ಮಾಂತ್ರಿಕತೆಯಿಂದ ಕೂಡಿದೆ ಎಂದೆನ್ನಿಸುತ್ತದೆ. ಈತನಕ 9 ಲಕ್ಷ ಫಾಲೋವರ್ಸ್ ಹೊಂದಿರುವ ಇವರ ಕೆಲ ವಿಡಿಯೋಗಳನ್ನು ಮಿಲಿಯನ್ಗಟ್ಟಲೆ ಮಂದಿ ಲೈಕ್ ಮಾಡಿರುತ್ತಾರೆ. ಮಕ್ಕಳ ಗಮನವನ್ನು ಸಂಪೂರ್ಣ ತಮ್ಮೆಡೆ ಸೆಳೆಯುವಂತಹ ವಿನೋದಮಯ ಕೌಶಲ ಇವರದು. ಒಂದಲ್ಲ ಎರಡಲ್ಲ ಆಸ್ಪತ್ರೆಗೆ ಬರುವ ಎಲ್ಲ ಮಕ್ಕಳನ್ನೂ ಅದೇ ಪ್ರೀತಿ, ಅದೇ ತಾಳ್ಮೆ, ಅದೇ ಅಕ್ಕರೆಯಿಂದ ರಂಜಿಸುತ್ತಾರೆ.
ಮೊಬೈಲ್ ಮತ್ತು ಟಿವಿ ಪರದೆಯೊಳಗಿನಿಂದ ತಮ್ಮ ನೆಚ್ಚಿನ ಕಾರ್ಟೂನ್ ಕ್ಯಾರೆಕ್ಟರ್ ತಮ್ಮೆದುರಿಗೆ ಧುತ್ತೆಂದು ಪವಡಿಸಿದೆಯೇನೋ ಎಂಬಂಥ ಖುಷಿ, ಅಚ್ಚರಿಯಲ್ಲಿ ಈ ಮಕ್ಕಳು ತೇಲಿಹೋಗುತ್ತವೆಯೇನೋ. ಆದರೆ, ಅವು ಮನೆಗೆ ಹೋದ ಮೇಲೆ ಬೆಂಕಿಯಂಥ ಜ್ವರ, ನೋವಿನಿಂದ ಒದ್ದಾಡುವ ಪರಿಯೋ ಕೇಳಬೇಡಿ ಮತ್ತೆ! ಈ ಮೇಲಿನ ವಿಡಿಯೋ ಅನ್ನು ಈತನಕ ಸುಮಾರು 1.5 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಇಂಜೆಕ್ಷನ್ ಕೊಟ್ಟ ಅರಿವೇ ಆ ಮಗುವಿಗೆ ಇದ್ದಹಾಗಿಲ್ಲ, ನಗೆಗಡಲಲ್ಲಿ ಒಂದೇ ಸಮ ತೇಲುತ್ತಿದೆ.
ನಿಮ್ಮ ಈ ವಿಡಿಯೋಗಳನ್ನು ನೋಡಿ ನಿಮ್ಮ ಬಳಿಯೇ ನಾನು ಮಕ್ಕಳ ತಜ್ಞೆಯಾಗಿ ತರಬೇತಿ ಪಡೆಯಬೇಕು ಎಂದೆನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ನಿಮ್ಮ ಆಸ್ಪತ್ರೆಯಲ್ಲಿ ನನಗೆ ಏನಾದರೂ ಒಂದು ಕೆಲಸ ಕೊಡಿ, ಸಂಬಳ ಕಡಿಮೆ ಇದ್ದರೂ ಸರಿ ಎಂದು ಅನೇಕರು ಹೇಳಿದ್ದಾರೆ. ಈತನಕ ಇಂಥ ಡಾಕ್ಟರ್ ಅನ್ನು ಜೀವಮಾನದಲ್ಲಿಯೇ ನಾ ನೋಡಿಲ್ಲ ಎಂದಿದ್ದಾರೆ ಅನೇಕರು. ನಿಮ್ಮನ್ನು ತುಂಬಾ ತುಂಬಾ ಪ್ರೀತಿಸುತ್ತೇನೆ, ಇದರ ಆಚೆಗೆ ಏನೂ ಹೊಳೆಯುತ್ತಿಲ್ಲ ಡಾಕ್ಟರ್ ಎಂದು ಹೇಳುವವರಿಗೆ ಲೆಕ್ಕವೇ ಇಲ್ಲ.
ನನಗೆ ಮಕ್ಕಳಾದ ಮೇಲೆ ನಿಮ್ಮ ಬಳಿಯೇ ಕರೆದುಕೊಂಡು ಬರುವೆ ಎಂದು ಹೇಳುವವರ ಸಂಖ್ಯೆ ಏನು ಕಡಿಮೆ ಇಲ್ಲ ಮತ್ತೆ! ಹಾಗೆಯೇ ನಾನೂ ನಿಮ್ಮಂತೆ ಸಹೃದಯಿ ವೈದ್ಯನಾಗಬೇಕು ಎಂದು ಹೇಳುವವರಿಗೂ. ಇಷ್ಟೊಂದು ತಾಳ್ಮೆಯನ್ನು ಎಲ್ಲಿಂದ ಬಸಿದು ತರುತ್ತೀರಿ ಎಂದು ಕೇಳುವವರಿಗೂ.
ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:41 pm, Wed, 16 August 23