Viral Video : ಯಾರೊಬ್ಬರೂ ಒಂಟಿಯಾಗಿ ಬದುಕಲು ಹೋರಾಡಲು ಸಾಧ್ಯವೇ ಇಲ್ಲ. ಜೊತೆಗೊಂದು ಜೀವ ಪರೋಕ್ಷವಾಗಿಯೋ ಪ್ರತ್ಯಕ್ಷವಾಗಿಯೋ ಇದ್ದೇ ಇರುತ್ತದೆ. ಬದುಕು ಹೀಗೊಂದು ಸಂಬಂಧವನ್ನು ಜೋಡಿಸಿರುತ್ತದೆ. ಇನ್ನು ಸಂಬಂಧಗಳ ಆಳ ಅರ್ಥವಾಗುವುದು ನೋವಿನಲ್ಲಿದ್ದಾಗ, ಸಂಕಟದಲ್ಲಿದ್ದಾಗ ಮತ್ತು ಅತೀವ ದುಃಖದಲ್ಲಿದ್ದಾಗಲೇ. ಕ್ಯಾನ್ಸರ್! ಯಾರಿಗೆ ತಾನೆ ಕತ್ತಲು ಕವಿದಂತಾಗುವುದಿಲ್ಲ? ಆದರೆ ಕತ್ತಲನ್ನು ಸರಿಸಿ ಅಷ್ಟಷ್ಟೇ ಬೆಳಕು ಮಾಡಿಕೊಳ್ಳಲೇಬೇಕಲ್ಲವೆ? ಚಿಕಿತ್ಸೆಗೆ ಹಣ ಹೊಂದಿಸಬಹುದು. ಆದರೆ ನೋಯುತ್ತಿರುವ ಜೀವಕ್ಕೆ ಜೊತೆಯಾಗುವುದು? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ತಂಗಿ ಕ್ಯಾನ್ಸರ್ಗೆ ಈಡಾಗಿದ್ಧಾಳೆ. ಅಣ್ಣನೂ ಆಕೆಯಂತೆ ತಲೆ ಬೋಳಿಸಿಕೊಂಡು ನಿನ್ನ ಜೊತೆ ನಾನಿದ್ದೇನೆ ಎಂಬ ಭಾವ ಭರವಸೆ ಮೂಡಿಸುತ್ತಿದ್ದಾನೆ.
NO ONE FIGHTS ALONE: Brother shaves his head in solidarity with sister who is fighting cancer. ?❤️? pic.twitter.com/ExX69N3P1a
ಇದನ್ನೂ ಓದಿ— GoodNewsMovement (@GoodNewsMVT) October 13, 2022
ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 3 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿ ಭಾವಪರವಶರಾಗಿದ್ದಾರೆ. ತಂಗಿಯ ತಲೆಯನ್ನು ಬೋಳಿಸುವಾಗ ಇದ್ದಕ್ಕಿದ್ದಂತೆ ಈ ಅಣ್ಣ ತನ್ನ ತಲೆಗೂ ಟ್ರಿಮ್ಮರ್ ತಾಕಿಸಿಕೊಳ್ಳುತ್ತಾನೆ. ಆಗ ತಂಗಿ ಭಾವುಕಳಾಗುತ್ತಾಳೆ. ನಂತರ ಸಮಾಧಾನ ತಂದುಕೊಂಡು ಅಣ್ಣನ ತಲೆಯನ್ನು ಬೋಳಿಸಲು ಶುರುಮಾಡುತ್ತಾಳೆ.
ಇಂದು ಎಲ್ಲವೂ ಬೆರಳತುದಿಯಲ್ಲಿ ಲಭ್ಯ ಔಷಧಿ, ಚಿಕಿತ್ಸೆ ಏನೆಲ್ಲವೂ. ಆದರೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಬೇಕಿರುವುದು ಮನಸಿನ ಸಾಂತ್ವನ. ನಿನ್ನೊಂದಿಗೆ ನಾನಿದ್ದೇನೆ ಎನ್ನುವ ಭಾವ. ಹಾಗಾಗಿ ರೋಗಕ್ಕೆ ತುತ್ತಾದವರಿಗೆ ಸಮಯ ಕೊಡುವುದು, ಅವರ ನೋವನ್ನು ನಲಿವಿಗೆ ತಿರುಗಿಸುವುದು ಬಹಳ ಮುಖ್ಯ. ಸಂಬಂಧಗಳು ಗಾಢವಾಗುವುದು ಇಂಥ ಸಂದರ್ಭಗಳಲ್ಲಿಯೇ. ಅವುಗಳಿಗೆ ಹೆಚ್ಚು ಅರ್ಥ ಒದಗುವುದು ಇಂಥ ಸಂಕಟದ ಸನ್ನಿವೇಶಗಳಲ್ಲಿ ಜೊತೆಗಿದ್ದಾಗಲೇ.
ಹಾಗೆಂದು ರಕ್ತಸಂಬಂಧಗಳೇ ಎಲ್ಲವೂ ಆಗಬೇಕಿಲ್ಲ. ಮನುಷ್ಯ ಸಂಬಂಧ ಎನ್ನುವುದು ಬಹಳ ಅಮೂಲ್ಯ. ನಿನ್ನ ಕಷ್ಟದ ಹಾದಿಯಲ್ಲಿ ನಾನಿದ್ದೇನೆ, ಉದ್ದಕ್ಕೂ ನಾನಿರುತ್ತೇನೆ ಎನ್ನುವ ಭರವಸೆ ಮೂಡಿಸುವುದು ಯಾವುದೇ ಸಂಬಂಧದ ಸಾರ್ಥಕತೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:33 pm, Thu, 13 October 22