Books Day 2021 : ನನ್ನ ಸಮಯವೆನ್ನುವುದು ಮತ್ತೆ ನನಗೀಗ ಸಿಕ್ಕಿದೆ

‘ಹೊರಳಿ ನೋಡಿದಾಗ ಈ ಲಾಕ್​ಡೌನ್​ ಟೈಮ್​ ನನ್ನ ಬದುಕಿಗೊಂದು ಬ್ರೇಕ್ ಕೊಟ್ಟಿತು ಎನ್ನಿಸುತ್ತದೆ. ಇಷ್ಟು ವರ್ಷ ನನಗೆ ಟೈಪಿಂಗ್ ಬರುತ್ತಿರಲಿಲ್ಲ. ಯಾರದೋ ಬಳಿ ಹೋಗಿ ನನಗೆ ಬೇಕಾದುದನ್ನು ಟೈಪ್ ಮಾಡಿಸಿಕೊಳ್ಳುತ್ತಿದ್ದೆ. ಇದರಿಂದ ಸಾಕಷ್ಟು ಶಕ್ತಿ ಸಮಯ ವ್ಯಯವಾಗುತ್ತಿತ್ತು.​ ಆದರೆ ನನ್ನ ಪತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಹದಿನೈದು ವರ್ಷಗಳಿಂದ ಅವರ ಬರೆವಣಿಗೆಯನ್ನು ಅವರೇ ಟೈಪ್​ ಮಾಡಿಕೊಡುತ್ತಾರೆ. ನಾನು ಪೇಜಿನೇಷನ್ ಮಾಡುತ್ತ ಬಂದಿದ್ದೆ. ಈಗ ನನ್ನ ಪುಸ್ತಕ ನಾನೇ ಟೈಪ್ ಮಾಡಿ ನಾನೇ ಲೇಔಟ್ ಮಾಡಿ ಪೇಜಿನೇಷನ್ ಕೂಡ ಮಾಡಿ ಪುಸ್ತಕವನ್ನು ಮುದ್ರಣಕ್ಕೆ ಕಳಿಸುವಷ್ಟರ ಮಟ್ಟಿಗೆ ತಯಾರಾಗಿದ್ದೇನೆ.‘ ಡಾ. ಹೇಮಾ ಪಟ್ಟಣಶೆಟ್ಟಿ

  • TV9 Web Team
  • Published On - 16:16 PM, 23 Apr 2021
Books Day 2021 : ನನ್ನ ಸಮಯವೆನ್ನುವುದು ಮತ್ತೆ ನನಗೀಗ ಸಿಕ್ಕಿದೆ
ಲೇಖಕಿ, ಪ್ರಕಾಶಕಿ ಡಾ. ಹೇಮಾ ಪಟ್ಟಣಶೆಟ್ಟಿ

ನಾನು ನನ್ನ ಪುಸ್ತಕವನ್ನು ಪ್ರಕಟಿಸಬೇಕು ಎಂದು ಪ್ರಕಾಶನ ಶುರು ಮಾಡಿದವಳೇ ಅಲ್ಲ. ನಮ್ಮ ಅನನ್ಯ ಪ್ರಕಾಶನದಿಂದ ಮೊದಲು ಹೊರತಂದ ಪುಸ್ತಕಗಳು ಶಾಂತಿನಾಥ ದೇಸಾಯಿಯವರವು. ನಂತರ ಶ್ರೀನಿವಾಸ ಹಾವನೂರು, ಹೂಲಿ ಶೇಖರ, ದುಂಡಿರಾಜ್ ಮುಂತಾದವರವು. ಜಯಂತ ಕಾಯ್ಕಿಣಿಯವರ ಮೊದಲ ಪುಸ್ತಕವನ್ನೂ ನಮ್ಮ ಪ್ರಕಾಶನದಿಂದಲೇ ಪ್ರಕಟಿಸಿದೆ. ನನ್ನ ವೃತ್ತಿಯೇ ಪ್ರಕಾಶನ. ಮೂವತ್ತು ವರ್ಷಗಳ ತನಕ ಇತರರ ಪುಸ್ತಕ ತಂದೆ. ಈಗ ನನ್ನ ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಪುಸ್ತಕಗಳಿಗೆ ಮೊದಲ ಆದ್ಯತೆ ಕೊಟ್ಟುಕೊಂಡು ಇತರರ ಪುಸ್ತಕಗಳನ್ನೂ ಪ್ರಕಟಿಸುತ್ತಿದ್ದೇನೆ. ನನ್ನ ಒಂದೊಂದು ಪುಸ್ತಕವೂ ಕನಿಷ್ಟ ಮೂರು ನಾಲ್ಕು ಆವೃತ್ತಿಯಾದರೆ ಪಟ್ಟಣಶೆಟ್ಟಿಯವರ ನಾಟಕಗಳು ಹತ್ತು ಹನ್ನೆರಡು ಆವೃತ್ತಿಯಾಗಿ ಹೊರಬರುತ್ತವೆ. ಹಾಗಾಗಿ ನಮ್ಮಿಬ್ಬರ ಪುಸ್ತಕಗಳನ್ನು ನಮ್ಮ ಪ್ರಕಾಶನದಿಂದಲೇ ಪ್ರಕಟಿಸುತ್ತೇನೆ. ಈ ತನಕ ಒಟ್ಟು 130 ಪುಸ್ತಕ ಪ್ರಕಟಿಸಿದ್ದರೂ ಆವೃತ್ತಿಗಳೇ ಹೆಚ್ಚು ಹೊರಬಂದಿವೆ. ಇನ್ನು ಕವಿತಾ ಸಂಕಲನ ಪ್ರಕಟಿಸುವುದಕ್ಕೂ ನನಗೆ ಯಾವುದೇ ಹಿಂಜರಿಕೆ ಇಲ್ಲ.
ಡಾ. ಹೇಮಾ ಪಟ್ಟಣಶೆಟ್ಟಿ, ಲೇಖಕಿ, ಪ್ರಕಾಶಕಿ

ನನ್ನ ಮುತ್ತಜ್ಜ ಗದಿಗೆಯ್ಯ ಹೊನ್ನಾಪುರಮಠ ಕನ್ನಡದಲ್ಲಿ ಮೊತ್ತಮೊದಲು ಪ್ರಬಂಧ ಸಂಕಲನ ಮತ್ತು ಕಾನೂನೂ ಪುಸ್ತಕ ಬರೆದವರು. ಅವರು ಬರೆದ ಬಾಲರಾಮಾಯಣ, ಬಾಲಭಾರತವನ್ನು ಮೂರನೇ ಕ್ಲಾಸಿನಿಂದಲೇ ಓದಲು ಶುರುಮಾಡಿದೆ. ನಾಲ್ಕನೇ ಕ್ಲಾಸಿನಿಂದ ಧಾರವಾಡದ ಗರಗದ ಮಡಿವಾಳಪ್ಪ ಸಾರ್ವಜನಿಕ ಗ್ರಂಥಾಲಯದಿಂದ ಪುಸ್ತಕ ತಂದು ಓದುವ ಅಭ್ಯಾಸ ರೂಢಿಸಿಕೊಂಡೆ. ಆಗ ಗರಗದ ಮಡಿವಾಳಪ್ಪಜ್ಜ ಇಡೀ ಕಟ್ಟಡವನ್ನು ಮುನ್ಸಿಪಾಲ್ಟಿಗೆ ದಾನ ಮಾಡಿದ್ದರು. ಅವರ ಸ್ಮರಣಾರ್ಥ ಆ ಗ್ರಂಥಾಲಯ ಪ್ರಾರಂಭಗೊಂಡಿತ್ತು.  ಅದಕ್ಕೆ ನಾನು ಸದಸ್ಯಳಾಗಿದ್ದೆ.

ಹೈಸ್ಕೂಲಿಗೆ ಬರುವ ಹೊತ್ತಿಗೆ ನವ್ಯದ ಪ್ರಭಾವಕ್ಕೆ ಬಿದ್ದೆ. ಭೈರಪ್ಪ, ಆಲನಹಳ್ಳಿ ಮುಂತಾದ ಸಾಹಿತಿಗಳು ಧಾರವಾಡಕ್ಕೆ ಬಂದರೆ ನಮ್ಮ ಮನೆಗೆ ಕರೆಯುವುದು ಅಥವಾ ಅವರಿದ್ದಲ್ಲಿಗೆ ಊಟ ತೆಗೆದುಕೊಂಡು ಹೋಗಿ ಕೊಡುವುದು ಇಂಥದೆಲ್ಲವೂ ಶುರುವಾಯಿತು. ಕಾಲೇಜಿನ ಮೆಟ್ಟಿಲೇರುವ ಹೊತ್ತಿಗೆ ಖ್ಯಾತ ಸಾಹಿತಿಗಳೆಲ್ಲರ ಒಡನಾಟ, ಸಂಪರ್ಕ ಶುರುವಾಗಿಬಿಟ್ಟಿತು. ಒಂದರ್ಥದಲ್ಲಿ ಪ್ರಾಥಮಿಕ ಶಾಲೆಯಿಂದಲೇ ಸಾಹಿತ್ಯದ ರುಚಿಗೆ ತೆರೆದುಕೊಂಡೆ. ಹತ್ತು ಹನ್ನೆರಡು ವರ್ಷಕ್ಕೆ ಬರೆವಣಿಗೆ ಶುರುಮಾಡಿದೆ. ಹದಿನೇಳನೇ ವಯಸ್ಸಿಗೆ ಕಥಾಸಂಕಲನ ತಂದೆ. ಹದಿನಾರನೇ ವಯಸ್ಸಿಗೆ ಉದಯವಾಣಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರು ನನ್ನ ಮೊದಲ ಕಥೆ ಪ್ರಕಟಿಸಿದರು. ನಾನು ಜಯಂತ ಕಾಯ್ಕಿಣಿ ಮತ್ತು ಕೆಲವರು ಹದಿನಾರನೇ ವಯಸ್ಸಿಗೇ ನಮ್ಮ ಕಥಾ ಸಂಕಲನಗಳನ್ನು ಪ್ರಕಟಿಸಿದವರು. ಸರಜೂ ಕಾಟ್ಕರ್, ಜಯಂತ ಕಾಯ್ಕಿಣಿ ಕಾಲೇಜಿನಲ್ಲಿ ನನ್ನ ಜ್ಯೂನಿಯರ್. ನಮ್ಮ ಸ್ನೇಹದೊಳಗೂ ಸಾಹಿತ್ಯದ ಮಾತುಕತೆಗಳೇ. ‘ವಿದ್ಯಾರ್ಥಿ ಭಾರತಿ’ ಪತ್ರಿಕೆಯಲ್ಲಿ ನನ್ನ ಕಥೆಗಳು ಪ್ರಕಟವಾಗುತ್ತಿದ್ದವು. ಮೊದಲು ಕಥೆಗಳಿಂದ ಶುರುಮಾಡಿದೆ. ಆಮೇಲೆ ಕವಿತೆ, ಲೇಖನ, ನಾಟಕ, ಅನುವಾದ ಹೀಗೆ ಸಾಹಿತ್ಯವೇ ನನ್ನ ಬದುಕಾಗಿಬಿಟ್ಟಿತು, ನನ್ನ ತವರೂ ಅದನ್ನೇ ಧಾರೆ ಎರೆದಿತ್ತಲ್ಲ? ಈತನಕ ನನ್ನ 33 ಪುಸ್ತಕಗಳು ಪ್ರಕಟವಾಗಿವೆ. ಸಂಸಾರಕ್ಕೆ ಬಿದ್ದ ನಂತರ ಪುಸ್ತಕಕ್ಕೆಂದೇ ಬರೆಯುವುದು ಕಡಿಮೆಯಾಯಿತು.

ಆದರೆ ಲಾಕ್ ಡೌನ್​ನಿಂದ ನನ್ನ ವೈಯಕ್ತಿಕ ಬರೆವಣಿಗೆಗೆ ಸಮಯವಂತೂ ಸಿಕ್ಕಿತು. ವಿಜಯ್ ತೆಂಡೂಲ್ಕರ್ ಅವರ ಐದೂ ನಾಟಕಗಳನ್ನು ಅನುವಾದ ಮಾಡಿ ಪ್ರಸ್ತಾವನೆಯನ್ನೂ ಬರೆದಿಟ್ಟೆ ಈಗಷ್ಟೇ. ಈ ವರ್ಷ ನಮ್ಮಿಬ್ಬರ ಆರೆಂಟು ಪುಸ್ತಕಗಳು ಪ್ರಕಟವಾಗುತ್ತಿವೆ. ಹೋದವರ್ಷ ರಂಗಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹ ತಂದೆ. ಈ ವರ್ಷ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನ ಸಂಗ್ರಹಗಳು. ಸದ್ಯದ ತನಕ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಐವತ್ತು ಲೇಖನಗಳು ಸಿಕ್ಕಿವೆ. ಹಾಗೇ ಪತ್ರಿಕೆಗಳಲ್ಲಿ ಪ್ರಕಟವಾದ ಸಾಕಷ್ಟು ಮಕ್ಕಳ ನಾಟಕಗೂ ಬಾಕಿ ಇವೆ ಪುಸ್ತಕ ರೂಪದಲ್ಲಿ ಹೊರತರಲು. ಹೀಗಾಗಿ ಅಂದಿನಿಂದ ಇಂದಿನತನಕ ನನಗೆ ಸಾಹಿತ್ತ್ಯಿಕ ವಾತಾವರಣವನ್ನು ಬಿಟ್ಟು ಬದುಕಲು ಸಾಧ್ಯವೇ ಆಗಲಿಲ್ಲ. ಸಾಹಿತ್ಯವೇ ನನ್ನ ಬದುಕಿಗೆ ಆಧಾರವಾಯಿತು. ಸಾರ್ವಜನಿಕ, ಸಂಸಾರದ ಕೆಲಸಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಆದರೆ ನಮ್ಮ ಸಂತೋಷ ಮತ್ತು ಬದುಕಿನ ಖುಷಿ ಇರುವುದು ಸಾಹಿತ್ಯದಲ್ಲಿಯೇ; ಓದುವುದು, ಬರೆಯುವುದು, ಪ್ರಕಟಿಸುವುದು.

books day

ಹೇಮಾ ಅವರ ಪುಸ್ತಕಗಳು

ಹೊರಳಿನೋಡಿದಾಗ ಈ ಲಾಕ್​ಡೌನ್​ ಟೈಮ್​ ನನ್ನ ಬದುಕಿಗೊಂದು ಬ್ರೇಕ್ ಕೊಟ್ಟಿತು. ಇಷ್ಟು ದಿನ ನನಗೆ ಟೈಪಿಂಗ್ ಬರುತ್ತಿರಲಿಲ್ಲ. ಯಾರದೋ ಬಳಿ ಹೋಗಿ ನನಗೆ ಬೇಕಾದುದನ್ನು ಟೈಪ್ ಮಾಡಿಸಿಕೊಳ್ಳುತ್ತಿದ್ದೆ. ಇದರಿಂದ ಸಾಕಷ್ಟು ಶಕ್ತಿ ಸಮಯ ವ್ಯಯವಾಗುತ್ತಿತ್ತು.​ ನನ್ನ ಪತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಹದಿನೈದು ವರ್ಷಗಳಿಂದ ಅವರ ಬರೆವಣಿಗೆಯನ್ನು ಅವರೇ ಟೈಪ್​ ಮಾಡಿಕೊಡುತ್ತಾರೆ. ನಾನು ಪೇಜಿನೇಷನ್ ಮಾಡುತ್ತ ಬಂದೆ. ಈಗ ನಾನೇ ಟೈಪ್ ಮಾಡಿ ನಾನೇ ಲೇಔಟ್ ಮಾಡಿ ಪೇಜಿನೇಷನ್ ಮಾಡಿ ಪುಸ್ತಕವನ್ನು ಮುದ್ರಣಕ್ಕೆ ಕಳಿಸುವಷ್ಟರ ಮಟ್ಟಿಗೆ ತಯಾರಾಗಿದ್ದೇನೆ. ಇಷ್ಟು ವರ್ಷ ಪುಸ್ತಕಗಳನ್ನು ಆಗಸ್ಟ್​ ನಂತರ ಪ್ರಕಟ ಮಾಡುತ್ತಿದ್ದೆ. ಆದರೆ ಆಗಸ್ಟ್​ಗಿಂತ ಮೊದಲೇ ಮಾಡಿದರೆ ನೂರು ಪ್ರತಿಗಳು ಹೆಚ್ಚು ಮಾರಾಟವಾಗುತ್ತವೆ ಎನ್ನುವ ವಿಷಯ ಈ ವರ್ಷ ತಿಳಿಯಿತು. ಇದು ಸರ್ಕಾರದ ಒಂದು ಯೋಜನೆಗೆ ಸಂಬಂಧಿಸಿದ್ದು. ಅಂತೂ ಪ್ರಕಾಶನದ ಕೆಲಸ ಕೈತುಂಬಾ ಇದೆ.

ಬಹಳ ಮುಖ್ಯವಾದ ವಿಚಾರವೆಂದರೆ, ಲಾಕ್​ಡೌನ್​ನಿಂದಾಗಿ ಮನೆಗೆ ಮಂದಿ ಬರುವುದು ಕಡಿಮೆಯಾಯಿತು.  ಪಟ್ಟಣಶೆಟ್ಟರು ಸಹೃದಯರಾಗಿರುವುದರಿಂದ ಅವರನ್ನು ಭೇಟಿಮಾಡಲು, ಬರೆದಿದ್ದನ್ನು ತೋರಿಸಲು, ಏನಾದರೂ ಚರ್ಚಿಸಲು, ಮಾಹಿತಿ ಕೇಳಲು ಜನ ಯಾವಾಗಲೂ ಬರುತ್ತಲೇ ಇರುತ್ತಾರೆ. ಅದರಲ್ಲೂ ನಮ್ಮ ಧಾರವಾಡದಂಥ ಪರಿಸರದಲ್ಲಿ ಹೇಳದೇ ಕೇಳದೇ ಮನೆಗೆ ಬರುವ ಅಭ್ಯಾಸ ಇನ್ನೂ ಇದ್ದೇ ಇದೆ. ಹೇಳಿಕೇಳಿ ಮನೆಗೆ ಬನ್ನಿ ಎನ್ನುವುದು ನಮ್ಮ ಪದ್ಧತಿಯೇ ಅಲ್ಲ. ಅದು ನಾವು ಬದುಕಿದಂಥ ರೀತಿಗೆ ಒಗ್ಗುವಂಥದ್ದೂ ಅಲ್ಲ, ಅಂಥ ವಾತಾವರಣ ನಮ್ಮದು. ಹೀಗಾಗಿ ಸಣ್ಣಪುಟ್ಟ ಆತಿಥ್ಯಗಳನ್ನಾದರೂ ಮಾಡಲೇಬೇಕಾಗುತ್ತದೆ. ಹೀಗಾಗಿ ನನ್ನ ಸಮಯ ಇದಕ್ಕಾಗಿಯೇ ಹೆಚ್ಚು ವ್ಯಯವಾಗುತ್ತಿತ್ತು. ಆದರೆ, ಇದೆಲ್ಲವೂ ಕಳೆದು ಈಗ ನನ್ನ ಸಮಯ ಎನ್ನುವುದು ನನಗೆ ದೊರೆಯುತ್ತಿದೆ.

ಕಳೆದ ವರ್ಷದಿಂದ ಸಣ್ಣಪುಟ್ಟ ಅಡುಗೆ ಮಾಡಿಕೊಳ್ಳುವುದು, ಮನೆ ಸ್ವಚ್ಛ ಮಾಡಿಕೊಳ್ಳುವುದನ್ನು ಇಬ್ಬರೂ ಹಂಚಿಕೊಂಡು ಮಾಡುತ್ತಿದ್ದೇವೆ. ಎಂಬತ್ತೊಂದರ ವಯಸ್ಸಿನಲ್ಲಿಯೂ ಪಟ್ಟಣಶೆಟ್ಟಿಯವರು ಪಾತ್ರೆ ತೊಳೆಯುವುದು, ಜೋಡಿಸುವುದು ಹೀಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇಷ್ಟು ವರ್ಷ ಅವರು ಇಂಥ ಕೆಲಸಗಳನ್ನು ಮಾಡಿರಲೇ ಇಲ್ಲ. ಇದು ಭಾರವೇ ಅಲ್ಲ. ನಮಗೂ ಒಂದು ಬದಲಾವಣೆ ಬೇಕಿತ್ತು. ಸತತ ಕಂಪ್ಯೂಟರ್ ಮುಂದೆ ಎಷ್ಟಂತ ಕುಳಿತುಕೊಳ್ಳುವುದು?

ಒಟ್ಟಾರೆ ಲಾಕ್ಡೌನ್ ನಿಂದಾಗಿ ಪುಸ್ತಕ ಪ್ರಕಟಿಸಲು ಬಹಳ ಸಹಾಯವಾಗಿದೆ. ಆನ್​ಲೈನ್​ ಮಾರಾಟ ಸದ್ಯಕ್ಕೆ ನಿಭಾಯಿಸಲು ನನಗೆ ಸಾಧ್ಯವಿಲ್ಲ. ಆದರೆ ಉತ್ತರ ಕನ್ನಡ, ದಕ್ಷಿಣ ಕನ್ನಡದವರು ಮೊದಲಿನಿಂದಲೂ ಕೇಳಿ ಪುಸ್ತಕ ತರಿಸಿಕೊಳ್ಳುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಹೊಸ ಪುಸ್ತಕ ಬಂದಾಗ ನಾನು ನನ್ನ ಇಡೀ ಪ್ರಕಟಣೆಯ ಲಿಸ್ಟ್ ಕಳಿಸುತ್ತೇನೆ. ಆಗ ಅವರು ಮತ್ತೊಂದೆರಡು ಪುಸ್ತಕಗಳನ್ನು ಆರ್ಡರ್ ಮಾಡುತ್ತಾರೆ. ವಾಟ್ಸಪ್, ಸ್ಪೀಡ್ ಪೋಸ್ಟ್​ನಿಂದಾಗಿ ಮಾರಾಟಕ್ಕೆ ಹೆಚ್ಚೇ ಅನುಕೂಲವಾಗಿದೆ. ಅಂತೂ ಅನನ್ಯ ಪ್ರಕಾಶನ 43ನೇ ಹೊಸ್ತಿಲನ್ನು ತುಳಿದಿದೆ.

ಇದನ್ನೂ ಓದಿ : Books Day 2021: ಮೆಜೆಸ್ಟಿಕ್​, ಬಳೆಪೇಟೆಯ ಫುಟ್​ಪಾತ್​ಗಳೇ ನನ್ನ ಓದಿನ ಹಸಿವನ್ನು ಪೊರೆಯುತ್ತಿದ್ದವು