ಕೆಲವು ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ಮಾಡಿ, ಸರಿಯಾಗಿ ಲಾಭ ಪಡೆದುಕೊಂಡು ಕೈ ತೊಳೆದುಬಿಡುತ್ತಾರೆ. ಹೀಗೆ ಕಳಪೆ ಕಾಮಗಾರಿಯಿಂದ ರಸ್ತೆ, ಸೇತುವೆ ವರ್ಷ ತುಂಬುವ ಮೊದಲೇ ಶಿಥಿಲಗೊಳ್ಳುತ್ತವೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವಾಗ ಪರದಾಡಬೇಕಾಗುತ್ತದೆ. ಇನ್ನೂ ಶಿಥಿಲ ರಸ್ತೆಗಳು ವಾಹನ ಸವಾರರ ಪ್ರಾಣಕ್ಕೇ ಸಂಚಕಾರ ತರುವಂತಿರುತ್ತವೆ. ನಮ್ಮ ದೇಶದಲ್ಲಂತೂ ಇಂತಹ ಘಟನೆಗಳು ವ್ಯಾಪಕವಾಗಿ ನಡೆಯುತ್ತಲೇ ಇರುತ್ತವೆ. ಸದ್ಯ ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದ್ದು, ಅತಿಥಿಗಳು ರಿಬ್ಬನ್ ಕಟ್ ಮಾಡಿ ಸೇತುವೆಯನ್ನು ಉದ್ಘಾಟನೆ ಮಾಡುವ ವೇಳೆಯಲ್ಲಿಯೇ ನೂತನ ಮೇಲ್ಸೇತುವೆ ಕುಸಿದು ಬಿದ್ದಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಒಂದು ವರ್ಷದ ಹಿಂದೆ ನಡೆದಿದ್ದು, ಕಾಂಗೋದ ರಾಜಧಾನಿ ಕಿನ್ಶಾಸಾದ ಮಾಂಟ್ ನಫುಲಾದಲ್ಲಿ ನಿರ್ಮಿಸಲಾಗಿದ್ದ ನೂತನ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡುವ ವೇಳೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯ ಕಾರಣದಿಂದ ಆ ಮೇಲ್ಸೇತುವೆಯೇ ಕುಸಿದು ಬಿದ್ದಿದೆ.
ಇದನ್ನೂ ಓದಿ: ಇದಂತೂ ಮಸ್ತ್ ಐಡಿಯಾ, ಮಗುವಿಗೆ ಔಷಧಿ ಕುಡಿಸಲು ಮನೆಯವರ ಹೊಸ ಟ್ರಿಕ್ ನೋಡಿ
ಈ ಕುರಿತ ವಿಡಿಯೋವನ್ನು @ghantaa ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಒಂದಷ್ಟು ಅತಿಥಿಗಳು ಹೊಸದಾಗಿ ನಿರ್ಮಾಣವಾದ ಮೇಲ್ಸೇತುವೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಹೀಗೆ ಸೇತುವೆಯ ಮೇಲೆ ನಿಂತು ರಿಬ್ಬನ್ ಕಟ್ ಮಾಡಿ ಉದ್ಘಾಟನೆ ಮಾಡುವ ವೇಳೆ, ಇವರೆಲ್ಲರ ಭಾರದ ಒತ್ತಡವನ್ನು ತಡೆಯಲಾರದೆ ಸೇತುವೆ ದೊಪ್ಪನೆ ಕುಸಿದು ಬಿದ್ದಿದೆ.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದು ಸೇತುವೆಯನ್ನು ನೆಲಸಮಗೊಳಿಸಲು ಮಾಡಿದಂತಹ ಉದ್ಘಾಟನಾ ಕಾರ್ಯದಂತಿದೆ ಎಂದು ಈ ದೃಶ್ಯವನ್ನು ಕಂಡು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ