Viral : ಲಂಡನ್ನಲ್ಲಿ ನಡೆದ ‘ಕೂಚಿಪುಡಿ ನೃತ್ಯೋತ್ಸವ- ರಂಗ್ 2022’ ದಲ್ಲಿ ಭಾಗವಹಿಸಿದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಮಗಳು ಅನೌಷ್ಕಾ ಸುನಕ್ ನೃತ್ಯಪ್ರದರ್ಶನದಲ್ಲಿ ಭಾಗವಹಿಸಿದ್ದರು. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರತವು ನನ್ನ ಕುಟುಂಬ ಮತ್ತು ಸಂಸ್ಕೃತಿಯನ್ನು ಬೆಸೆದಿದೆ. ಪ್ರತೀ ವರ್ಷವೂ ನಾನು ಭಾರತಕ್ಕೆ ಬರಲು ಇಷ್ಟಪಡುತ್ತೇನೆ ಎಂದು ಅನೌಷ್ಕಾ ತಿಳಿಸಿದ್ದಾರೆ.
ಪ್ರಸಿದ್ಧ ಕೂಚಿಪುಡಿ ಕಲಾವಿದೆ ಅರುಣಿಮಾ ಕುಮಾರ್ ಅವರು ಈ ನೃತ್ಯೋತ್ಸವವನ್ನು ಲಂಡನ್ನಲ್ಲಿ ಆಯೋಜಿಸಿದ್ದರು. ಬೇರೆ ಬೇರೆ ದೇಶಗಳಿಂದ ಬಂದ 4ರಿಂದ 85 ವರ್ಷದವರೆಗಿನ ನೂರು ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಇಂಡಿಯಾ ಟುಡೇ ಅನೌಷ್ಕಾಳನ್ನು ಮಾತನಾಡಿಸಿದಾಗ, ‘ನಾನು ನೃತ್ಯವನ್ನು ಬಹಳ ಪ್ರೀತಿಸುತ್ತೇನೆ. ಅದರಲ್ಲೂ ಕೂಚಿಪುಡಿ. ಏಕೆಂದರೆ ನೃತ್ಯ ಮಾಡುವಾಗ ನಮ್ಮ ಮನಸ್ಸನ್ನು ಆವರಿಸಿದ ಚಿಂತೆ, ಒತ್ತಡ, ಬೇಸರ ಎಲ್ಲವೂ ತನ್ನಿಂತಾನೇ ದೂರವಾಗುತ್ತದೆ. ಎಲ್ಲವನ್ನೂ ಮರೆತು ನೃತ್ಯವನ್ನಷ್ಟೇ ನಮ್ಮ ಮನಸ್ಸು ಯೋಚಿಸುತ್ತದೆ’ ಎಂದಿದ್ದಾರೆ.
ಅನೌಷ್ಕಾ ನೃತ್ಯ ಪ್ರದರ್ಶನದಲ್ಲಿ ಅವರ ತಾಯಿ ಅಕ್ಷತಾ ಮೂರ್ತಿ ಮತ್ತು ಶಿಕ್ಷಕರು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದರು. ಆಯೋಜಕಿ ಅರುಣಿಮಾ, ‘ಹಿರಿಯ ಕಿರಿಯ ಕಲಾವಿದರ ನೃತ್ಯಪ್ರದರ್ಶನಕ್ಕೆ ರಂಗ್ 2022 ಒಂದು ಉತ್ತಮ ವೇದಿಕೆಯಾಗಿತ್ತು. ಮಕ್ಕಳು, ಹಿರಿಯರು ಮತ್ತು ವಿಶೇಷ ಪರಿಣತಿ ಉಳ್ಳ ಕಲಾವಿದರಿಗೆ ಹೀಗೆ ಒಂದೇ ವೇದಿಕೆ ಸಿಗುವುದು ಅಪರೂಪ. ಕೂಚಿಪುಡಿಯು ಭಾರತದ ವಿವಿಧ ನೃತ್ಯಪ್ರಕಾರಗಳಿಗೆ ಅವಕಾಶವನ್ನು ಕಲ್ಪಿಸಿತು’ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:24 am, Sat, 26 November 22