ಕೆಲಸ ಕಳೆದುಕೊಂಡ ನೋವಿನಲ್ಲಿ ಅಯ್ಯೋ ಇನ್ನು ಮುಂದೆ ಏನು ಮಾಡೋದಪ್ಪಾ ಎಂದು ತಲೆ ಮೇಲೆ ಕೈ ಇಟ್ಟು ಕೂರುವುದೋ ಅಥವಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಮಾಡಿಕೊಳ್ಳುವ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವವರು ಹಲವರಿದ್ದಾರೆ. ಇವರ ನಡುವೆ ಇಲ್ಲೊಬ್ರು ಟೆಕ್ಕಿ ಒಂದು ಕೆಲಸ ಹೋದರೇನಂತೆ ಬದುಕು ನಡೆಸಲು ಸಾವಿರ ದಾರಿಯಿದೆ ಎನ್ನುತ್ತಾ ನಾನೊಬ್ಬ ಇಂಜಿನಿಯರ್ ಬೇರೆ ಕೆಲಸ ಯಾಕ್ ಮಾಡ್ಬೇಕು ಅಂತೆಲ್ಲಾ ಯೋಚನೆ ಮಾಡದೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ಇದೀಗ ತಮ್ಮ ಪರಿಶ್ರಮ, ಪ್ರಯತ್ನದಿಂದ ಹೊಸ ಕಂಪೆನಿಯಲ್ಲಿ ತಮ್ಮಿಷ್ಟದ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಕೆಲಸ ಕಳೆದುಕೊಳ್ಳುವುದರಿಂದ ಹಿಡಿದು ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಸ್ಫೂರ್ತಿದಾಯಕ ಕಥೆಯನ್ನು ಇವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದು ಚೆನ್ನೈನಲ್ಲಿ ಇಂಜಿನಿಯರ್ ಆಗಿದ್ದ ರಿಯಾಜುದ್ದೀನ್ ಅವರ ಸ್ಫೂರ್ತಿದಾಯಕ ಕಥೆ. ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ರಿಯಾಜುದ್ದೀನ್ ಅವರನ್ನು ಇದ್ದಕ್ಕಿದ್ದಂತೆ ಕೆಲಸದಿಂದ ವಜಾಗೊಳಿಸುತ್ತಾರೆ. ಇದ್ದ ಕೆಲಸವನ್ನು ಕಳೆದುಕೊಂಡು ಜೀವನ ನಡೆಸಲು ಕಷ್ಟಕರವಾದಾಗ ಬದುಕಲು ಸಾವಿರ ದಾರಿಯಿದೆ ಎನ್ನುತ್ತಾ ದೃಢ ನಿರ್ಧಾರವನ್ನು ಮಾಡಿ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಾಳ್ಮೆ, ಕಠಿಣ ಪರಿಶ್ರಮ, ಸತತ ಪ್ರಯತ್ನ ಈ ಎಲ್ಲದರ ಫಲವಾಗಿ ಇದೀಗ ರಿಯಾಜುದ್ದೀನ್ ಒಂದೊಳ್ಳೆ ಕಂಪೆನಿಯಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದು, ತಾವು ನಡೆದ ಈ ಕಠಿಣ ಹಾದಿಯ ಕಥೆಯನ್ನು ಲಿಂಕ್ಡ್‌ಇನ್ ನಲ್ಲಿ ಶೇರ್ ಮಾಡಿದ್ದಾರೆ.
“ಚೇತರಿಕೆಯ ಪ್ರಯಾಣ, ಸ್ವಿಗ್ಗಿಗೆ ನನ್ನ ವಿದಾಯ; ಕೆಲವು ತಿಂಗಳ ಹಿಂದೆ ನನ್ನನ್ನು ಕೆಸಲದಿಂದ ವಜಾಗೊಳಿಸಿದಾಗ ನನ್ನ ಜೀವನವು ಅನಿರೀಕ್ಷಿತ ತಿರುವನ್ನು ಪಡೆಯಿತು. ಅಂದುಕೊಂಡ ಕೆಲಸ ಸಿಗದಿದ್ದಾಗ, ನಾನು ತೀರಾ ಆರ್ಥಿಕ ಸಂಕಷ್ಟಕ್ಕೆ ಒಳಗಾದೆ. ಆ ಸಂದರ್ಭದಲ್ಲಿ ಜೀವನ ನಡೆಸಲು, ಒಂದಿಷ್ಟು ಸಂಪಾದನೆ ಮಾಡಲು ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಹಗಲು ರಾತ್ರಿ, ಮಳೆ-ಉರಿ ಬಿಸಿಲು ಈ ಎಲ್ಲದರ ಮಧ್ಯೆ ಡೆಲಿವರಿ ಕೊಟ್ಟು ಬರುತ್ತಿದ್ದ ಕ್ಷಣಗಳು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಪ್ರತಿಯೊಂದು ಫುಡ್ ಡೆಲಿವರಿಯಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣ ನನ್ನ ಚೇತರಿಕೆಯ ಪ್ರಯಾಣದ ಹೆಜ್ಜೆಯಾಗಿತ್ತು. ನಾನು ಮುಳುಗಿ ಹೋದೆನು ಎಂದ ಸಂದರ್ಭದಲ್ಲಿ ಈಜುತ್ತಾ ದಡ ಸೇರಲು ಸ್ವಿಗ್ಗಿ ನನಗೆ ಸಹಾಯ ಮಾಡಿತು. ಸ್ವಿಗ್ಗಿ ಹಣ ಸಂಪಾದನೆಗಿಂತ ಹೆಚ್ಚಿನದ್ದನ್ನು ನನಗೆ ನೀಡಿದೆ. ಇದು ನಾನಗೆ ತಾಳ್ಮೆ, ಹಣದ ಮೌಲ್ಯ, ನಮ್ರತೆ ಸೇರಿದಂತೆ ಅಮೂಲ್ಯ ಪಾಠವನ್ನು ಕಲಿಸಿದೆ. ಈಗ ನಾನು ಹೊಸ ಕಂಪೆನಿಯಲ್ಲಿ ನನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದು, ನನ್ನ ಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿದ್ದ ಸ್ವಿಗ್ಗಿಗೆ ನನ್ನ ಧನ್ಯವಾದಗಳು” ಎಂಬ ಸುದೀರ್ಘ ಬರಹವನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತಡವಾಗಿ ಬಂದಿದ್ದಕ್ಕೆ ಬಾಯಿಗೆ ಬಂದಂತೆ ಬೈದ ಮಹಿಳೆ, ಮನನೊಂದು ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 24 ಸಾವಿರಕ್ಕೂ ಅಧಿಕ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು, ನಿಜಕ್ಕೂ ಇವರ ಈ ಕತೆ ನಮಗೆಲ್ಲರಿಗೂ ಸ್ಫೂರ್ತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ