Ukraine Crisis: ಈ ಬೆಕ್ಕು ಸಂಗ್ರಹಿಸಿದ್ದು ಬರೋಬ್ಬರಿ ₹ 7 ಲಕ್ಷಕ್ಕೂ ಅಧಿಕ ದೇಣಿಗೆ; ಎಲ್ಲವೂ ಸಂಕಷ್ಟದಲ್ಲಿರುವ ಸ್ನೇಹಿತರಿಗಾಗಿ! 

| Updated By: shivaprasad.hs

Updated on: Apr 02, 2022 | 11:54 AM

Chill Cat Stepan: ಸಾಮಾಜಿಕ ಜಾಲತಾಣಗಳಲ್ಲಿ ‘ಸ್ಟೀಪನ್’ ಫುಲ್ ಫೇಮಸ್. ಇನ್​ಸ್ಟಾಗ್ರಾಂನಲ್ಲಿ ಆ ಬೆಕ್ಕಿಗೆ 12 ಲಕ್ಷಕ್ಕೂ ಅಧಿಕ ಫಾಲೋವರ್​ಗಳಿದ್ದಾರೆ. ಯುದ್ಧದಿಂದ ಸಮಸ್ಯೆ ಎದುರಿಸುತ್ತಿರುವ ತನ್ನ ಸ್ನೇಹಿತರಿಗೆ ಸಹಾಯ ಮಾಡಲು ಬೆಕ್ಕು ದೇಣಿಗೆ ಸಂಗ್ರಹಿಸಿದೆ!

Ukraine Crisis: ಈ ಬೆಕ್ಕು ಸಂಗ್ರಹಿಸಿದ್ದು ಬರೋಬ್ಬರಿ ₹ 7 ಲಕ್ಷಕ್ಕೂ ಅಧಿಕ ದೇಣಿಗೆ; ಎಲ್ಲವೂ ಸಂಕಷ್ಟದಲ್ಲಿರುವ ಸ್ನೇಹಿತರಿಗಾಗಿ! 
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ ಸ್ಟೀಪನ್
Follow us on

ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟು (Russia Ukraine Conflict) ಪ್ರಾರಂಭವಾಗಿ ದೀರ್ಘ ಸಮಯವಾಗಿದೆ. ಈ ಯುದ್ಧದಿಂದ ಸಾಮಾನ್ಯ ಜನರಿಗೆ ಹೇಗೆ ಸಮಸ್ಯೆಯಾಗಿದೆಯೋ ಹಾಗೆಯೇ ಮೂಕ ಪ್ರಾಣಿಗಳಿಗೂ ಕಷ್ಟ ಅನುಭವಿಸುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿಗಳನ್ನು ನೀವು ಓದಿರುತ್ತೀರಿ. ಬಹಳಷ್ಟು ಜನರು ತಮ್ಮ ಸಾಕುಪ್ರಾಣಿಗಳನ್ನು ಬಿಟ್ಟುಬರಲು ಒಪ್ಪದೇ ಅಲ್ಲಿಯೇ ಉಳಿದುಕೊಂಡಿದ್ದಾರೆ. ಜತೆಗೆ ಪ್ರಾಣಿ ಸಾಕಣಾ ಕೇಂದ್ರಗಳನ್ನು ನೋಡಿಕೊಳ್ಳುವವರು ಕೂಡ ತಮ್ಮ ಪ್ರಾಣಿಗಳೊಂದಿಗೆ ಅಲ್ಲಿಯೇ ಉಳಿದಿದ್ದಾರೆ. ಆದರೆ ಯುದ್ಧದ ಕಾರಣದಿಂದ ಅವುಗಳ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಮಾರ್ಗಗಳ ಮೂಲಕ ವಿಶ್ವಾದ್ಯಂತ ಇರುವ ಪ್ರಾಣಿಪ್ರಿಯರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಮೂಲಕ ಮೂಕಪ್ರಾಣಿಗಳ ನೆರವಿಗೆ ಜನರು ನಿಲ್ಲುತ್ತಿದ್ದಾರೆ. ಈ ನಡುವೆ ಒಂದು ವಿನೂತನ ವಿಧಾನದ ಮೂಲಕ ಒಂದು ಬೆಕ್ಕಿನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲಾಗಿದೆ. ವಿಶೇಷವೆಂದರೆ ಇದರಿಂದ ಸಂಗ್ರಹವಾದ ಮೊತ್ತ 7 ಲಕ್ಷ ರೂಗಳಿಗೂ ಹೆಚ್ಚು. ಆ ಬೆಕ್ಕಿನ ವಿಶೇಷವೇನು? ಸಂಗ್ರಹವಾದ ಹಣ ಯಾವುದಕ್ಕೆ ಬಳಸಲಾಗುತ್ತದೆ? ಕುತೂಹಲಕರ ಮಾಹಿತಿ ಇಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ವೈನ್ ಗ್ಲಾಸ್ ಪಕ್ಕ ಕುಳಿತ ಒಂದು ಬೆಕ್ಕಿನ ಚಿತ್ರವನ್ನು ಮೀಮ್​ಗಳಲ್ಲಿ ನೋಡಿರಬಹುದು. ಪಾಪ್​ಕಾರ್ನ್ ಮುಂದೆ ಕುಳಿತಿರುವ ಅಥವಾ ವಿಧವಿಧದ ವೈನ್ ಗ್ಲಾಸ್ ಪಕ್ಕ ಪೋಸ್ ನೀಡುತ್ತಾ ಕುಳಿತುಕೊಳ್ಳುವ ಈ ಬೆಕ್ಕಿನ ಹೆಸರು ಸ್ಟೀಪನ್. ಇದರ ಹೆಸರಿನಲ್ಲಿ ಇನ್​ಸ್ಟಾಗ್ರಾಂ, ಟ್ವಿಟರ್​ ಮೊದಲಾದ ಕಡೆಗಳಲ್ಲಿ ಪ್ರತ್ಯೇಕ ಖಾತೆಗಳೇ ಇವೆ.

ಸ್ಟೀಪನ್​ನ ಒಂದು ವಿಡಿಯೋ:

ಇನ್​ಸ್ಟಾಗ್ರಾಂನಲ್ಲಿ ಈ ಬೆಕ್ಕನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 12 ಲಕ್ಷಕ್ಕೂ ಅಧಿಕ ಎಂದರೆ ನಿಮಗೆ ಅಚ್ಚರಿಯಾಗಬಹುದು. ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ತನ್ನ ಸಹವರ್ತಿ ಪ್ರಾಣಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ‘ಸ್ಟೀಪನ್’ ದೇಣಿಗೆ ಸಂಗ್ರಹಿಸಿದೆ. ಇದಕ್ಕೆ ವಿಶ್ವಾದ್ಯಂತ ಇರುವ ಜನರು ಸಹಾಯ ಮಾಡಿದ್ದಾರೆ.

ಸ್ಟೀಪನ್ ಆರಂಭಿಸಿದ ದೇಣಿಗೆ ಕಾರ್ಯದಲ್ಲಿ ಒಟ್ಟು 10,000 ಡಾಲರ್ ಸಂಗ್ರಹವಾಗಿದೆ. ಅರ್ಥಾತ್ ಇದರ ಮೊತ್ತ ಸುಮಾರು 7.5 ಲಕ್ಷ ರೂಗಳಿಗೂ ಅಧಿಕ. ಕಳೆದ ವಾರದಿಂದ ದೇಣಿಗೆ ಸಂಗ್ರಹ ಆರಂಭವಾಗಿದ್ದು, ‘ಪೇಪಲ್’ ಮಾಧ್ಯಮದ ಮೂಲಕ ಹಣ ಸಂಗ್ರಹಿಸಲಾಗಿದೆ.

ಸಂಗ್ರಹವಾದ ದೇಣಿಗೆ ಯಾವುದಕ್ಕೆ ಬಳಕೆ?

ಸ್ಟೀಪನ್ ಸಂಗ್ರಹಿಸಿದ ಹಣವನ್ನು ಅಗತ್ಯವಿರುವ ಸಾಕು ಪ್ರಾಣಿಗಳಿಗೆ ನೀಡಲಾಗುತ್ತದೆ. ಅಲ್ಲದೇ ಉಕ್ರೇನ್​ನಲ್ಲಿ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸಿ ನೋಡಿಕೊಳ್ಳುವ ಸಂಸ್ಥೆಗಳಿಗೆ ಹಾಗೂ ಪ್ರಾಣಿ ಸಂಗ್ರಹಾಲಯಗಳಿಗೆ ಹಣ ಸಂದಾಯವಾಗಲಿದೆ. ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಬಿಕ್ಕಟ್ಟು ತಲೆದೋರಿರುವ ಉಕ್ರೇನ್​ನಲ್ಲಿ ಪ್ರಾಣಿಗಳ ಜೀವಕ್ಕೆ ಮಿಡಿಯುವ ಸಲುವಾಗಿ ನಡೆಯುತ್ತಿರುವ ಈ ಕಾರ್ಯಕ್ಕೆ ವಿಶ್ವದ ಮೂಲೆಮೂಲೆಯ ಪ್ರಾಣಿಪ್ರಿಯರು ಕೈಜೋಡಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ಸಂಗ್ರಹವಾದ ಮೊತ್ತದ ಬಗ್ಗೆ ಸ್ಟೀಪನ್ ಪೋಸ್ಟ್:

ಭಾರತ ಸರ್ಕಾರ ಉಕ್ರೇನ್​ನಿಂದ ಮರಳುವ ಪ್ರಜೆಗಳಿಗೆ ಸಾಕು ಪ್ರಾಣಿಗಳನ್ನು ಮರಳಿ ತರಲು ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಹೆದ್ದಾರಿಗಳಲ್ಲಿ ವಿಧಿಸುವ ಟೋಲ್​ಗಳನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

ಯಾವ ಕ್ಷೇತ್ರದವರು ಯಾವ ಬಣ್ಣದ ಹೆಲ್ಮೆಟ್ ಧರಿಸುತ್ತಾರೆ? ಭಾರತದಲ್ಲಿ ಇದು ಕಡ್ಡಾಯವೇ? ಇಲ್ಲಿದೆ ಕುತೂಹಲಕರ ಮಾಹಿತಿ

Published On - 11:52 am, Sat, 2 April 22