
ಚೀನಾ, ಜೂನ್ 27: ಮದುವೆಯೆನ್ನುವುದು (marriage) ಪ್ರತಿಯೊಬ್ಬರ ಜೀವನದ ಮಹತ್ತರದ ಘಟ್ಟ ಹಾಗೂ ವಿಶೇಷ ದಿನ ಕೂಡ ಹೌದು. ಬಹುತೇಕರು ತಮ್ಮ ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಸಾಲ ಮಾಡಿದ್ರು ಸರಿಯೇ ಮದುವೆಗಾಗಿ ಲಕ್ಷಾನುಗಟ್ಟಲೇ ಖರ್ಚು ಮಾಡಿ ತಾವು ಅಂದುಕೊಂಡ ರೀತಿಯಲ್ಲೇ ಹೊಸ ಬದುಕಿಗೆ ಕಾಲಿಡುತ್ತಾರೆ. ಆದ್ರೆ ಶ್ವಾನಗಳ ಸಮ್ಮುಖದಲ್ಲಿ ಮದುವೆಯಾಗುವುದನ್ನು ನೀವೇನಾದ್ರೂ ನೋಡಿದ್ದೀರಾ. ಆದರೆ ಈ ಚೀನಾದ (China) ಯಾಂಗ್ ಹಾಗೂ ಝಾವೋ (Yang and Zhao) ಎನ್ನುವ ಜೋಡಿಯೂ ಇನ್ನೂರಕ್ಕೂ ಹೆಚ್ಚು ಶ್ವಾನಗಳ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಅಪರೂಪದ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಗಳ ಕಾಲ ಪ್ರೀತಿಸಿದ ಜೋಡಿಯೊಂದು ನಿರಾಶ್ರಿತ ಶ್ವಾನಗಳ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸ್ವತಃ ಇವರೇ ರಕ್ಷಿಸಿದ 200 ಕ್ಕೂ ಹೆಚ್ಚು ಶ್ವಾನಗಳು ಅತಿಥಿಗಳಾಗಿ ಯಾಂಗ್ ಹಾಗೂ ಝಾವೋ ಜೋಡಿಯ ಮದುವೆಗೆ ಆಗಮಿಸಿದ್ದವು. ಹೌದು ಉದ್ಯಮಿಯಾಗಿದ್ದ 31 ವರ್ಷದ ಯಾಂಗ್ ನಷ್ಟವನ್ನು ಅನುಭವಿಸಿ ಉದ್ಯಮವನ್ನು ತೊರೆದು ನಿರಾಶ್ರಿತ ಶ್ವಾನಗಳಿಗೆ ಆಶ್ರಯ ನೀಡಿದ ವ್ಯಕ್ತಿಯ ಕಥೆಯಿದು. ಇಂದು ಆ ಶ್ವಾನಗಳೇ ಈ ವ್ಯಕ್ತಿಯ ಮದುವೆಯ ಮುಖ್ಯ ಅತಿಥಿಗಳು ಎಂದರೆ ಅಚ್ಚರಿಯೆನಿಸಬಹುದು.
31 ವರ್ಷದ ಯಾಂಗ್ ಒಂದು ಕಾಲದಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಆದರೆ, 2020 ರ ವೇಳೆ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಕಂಡರು. ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಸಂಬಳ ನೀಡಲು ಅವರ ಬಳಿ ಹಣವಿರಲಿಲ್ಲ. ಈ ಕಾರಣದಿಂದಾಗಿ ತನ್ನ ಸ್ವಂತ ಮನೆ ಹಾಗೂ ಎರಡು ಕಾರುಗಳನ್ನು ಮಾರಿ ಸಂಬಳ ನೀಡಲು ಮುಂದಾದರು. ತನ್ನ ವ್ಯವಹಾರದಿಂದ ನಷ್ಟ ಅನುಭವಿಸಿದ ಯಾಂಗ್ ಅವರು ಸಂಪೂರ್ಣವಾಗಿ ನಿರಾಶ್ರಿತ ಬೀದಿ ನಾಯಿಗಳಿಗೆ ಆಸರೆ ನೀಡಲು ಮುಂದಾದರು.
ಬಾಲ್ಯದಲ್ಲಿಯೇ ಅನಾರೋಗ್ಯದ ಕಾರಣ ಯಾಂಗ್ ತನ್ನ ಐದು ನಾಯಿಮರಿಗಳನ್ನು ಕಳೆದುಕೊಂಡಿದ್ದು, ಅದುವೇ ಈ ಕೆಲಸಕ್ಕೆ ಪ್ರೇರಣೆಯಾಯಿತು. ಬೀದಿ ಶ್ವಾನಗಳನ್ನು ರಕ್ಷಿಸಿ ಅವುಗಳ ಆಸರೆಗೆ ಮುಂದಾಗಿದ್ದು, ಆಶ್ರಯತಾಣವನ್ನು ತೆರೆದರು. ಹತ್ತೇ ಹತ್ತು ಶ್ವಾನಗಳಿಂದ ಪ್ರಾರಂಭವಾದ ಈ ಆಶ್ರಯತಾಣದಲ್ಲಿ ಇಂದು ಇನ್ನೂರಕ್ಕೂ ಹೆಚ್ಚು ಶ್ವಾನಗಳು ಇವೆ. ಈ ಶ್ವಾನಗಳನ್ನು ನೋಡಿಕೊಳ್ಳಲು ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಯಿತು.
2022 ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ 25 ವರ್ಷದ ಝಾವೋ ಸ್ವಯಂಸೇವಕರಾಗಿ ಸೇರಿಕೊಂಡರು. ದಿನ ಕಳೆಯುತ್ತ ಹೋದಂತೆ ಯಾಂಗ್ ಹಾಗೂ ಝಾವೋ ನಡುವಿನ ಪರಿಚಯವು ಪ್ರೀತಿಯಾಗಿ ಬದಲಾಯಿತು. ಇಬ್ಬರೂ ಜೊತೆ ಸೇರಿ ಬೀದಿ ನಾಯಿಗಳನ್ನು ರಕ್ಷಿಸುವ ಅಭಿಯಾನದಲ್ಲಿ ಕೈಜೋಡಿಸಿದರು. ಪರಸ್ಪರ ಒಬ್ಬರನ್ನೊಬ್ಬರು ಮೂರು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿಯೂ ಮೇ 25 ರಂದು ಮದುವೆಯಾಗಲು ನಿರ್ಧರಿಸಿದರು. ತಮ್ಮ ಮದುವೆಗಾಗಿ ಆರಿಸಿಕೊಂಡದ್ದು ಈ ಶ್ವಾನಗಳ ಆಶ್ರಯತಾಣವನ್ನು. ತಾವೇ ಖುದ್ದಾಗಿ ಶ್ವಾನಗಳನ್ನು ರಕ್ಷಿಸಿ, ಆಸರೆ ನೀಡಿದ ಈ ತಾಣವನ್ನೇ ವಿವಾಹದ ಸ್ಥಳವನ್ನಾಗಿ ಬದಲಾಯಿಸಿಕೊಳ್ಳುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
8days sg ಹೆಸರಿನ ಖಾತೆಯಲ್ಲಿ ಚೀನಾದ ಜೋಡಿಯ ಈ ವಿಶಿಷ್ಟ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಪೋಸ್ಟ್‌ವೊಂದು ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಈ ಜೋಡಿಗೆ ಶ್ವಾನಗಳ ಸಂಪೂರ್ಣ ಆಶೀರ್ವಾದ ಇರುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಇಂತಹ ವಿಶಿಷ್ಟ ಮದುವೆಯನ್ನು ನಾನು ಕೇಳಿರಲೇ ಇಲ್ಲ. ಆದರೆ ಇದು ಕಡಿಮೆ ಖರ್ಚು ಹಾಗೂ ವಿಶೇಷತೆಯಿಂದ ಕೂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮದುವೆಗೆ ಇದಕ್ಕಿಂತ ಉತ್ತಮ ಸ್ಥಳ ಯಾವುದಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ