Viral : ನನಗೆ ಇಲ್ಲಿ ಕೆಲ್ಸ ಮಾಡ್ಲಿಕ್ಕೆ ಇಷ್ಟ ಇಲ್ಲ : ಕೆಲಸಕ್ಕೆ ಸೇರಿದ ಮೊದಲ ದಿನವೇ ಜಾಬ್ ರಿಸೈನ್ ಮಾಡಿದ ಉದ್ಯೋಗಿ
ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರ ಸಂಖ್ಯೆ ದೊಡ್ಡದಿದೆ. ಹೌದು, ಈಗಿನ ಕಾಲದಲ್ಲಿ ಕೆಲಸಗಿಟ್ಟಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿದ್ದು, ಈ ಎಲ್ಲದರ ನಡುವೆ ಕೆಲಸಕ್ಕೆ ಸೇರಿದ ಮೊದಲ ದಿನವೇ ಉದ್ಯೋಗಿಯೊಬ್ಬರು ರಿಸೈನ್ ಮಾಡಿದ್ದಾರೆ. ಈ ಕುರಿತಾದ ಪೋಸ್ಟ್‌ವೊಂದನ್ನು ಹೆಚ್‌ಆರ್ ಒಬ್ಬರು ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಕೆಲಸ ತೊರೆಯುವ ಮುನ್ನ ಉದ್ಯೋಗಿ ನೀಡಿದ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ.

ಉದ್ಯೋಗ (job) ಎಲ್ಲರಿಗೂ ಕೂಡ ಅತ್ಯವಶ್ಯಕ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಪಡೆಯುವುದು ಕಷ್ಟ. ಹೀಗಾಗಿ ಹೆಚ್ಚಿನವರು ತಾವು ಮಾಡುತ್ತಿರುವ ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಸರಿಯೇ, ಕೆಲಸ ಬಿಟ್ಟರೆ ಬೇರೆ ಉದ್ಯೋಗ ಸಿಗೋದು ಕಷ್ಟ ಎನ್ನುವ ಕಾರಣಕ್ಕೆ ಅದನ್ನೇ ಮಾಡಿಕೊಂಡು ಹೋಗುತ್ತಾರೆ. ಆದರೆ ನೋಯ್ಡಾ (Noida) ಮೂಲದ ಕಂಪನಿಯ ಹೆಚ್‌ಆರ್ ಒಬ್ಬರು ತಮ್ಮ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ವ್ಯಕ್ತಿಯೊಬ್ಬರು ವಿಚಿತ್ರವಾಗಿ ವರ್ತಿಸಿರುವ ಬಗ್ಗೆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕೆಲಸಕ್ಕೆ ಸೇರಿದ ಮೊದಲ ದಿನವೇ ನನಗೆ ಈ ಕೆಲಸ ಇಷ್ಟವಿಲ್ಲ ಎಂದು ಹೇಳಿ ಉದ್ಯೋಗಿಯೊಬ್ಬರು ರಿಸೈನ್ ಮಾಡಿ ಹೋಗಿದ್ದಾರಂತೆ. ಈ ಬಗೆಗಿನ ಲಿಂಕ್ಡ್ ಇನ್ (LinkedIn) ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೆಚ್‌ಆರ್ ಖುಷಿ ಚೌರಾಸಿಯಾಯವರು ತಮ್ಮ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಕೆಲಸಕ್ಕೆ ಸೇರಿದ ಮೊದಲ ದಿನವೇ ಉದ್ಯೋಗಿಯೂ ತನ್ನೊಂದಿಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಹೆಚ್‌ಆರ್, ಸೇಲ್ಸ್ ಕೆಲಸಕ್ಕೆ ಬಂದಿದ್ದ ಉದ್ಯೋಗಿ, ತನ್ನ ಮೊದಲ ದಿನದ ಕೆಲಸ ಮುಗಿಯುತ್ತಿದ್ದಂತೆ ನನಗೆ ಮೆಸ್ಸೇಜ್ ಕಳುಹಿಸಿದ್ದು, ನನಗೆ ಈ ಕೆಲಸ ಇಷ್ಟವಿಲ್ಲ ಎಂದಿದ್ದಾರೆ. ಕೆಲಸ ಸ್ವಲ್ಪ ಚಾಲೆಂಜಿಂಗ್ ಆಗಿತ್ತು. ಈ ಬಗ್ಗೆ ಸಂದರ್ಶನದ ಸಂದರ್ಭದಲ್ಲೇ ಹೇಳಲಾಗಿತ್ತು. ಪ್ರಾರಂಭದಲ್ಲಿ ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ್ದರು ಎಂದಿದ್ದಾರೆ.
ಅಷ್ಟೇ ಅಲ್ಲದೇ, ಯಾವುದೇ ಉದ್ಯೋಗಿ ಮೊದಲ ದಿನವೇ ಎಲ್ಲಾ ಕೆಲಸವನ್ನು ಕಲಿಯಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದಿರಬೇಕು. ಉದ್ಯೋಗಿ ಎಲ್ಲಾ ಸೌಲಭ್ಯವನ್ನು ಪಡೆಯಲು, ಹಾಗೂ ಸಂತೋಷಕರ, ಆರಾಮದಾಯಕ ವಾತಾವರಣವನ್ನು ಕಂಪನಿ ಒದಗಿಸಲು ಸಾಧ್ಯವಿಲ್ಲ. ಕೆಲಸ ಮಾಡಲು ಸಮಯ, ಶಕ್ತಿ ಹಾಗೂ ಮನಸ್ಸು ಕೊಟ್ಟರೆ ಮಾತ್ರ ಎಲ್ಲವೂ ಆರಾಮದಾಯಕವಾಗುತ್ತದೆ. ಕೆಲಸಕ್ಕೆ ಸೇರುವ ಮೊದಲೇ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಒಳ್ಳೆಯ. ಒಂದು ವೇಳೆ ಕೆಲಸ ಬಿಡಲು ನಿರ್ಧರಿಸಿದಾಗ ಈ ಬಗ್ಗೆ ಹೆಚ್ ಆರ್ ಜೊತೆ ಮಾತುಕತೆ ನಡೆಸಬೇಕು ಎಂದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಖುಷಿ ಚೌರಾಸಿಯಾ ಹೆಸರಿನ ಲಿಂಕ್ಡ್‌ಇನ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ಪೋಸ್ಟ್‌ಗೆ ಬಳಕೆದಾರರು ಕಾಮೆಂಟ್ ಮಾಡಿದ್ದು ಉದ್ಯೋಗಿಯ ನಿರ್ಧಾರವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಮೊದಲ ದಿನವೇ ಈ ಕೆಲಸ ಮಾಡಲು ನಮ್ಮಿಂದ ಸಾಧ್ಯವೇ, ಈ ಕೆಲಸ ನನಗೆ ಸೂಕ್ತವೇ ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಈ ಅಭ್ಯರ್ಥಿಯ ಪ್ರಾಮಾಣಿಕತೆಗೆ ನನ್ನದೊಂದು ಮೆಚ್ಚುಗೆ ಇರಲಿ, ತಮಗೆ ಏನು ಬೇಕು ಬೇಡ ಎನ್ನುವ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಕೆಲಸಕ್ಕೆ ಸೇರಿದರೆ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು, ಇಲ್ಲದಿದ್ದರೆ ಕೆಲಸಕ್ಕೆ ಸೇರಲೇಬಾರದು. ಮೊದಲ ದಿನವೇ ರಾಜೀನಾಮೆ ನೀಡುವುದು ಹೇಡಿಯ ಲಕ್ಷಣ ಎಂದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Fri, 27 June 25








