Viral: ತಪ್ಪಾಗಿ ಬೇರೊಂದು ವಿಮಾನ ಹತ್ತಿದ ಜೋಡಿ; ಇಳಿದಿದ್ದು ಬರೋಬ್ಬರಿ 1,200 ಕಿಮೀ ದೂರದಲ್ಲಿ! ಆಮೇಲೇನಾಯ್ತು?
ಜೋಡಿಯೊಂದು ತಪ್ಪಾಗಿ ಬೇರೊಂದು ವಿಮಾನ ಹತ್ತಿ ತಾವು ತಲುಪಬೇಕಾದ ಸ್ಥಳಕ್ಕಿಂತ 1,200 ಕಿಲೋಮೀಟರ್ ದೂರದ ಸ್ಥಳದಲ್ಲಿ ಇಳಿದಿದ್ದಾರೆ. ಈ ಘಟನೆ ನಡೆದಿದ್ದು ಹೇಗೆ? ಏಕೆ ಯಾರಿಗೂ ಅಸಲಿ ವಿಷಯ ತಿಳಿಯಲಿಲ್ಲ? ಇಲ್ಲಿದೆ ವಿವರ.
ಸಾಮಾನ್ಯವಾಗಿ ಎಲ್ಲರಿಗೂ ಬಸ್ಗಳನ್ನು ಏರುವಾಗ ಗೊಂದಲವಾಗುತ್ತದೆ. ತಾವು ಹೋಗುವ ಪ್ರದೇಶದ ಬಸ್ಸಿನ ಬದಲಾಗಿ ಮತ್ತೊಂದು ಬಸ್ಅನ್ನು ಗೊಂದಲಗೊಂಡು ಹತ್ತುವುದುಂಟು. ಆದರೆ ಕೆಲವೇ ನಿಮಿಷಗಳಲ್ಲಿ ಸತ್ಯ ಅರಿವಾಗಿ ಒಂದೆರಡು ನಿಲ್ದಾಣಗಳ ಒಳಗೆ ಇಳಿದುಕೊಳ್ಳಬಹುದು. ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ಹೀಗಾದರೆ ಹೇಗಾಗಬೇಡ? ಅಚ್ಚರಿಯಾದರೂ ಇದು ಸತ್ಯ. ಜೋಡಿಯೊಂದು ತಪ್ಪಾಗಿ ಬೇರೊಂದು ವಿಮಾನ ಹತ್ತಿ ತಾವು ತಲುಪಬೇಕಾದ ಸ್ಥಳಕ್ಕಿಂತ 1,200 ಕಿಲೋಮೀಟರ್ ದೂರದ ಸ್ಥಳದಲ್ಲಿ ಇಳಿದಿದ್ದಾರೆ. 33 ವರ್ಷದ ಎಲಿಸ್ ಮಾಲಿಯಾ ಮತ್ತು 41 ವರ್ಷದ ಜೆಸ್ಸಿ ಜೆಜೆಕ್ವೆಲ್ ಫ್ರಾನ್ಸ್‌ನಲ್ಲಿ (France) ರಜಾದಿನಗಳನ್ನು ಕಳೆದು ಮನೆಗೆ ಹೋಗುವಾಗ ತಪ್ಪಾದ ವಿಮಾನವನ್ನು ಹತ್ತಿದ್ದಾರೆ. ಪರಿಣಾಮ ಬ್ರಿಟನ್ನಿಂದ (Britain) 800 ಮೈಲುಗಳಷ್ಟು ದೂರದ ಅರ್ಥಾತ್ 1,200 ಕಿಲೋ ಮೀಟರ್ ದೂರದ ಊರಿನಲ್ಲಿ ಅವರು ಇಳಿದಿದ್ದಾರೆ.
ದಂಪತಿಗಳು ಮಾರ್ಸಿಲ್ಲೆಯಿಂದ ರಯಾನ್ಏರ್ ವಿಮಾನವನ್ನು ಹತ್ತಿದ್ದರು. ಆದರೆ ಆ ವಿಮಾನ ಸ್ಪೇನ್‌ನ ಮ್ಯಾಡ್ರಿಡ್‌ಗೆ ಹೋಗುತ್ತಿದೆ ಎನ್ನುವುದು ಅವರಿಗೆ ತಿಳಿಯಲಿಲ್ಲ. ಬಹಳ ಹೊತ್ತಿನ ನಂತರ ಗಗನಸಖಿಯರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು, ವಿಮಾನದಲ್ಲಿ ಸೂಚನೆಗಳು ಸ್ಪ್ಯಾನಿಷ್ ಭಾಷೆಯಲ್ಲಿ ಇರುವುದನ್ನು ದಂಪತಿಗಳು ಗಮನಿಸಿದ್ದಾರೆ. ಇದರಿಂದ ಜೋಡಿಗೆ ತಾವು ತಪ್ಪಾದ ವಿಮಾನ ಹತ್ತಿರುವುದರ ಅರಿವಾಗಿದೆ.
ನಂತರ ಎಲಿಸ್ ಹಾಗೂ ಜೆಸ್ಸಿ ಜೋಡಿ ವಿಮಾನದ ಸಿಬ್ಬಂದಿಯಲ್ಲಿ ಇದು ಯಾವ ಪ್ರದೇಶಕ್ಕೆ ತೆರಳುತ್ತಿರುವ ವಿಮಾನ ಎಂದು ಪ್ರಶ್ನಿಸಿದ್ದಾರೆ. ಅವರು ಮ್ಯಾಡ್ರಿಡ್ ಎಂದು ಉತ್ತರಿಸಿದ್ದಾರೆ. ಬೋರ್ಡಿಂಗ್‌ಗೆ ಮುನ್ನ ಮೂರು ಬಾರಿ ಸ್ಕ್ಯಾನ್ ಮಾಡಿದ ನಂತರವೂ- ಅಚ್ಚರಿಯೆಂಬಂತೆ ಅವರ ಬೋರ್ಡಿಂಗ್ ಪಾಸ್‌ಗಳು ತಪ್ಪಾಗಿವೆ ಎಂದು ಊಹಿಸಿದ್ದಾರೆ.
ನಾವು ತಪ್ಪಾದ ವಿಮಾನವನ್ನು ಏರಿದ್ದು ತಿಳಿದು ದಿಗ್ಭ್ರಮೆಯಾಯಿತು ಎಂದಿದ್ದಾರೆ ಎಲಿಸ್. ಅಲ್ಲದೇ ವಿಮಾನದ ಸಿಬ್ಬಂದಿಗಳಿಗೂ ಶಾಕ್ ಆಯಿತು. ನಾವು ತಪ್ಪಾದ ವಿಮಾನ ಏರಿದ್ದೇವೆ ಎಂದು ಅವರಿಗೆ ಮನವರಿಕೆ ಮಾಡಿಸಲು ಸಮಯ ಹಿಡಿಯಿತು. ಮೊದಲು ಅವರು ನಮ್ಮನ್ನು ಹುಚ್ಚರು ಎಂದು ಭಾವಿಸಿದ್ದರು. ನಾವು ಬೋರ್ಡಿಂಗ್ ಪಾಸ್ಗಳನ್ನು ತೋರಿಸಿದ ಮೇಲೆ ಅವರಿಗೆ ಸಮಾಧಾನವಾಯಿತು ಎಂದಿದ್ದಾರೆ ಎಲಿಸ್. ಸ್ಪೇನ್ನಲ್ಲಿ ರಜಾ ದಿನವನ್ನು ಮುಂದುವರೆಸುವುದಾಗಿ ತಮಾಷೆ ಮಾಡಿದ್ದಾರೆ ಜೆಸ್ಸಿ.
ಘಟನೆಯ ಬಗ್ಗೆ ಜೆಸ್ಸಿ ಮಾತನಾಡುತ್ತಾ, ‘‘ವಿಮಾನದಲ್ಲಿ ಇಬ್ಬರು ಬೇರೆ ಪ್ರಯಾಣಿಕರಿದ್ದಾರೆ ಎನ್ನುವುದು ಏಕೆ ಯಾರ ಗಮನಕ್ಕೂ ಬರಲಿಲ್ಲ? ನಮ್ಮ ಬೋರ್ಡಿಂಗ್ ಪಾಸ್ಅನ್ನು ಎರಡೆರಡು ಬಾರಿ ಚೆಕ್ ಮಾಡುವಾಗ ಏಕೆ ಯಾರಿಗೂ ತಿಳಿಯಲಿಲ್ಲ? ನಾವು ಬೇರೆ ವಿಮಾನದಲ್ಲಿ ಹೋಗಬಾರದು! ಕೊನೆಗೆ ನಾವು ಮನೆಗೆ ಬಂದೆವು ನಿಜ. ಆದರೆ ಈ ಘಟನೆ ಹೇಗೆ ಸಂಭವಿಸಿತು ಎನ್ನುವುದು ತಿಳಿಯುತ್ತಿಲ್ಲ’’ ಎಂದಿದ್ದಾರೆ.
ದಂಪತಿ ತಪ್ಪಾದ ವಿಮಾನ ಹತ್ತಿದ್ದೇಗೆ?
ರೈನೈರ್ನ ವಕ್ತಾರರು ನೀಡಿದ ಮಾಹಿತಿಯ ಪ್ರಕಾರ ಮಾರ್ಸಿಲ್ಲೆಯಿಂದ ಸರಿಯಾದ ಗೇಟ್ ಮೂಲಕವೇ ದಂಪತಿ ತೆರಳಿದ್ದಾರೆ. ಆದರೆ ಅವರು ಸ್ಟಾನ್ಸ್ಟೆಡ್ ವಿಮಾನವನ್ನು ಹತ್ತುವ ಮಾರ್ಗಕ್ಕೆ ತೆರಳುವ ಬದಲು ಗೊಂದಲಗೊಂಡು ಅನಧಿಕೃತ ಮಾರ್ಗದ ಮೂಲಕ ಮತ್ತೊಂದು ಜಾಗಕ್ಕೆ ತಲುಪಿದರು. ಅಲ್ಲಿದ್ದ ಮ್ಯಾಡ್ರಿಡ್ ವಿಮಾನವನ್ನು ಹತ್ತಿದ್ದಾರೆ. ಹೀಗಾಗಿ ಅವರು 1,200 ಕಿಮೀ ದೂರ ಕ್ರಮಿಸಬೇಕಾಯಿತು.
ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ವಿಮಾನ ಸಂಪೂರ್ಣ ಬುಕ್ ಆಗಿರಲಿಲ್ಲ. ಹೀಗಾಗಿ ಈ ದಂಪತಿ ಕಾಯ್ದಿರಿಸಿದ್ದ ಸೀಟ್ಗಳು ಖಾಲಿಯಿದ್ದವು. ಅವರು ಅದರಲ್ಲೇ ಕುಳಿತು ಪ್ರಯಾಣಿಸಿದರು. ಹೀಗಾಗಿ ವಿಮಾನದಲ್ಲಿ ಸೂಚನೆ ಬರುವವರೆಗೆ ಈರ್ವರಿಗೂ ಸತ್ಯ ತಿಳಿಯಲಿಲ್ಲ ಎಂದಿದ್ದಾರೆ ವಕ್ತಾರರು. ಸದ್ಯ ಈ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಎಲ್ಲಾ ಕಾಕತಾಳೀಯಗಳೂ ಸೇರಿ ದಂಪತಿ 1,200 ಕಿಮೀ ದೂರ ಸುಮ್ಮನೆ ಪ್ರಯಾಣಿಸಬೇಕಾಯಿತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಹಾರ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಕದ್ದ ಕಳ್ಳರು; ಹಾಡುಹಗಲೇ ನಡೆಯಿತು ಲೂಟಿ!
ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?
Published On - 8:36 am, Sun, 10 April 22