ಪಿಟ್‌ಬುಲ್ ಶ್ವಾನಗಳು ತುಂಬಾನೇ ಅಪಾಯಕಾರಿ. ಇವುಗಳು ಅಪರಿಚಿತರ ಮೇಲೆ ರಾಕ್ಷಸ ರೀತಿಯಲ್ಲಿ ದಾಳಿಯನ್ನು ನಡೆಸುತ್ತವೆ. ಪಿಟ್‌ಬುಲ್ ದಾಳಿಗೆ ಹಲವರು ತುತ್ತಾಗಿದ್ದಾರೆ. ಇದೇ ಕಾರಣಕ್ಕೆ ಭಾರತದಲ್ಲಿ ಈ ವಿದೇಶಿ ತಳಿಯ ಶ್ವಾನಗಳನ್ನು ಸಾಕುವುದಕ್ಕೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಈ ಅಪಾಯಕಾರಿ ಶ್ವಾನಗಳನ್ನು ಜನರು ಸಾಕುತ್ತಿದ್ದಾರೆ. ಇದೀಗ ಗ್ರಾಹಕರೊಬ್ಬರಿಗೆ ಪಾರ್ಸೆಲ್ ಕೊಡಲೆಂದು ಬಂದಂತಹ ಡೆಲಿವರಿ ಬಾಯ್ ಮೇಲೆ ಆ ಮನೆಯ ಪಿಟ್‌ಬುಲ್ ಮಾರಣಾಂತಿಕವಾಗಿ ದಾಳಿ ನಡೆಸಿದ್ದು, ಪಾಪ ಆ ಯುವಕ ಜೀವ ಉಳಿಸಿಕೊಳ್ಳಲು ಪರದಾಟವನ್ನೇ ನಡೆಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಶ್ವಾನದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಈ ಘಟನೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದಿದ್ದು, ಇಲ್ಲಿನ ಖಮರ್ದಿಹ್ ಪೊಲೀಸಗ ಠಾಣೆ ವ್ಯಾಪ್ತಿಯ ಅನುಪಮ್ ನಗರದಲ್ಲಿ ಪಾರ್ಸೆಲ್ ನೀಡಲು ಬಂದಿದ್ದ ಡೆಲಿವರಿ ಬಾಯ್ ಮೇಲೆ ಗ್ರಾಹಕರೊಬ್ಬರ ಮನೆಯ ಎರಡು ಪಿಟ್‌ಬುಲ್ ನಾಯಿಗಳು ಮಾರಣಾಂತಿಕವಾಗಿ ದಾಳಿ ನಡೆಸಿವೆ. ಕಳೆದ ಶುಕ್ರವಾರ (ಜುಲೈ 12) ಈ ಘಟನೆ ನಡೆದಿದ್ದು, ವೈದ್ಯರೊಬ್ಬರ ಮನೆಗೆ ಫುಡ್ ಡೆಲಿವರಿ ಮಾಡಲೆಂದು ಬಂದ ಡೆಲಿವರಿ ಬಾಯ್ ಸಲ್ಮಾನ್ ಖಾನ್ ಎಂಬಾತನ ಮೇಲೆ ಪಿಟ್‌ಬುಲ್ ಶ್ವಾನಗಳು ದಾಳಿ ನಡೆಸಿವೆ. ನಂತರ ಸ್ಥಳೀಯರು ಆತನ ಸಹಾಯಕ್ಕೆ ಧಾವಿಸಿದ್ದಾರೆ.
Incognito ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪಾರ್ಸೆಲ್ ನೀಡಲೆಂದು ಬಂದ ಡೆಲಿವರಿ ಬಾಯ್ ಮೇಲೆ ಪಿಟ್ ಬುಲ್ ಶ್ವಾನಗಳು ದಾಳಿಯನ್ನು ನಡೆಸುವ ಭೀಕರ ದೃಶ್ಯವನ್ನು ಕಾಣಬಹುದು. ಕೊನೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಡೆಲಿವರಿ ಬಾಯ್ ಕಾರ್ ಮೇಲೇರಿ ಕುಳಿತಿದ್ದಾನೆ. ರಕ್ತದ ಮಡುವಿನಲ್ಲಿ ಕುಳಿತಿದ್ದ ಈತನ ಸಹಾಯಕ್ಕಾಗಿ ನಂತರ ಸ್ಥಳೀಯರು ಧಾವಿಸಿದ್ದಾರೆ.
ಇದನ್ನೂ ಓದಿ: ವಿಶೇಷ ಚೇತನ ವ್ಯಕ್ತಿಗೆ ಬ್ರಿಡ್ಜ್ ದಾಟಲು ನೆರವಾದ ಟ್ರಾಫಿಕ್ ಪೊಲೀಸ್, ಈ ಕಾರ್ಯವನ್ನು ಶ್ಲಾಘಿಸಿದ ಸಿಎಂ
ಜುಲೈ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಆತನ ಸಂಪೂರ್ಣ ಚಿಕಿತ್ಸೆಯ ಖರ್ಚನ್ನು ಶ್ವಾನದ ಮಾಲೀಕ ಭರಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಶ್ವಾನದ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ