ಆರ್​ಎಕ್ಸ್​ ಬದಲಾಗಿ ಶ್ರೀ ಹರಿ; ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್

| Updated By: ಶ್ರೀದೇವಿ ಕಳಸದ

Updated on: Oct 17, 2022 | 4:44 PM

Prescription in Hindi : ಅಮಿತ್​ ಷಾ ಅವರ ಭಾಷಣದಿಂದ ಪ್ರೇರೇಪಣೆಗೊಂಡು ಹಿಂದಿಯಲ್ಲಿ ಔಷಧಿಚೀಟಿ ಬರೆದೆ ಎಂದಿದ್ದಾರೆ ಈ ವೈದ್ಯರು. ಡಾಕ್ಟ್ರೆ, ಬಿಜೆಪಿಯಲ್ಲಿ ಉಜ್ವಲ ಭವಿಷ್ಯವಿದೆ ನಿಮಗೆ, ಇನ್ನು ಅನುವಾದವೂ ಸೂಪರ್ ಎಂದಿದ್ದಾರೆ ನೆಟ್ಟಿಗರು.

ಆರ್​ಎಕ್ಸ್​ ಬದಲಾಗಿ ಶ್ರೀ ಹರಿ; ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್
Doctor Writes Prescription In Hindi Uses Shri Hari Instead Of Rx
Follow us on

Viral : ಕೆಲ ತಿಂಗಳುಗಳ ಹಿಂದೆ ಕೇರಳದ ವೈದ್ಯರೊಬ್ಬರು ಕ್ಯಾಪಿಟಲ್​ ಲೆಟರ್ಸ್​ನಲ್ಲಿ ದುಂಡಾಗಿ ಬರೆದ ಔಷಧಿಚೀಟಿ ವೈರಲ್​ ಆಗಿದ್ದ ಬಗ್ಗೆ ಓದಿ ಶ್ಲಾಘಿಸಿದ್ದಿರಿ. ಇದೀಗ ಮಧ್ಯಪ್ರದೇಶದ ವೈದ್ಯರೊಬ್ಬರು ಹಿಂದಿಯಲ್ಲಿ ಬರೆದ ಔಷಧಿಚೀಟಿ ವೈರಲ್ ಆಗುತ್ತಿದೆ. ಈ ಚೀಟಿಯಲ್ಲಿ ಅವರು Rx ಬದಲಾಗಿ ಶ್ರೀ ಹರಿ ಎಂದು ಬರೆದು 5 ಥರದ ಔಷಧಿಗಳನ್ನು ಮತ್ತು ರೋಗಿಯ ಇತಿಹಾಸವನ್ನು ಹಿಂದಿಯಲ್ಲಿ ಬರೆದಿದ್ದಾರೆ. ಇವರು ಬಹುಶಃ ಸಚಿವ ಅಮಿತ್ ಷಾ ಅವರ ಭಾಷಣದಿಂದ ಸ್ಫೂರ್ತಿಗೊಂಡಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಅಮಿತ್ ಷಾ ಎಂಬಿಬಿಎಸ್​ ವಿದ್ಯಾರ್ಥಿಗಳಿಗಾಗಿ ಹಿಂದಿಯಲ್ಲಿ ಮೂರು ವೈದ್ಯಕೀಯ ಶಿಕ್ಷಣ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮರುದಿನವೇ ಈ ಹಿಂದಿ ಔಷಧಿಚೀಟಿ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಈ ಚೀಟಿಯ ಮೇಲೆ 16.10.2022 ಎಂದು ತಾರೀಖನ್ನೂ ನಮೂದಿಸಲಾಗಿದೆ. ಸತನಾದಲ್ಲಿರುವ ಡಾ. ಸರ್ವೇಶ್ ಸಿಂಗ್​ ಎಂಬ ವೈದ್ಯರು ಈ ಔಷಧಿಚೀಟಿಯ ಕರ್ತೃ. ಅಲ್ಲಿಗೆ ನೆಟ್ಟಿಗರ ಅನುಮಾನ ಸರಿಯಾಗಿಯೇ ಇದೆ ಎಂದರ್ಥ ಮತ್ತು ಅದಕ್ಕೆ ಪುರಾವೆಯನ್ನು ಈ ವೈದ್ಯರೇ ನೀಡಿದ್ಧಾರೆ.

‘ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಹಿಂದಿಯಲ್ಲಿ ಔಷಧಿಚೀಟಿ ಬರೆಯಬೇಕೆಂದು ಅಮಿತ್​ ಷಾ ಅವರು ಕಾರ್ಯಕ್ರಮದಲ್ಲಿ ಹೇಳಿದ್ದನ್ನು ಕೇಳಿಸಿಕೊಂಡೆ. ಅವರ ಭಾಷಣದಿಂದ ಪ್ರೇರೇಪಣೆಗೊಂಡ ನಾನು ತಕ್ಷಣವೇ ಈ ಕ್ರಮವನ್ನು ಅಳವಡಿಸಿಕೊಂಡೆ’ ಎಂದು ಆಜ್​ತಕ್​ ಸುದ್ದಿವಾಹಿನಿಗೆ ಡಾ. ಸರ್ವೇಶ್ ತಿಳಿಸಿದ್ಧಾರೆ.

ಹಿಂದಿ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ತೀರ್ಮಾನಿಸಿದ ಮಧ್ಯಪ್ರದೇಶ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶದಾದ್ಯಂತ ಉತ್ತಮ ಬದಲಾವಣೆಯನ್ನು ತರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ

ಡಾಕ್ಟರ್​ ಸಾಬ್ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದಂತೆ ಎಂದು ಒಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ. ಬಿಜೆಪಿ ವಲಯದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಡಾಕ್ಟ್ರೇ, ಒಳ್ಳೆಯದಾಗಲಿ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ಹಿಂದಿಯಲ್ಲಿ​ ಅಬ್ಡಾಮಿನ್​ಗೆ ಏನು ಹೇಳುತ್ತಾರೆ ಎನ್ನುವುದು ಈ ವೈದ್ಯರಿಗೆ ಗೊತ್ತಿರಲಿಕ್ಕಿಲ್ಲ, ಬಹಳ ಅದ್ಭುತವಾದ ಅನುವಾದ! ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಒಟ್ಟಿನಲ್ಲಿ ಈ ಔಷಧಿಚೀಟಿ ನಗೆಪಾಟಿಲಿಗೆ ಈಡಾಗಿದೆ. ಹಿಂದಿಯಲ್ಲಿ ಔಷಧಿಚೀಟಿ ಬರೆಯಬೇಕೆಂಬ ನಿಯಮ ಜಾತಿಗೆ ಬಂದರೆ ನಿಮ್ಮ ಅಭಿಪ್ರಾಯವೇನಿರುತ್ತದೆ?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

 

Published On - 4:30 pm, Mon, 17 October 22