Viral video : ಕ್ಯಾಂಪಿಂಗ್ ನೀಡುವ ಮುದ, ತಾಜಾತನಕ್ಕೆ ಮನಸೋಲದವರು ಯಾರಿದ್ದಾರೆ? ನಮಗೆ ಹೇಗೆ ಬೇಕೋ ಹಾಗೆ ನಮ್ಮ ಸಾಕುಪ್ರಾಣಿಗಳಿಗೂ ಆಗಾಗ ಕ್ಯಾಂಪಿಂಗ್ ಬೇಕೆನ್ನಿಸುತ್ತದೆ. ಪ್ರಾಣಿ ಪೋಷಕರು ತಮ್ಮ ಪ್ರಾಣಿಗಳನ್ನು ತಮ್ಮೊಂದಿಗೆ ಕ್ಯಾಂಪಿಗ್ಗೆ ಕರೆದುಕೊಂಡು ಹೋಗುವ ಅಭ್ಯಾಸವಿದೆ. ಅಲ್ಲಿ ಅವು ಹೇಗೆ ವರ್ತಿಸುತ್ತವೆ ಎನ್ನುವುದು ಮಾತ್ರ ಕರೆದೊಯ್ದು ಅನುಭವವಿರುವವರಿಗೇ ಗೊತ್ತು. ಮನೆಗಳಲ್ಲಿ ತೀರಾ ಕಂಫರ್ಟ್ ಝೋನ್ನಲ್ಲಿ ಬೆಳೆದ ನಾಯಿಗಳು ಇಲ್ಲಿಯೂ ಅದನ್ನೇ ಬಯಸುತ್ತವೆಯಾ ಅಥವಾ ಸದ್ಯ ನಾಲ್ಕು ಗೋಡೆಗಳಾಚೆ ಕರೆದುಕೊಂಡು ಬಂದರಲ್ಲ ಅಂತ ಮಣ್ಣಿನಲ್ಲಿ ಬಿದ್ದು ಉರುಳಾಡುವುದು, ಕಾಯ್ದ ಕಲ್ಲುಬಂಡೆಗಳ ಮೇಲೆ ಮೈ ಹರವಿಕೊಂಡು ಮಲಗುವುದನ್ನೆಲ್ಲ ಮಾಡುತ್ತವಾ? ಇಲ್ಲಿರುವ ಈ ನಾಯಿಗಳು ಮಾತ್ರ ನೆಲದ ಮೇಲೆ ಸುತರಾಂ ಕುಳಿತುಕೊಳ್ಳಲಾರೆವು ಎಂದು ಪಣತೊಟ್ಟಂತಿವೆ!
ಶೇನ್ ಬ್ರಾಕ್ ಎಂಬುವವರ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಇನ್ನೊಂದು ಪುಟದಲ್ಲಿ ಮರುಹಂಚಿಕೆಯಾದಾಗ ಇದು ವೈರಲ್ ಆಗಿದೆ.
‘ನಾವು ನಮ್ಮ ನಾಯಿಗಳನ್ನು ಕ್ಯಾಂಪಿಂಗ್‌ಗೆ ಕರೆದೊಯ್ದಿದ್ದೇವೆ. ಅವುಗಳು ನೆಲಕ್ಕೆ ಕುಳಿತುಕೊಳ್ಳಲು ನಿರಾಕರಿಸಿದವು’ ಎಂಬ ಟೆಕ್ಸ್ಟ್ನೊಂದಿಗೆ ಈ ವಿಡಿಯೋ ತೆರೆದುಕೊಳ್ಳುತ್ತದೆ. ಒಂದೆರಡು ಟೆಂಟ್ನ ಹಾಸಿಗೆಯೊಳಗೆ ಕುಳಿತಿವೆ. ಇನ್ನೆರಡು ಹೊರಗೆ ರಜಾಯಿ ಮೇಲೆ ಕುಳಿತಿವೆ. ಉಳಿದವೆರಡು ಕುರ್ಚಿಗಳ ಮೇಲೆ ಕುಳಿತಿವೆ.
ನಿನ್ನೆ ಪೋಸ್ಟ್ ಮಾಡಲಾದ ಈ ವಿಡಿಯೋ 9.5 ಲಕ್ಷಕ್ಕೂ ವೀಕ್ಷಣೆಗೆ ಒಳಗಾಗಿದೆ. ಸುಮಾರು 56,000 ಲೈಕ್‌ಗಳನ್ನು ಸಂಗ್ರಹಿಸಿದೆ. ವಿವಿಧ ರೀತಿಯಲ್ಲಿ ಅನೇಕರು ಕಮೆಂಟ್ ಮಾಡಿದ್ದಾರೆ.
ಒಮ್ಮೆ ಆರಾಮದಾಯಕ ಜೀವನಶೈಲಿ ಮನುಷ್ಯನಿಗೆ ಅಭ್ಯಾಸವಾದರೆ ಮುಗಿಯಿತು ಎನ್ನುವ ಮಾತು ಈಗ ಈ ನಾಯಿಗಳಿಗೂ ಅನ್ವಯಿಸುತ್ತದೆ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ