ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರವನ್ನ ವಿಶ್ವ ಗಡ್ಡದ ದಿವಸ ಅಂತ ಆಚರಿಸಲಾಗುತ್ತೆ. ಗಡ್ಡ ಬಿಟ್ಟವರಿಗೆಂದೇ ವಿಶೇಷವಾಗಿ ಈ ದಿನವನ್ನು ಮೀಸಲಿರಿಸಲಾಗಿದೆ. ಗಡ್ಡ ಬಿಡುವುದಕ್ಕೆ ಸಾಕಷ್ಟು ಅರ್ಥಗಳಿದೆಯಾದರೂ ಈಗೀಗ ಅದೊಂದು ಸ್ಟೈಲ್ ಆಗಿರುವುದರಿಂದ ಗಡ್ಡಧಾರಿಗಳ ದಿನಾಚರಣೆಯನ್ನು ಆಚರಿಸುವುದು ಒಂದರ್ಥದಲ್ಲಿ ಸೂಕ್ತವೇ ಎನ್ನಬಹುದು ಬಿಡಿ. ಅಂದಹಾಗೆ ಈ ಬಾರಿ ಸೆಪ್ಟೆಂಬರ್ 4ನೇ ತಾರೀಖಿನಂದೇ ಗಡ್ಡದ ದಿನವನ್ನು ಆಚರಿಸಿಯಾಗಿದೆ ಹಾಗಿದ್ದರೂ ಈಗ ಮತ್ತೇಕೆ ಈ ಪ್ರಸ್ತಾವನೆ ಎಂದರೆ ಅದಕ್ಕೆ ಕಾರಣ ನಮ್ಮ ರಾಜ್ಯದ ಆರೋಗ್ಯ ಸಚಿವರು! ಹೌದು, ಆರೋಗ್ಯ ಸಚಿವ ಡಾ.ಸುಧಾಕರ್ ಇಂದು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಗಡ್ಡದ ದಿವಸಕ್ಕೆ ಶುಭಕೋರಿ, ನೀವು ಎಷ್ಟು ಉದ್ದ ಗಡ್ಡ ಬಿಟ್ಟಿದ್ದೀರಿ? ಇಲ್ಲಿ ಕೆಳಗೆ ಶೇರ್ ಮಾಡಿ ಅಥವಾ ನನ್ನನ್ನು ಟ್ಯಾಗ್ ಮಾಡಿ ಎಂದು ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಡಾ.ಸುಧಾಕರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ. ಸ್ವಲ್ಪ ತಮಾಷೆಯಾಗಿ ತಿಳಿ ಹಾಸ್ಯದೊಂದಿದೆ ಅದರ ಬಗ್ಗೆ ಮಾತನಾಡಿರುವ ಅವರು, ಪ್ರತಿಯೊಬ್ಬ ಗಡ್ಡ ಬಿಟ್ಟ ಪುರುಷನ ಹಿಂದೆ ಯಾವಾಗ ಶೇವ್ ಮಾಡುತ್ತೀಯಾ ಎಂದು ಕಿರುಚುವ ತಾಯಿಯೊಬ್ಬಳಿರುತ್ತಾಳೆ. ನೀನು ಮೃಗದ ಹಾಗೆ ತೋರುತ್ತೀದ್ದೀಯ, ನಿನ್ನ ಸುಂದರವಾದ ಮುಖವನ್ನು ನನಗೂ ತೋರಿಸು ಎನ್ನುವವರಿರುತ್ತಾರೆ ಎಂದು ಹಾಸ್ಯ ಮಾಡಿದ್ದಾರೆ. ಆದರೆ, ಕೆಲ ಹೊತ್ತಿನ ಬಳಿಕ ಗಡ್ಡದ ದಿನ ಇವತ್ತಲ್ಲ ಎಂಬ ಕಾರಣಕ್ಕೋ ಏನೋ ಆ ಪೋಸ್ಟನ್ನೇ ಸುಧಾಕರ್ ಅಳಿಸಿ ಹಾಕಿದ್ದಾರೆ.
ಜತೆಗೆ, ಅದಕ್ಕಾಗಿಯೇ ವಿಶೇಷ ಪೋಸ್ಟರ್ ವಿನ್ಯಾಸ ಮಾಡಿಸಿರುವ ಡಾ.ಸುಧಾಕರ್ ಹ್ಯಾಶ್ ಟ್ಯಾಗ್ ಜತೆ ವಿಶ್ವ ಗಡ್ದದ ದಿವಸ ಎಂಬ ಸಂದೇಶ ಹಂಚಿಕೊಂಡು ಶುಭ ಕೋರಿದ್ದಾರೆ. ಈ ಪೋಸ್ಟ್ಗೆ ಕ್ಯಾಪ್ಷನ್ ನೀಡಿರುವ ಅವರು ನೀವು ಎಷ್ಟು ಉದ್ದ ಗಡ್ಡ ಬಿಟ್ಟಿದ್ದೀರಿ? ಇಲ್ಲಿ ಕೆಳಗೆ ಶೇರ್ ಮಾಡಿ ಅಥವಾ ನನ್ನನ್ನು ಟ್ಯಾಗ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಇದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ತರಹೇವಾರಿ ಕಮೆಂಟ್ಗಳು ಬಂದಿದ್ದು, ಒಬ್ಬೊಬ್ಬರು ಒಂದೊಂದು ರೀತಿ ತಮಾಷೆ ಮಾಡಿದ್ದಾರೆ.
ಕೆಲವರಂತೂ ಈ ಶುಭಾಶಯವನ್ನು ನಿಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಿಸುವುದೇ ಸೂಕ್ತ. ಅವರನ್ನೇ ಟ್ಯಾಗ್ ಮಾಡಿ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಹೇಗೂ ನೀವು ಗಡ್ಡ ಬಿಡುವುದಿಲ್ಲ, ನಾವೂ ನಿಮ್ಮಂತೆಯೇ ಹಾಗಾಗಿ ನಾವಿಬ್ಬರೂ ಸೇರಿ ಮೋದಿಯವರಿಗೆ ಶುಭಾಶಯ ಸಲ್ಲಿಸೋಣ ಎಂದು ತಮಾಷೆ ಮಾಡಿದ್ದಾರೆ. ಇನ್ನೊಂದಿಬ್ಬರು ನಮ್ಮ ಮನೆಯಲ್ಲಿ ಗಡ್ಡ ಬಿಟ್ಟರೆ ಬೈತಾರೆ ಸಾಹೇಬ್ರೇ ಅಮ್ಮನ ಹತ್ತಿರ ಬೈಸಿಕೊಂಡಿದ್ದೇವೆ. ನೀವು ಹಾಕಿದ ಪೋಸ್ಟ್ ಸತ್ಯ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಗಡ್ಡದ ದಿನಾಚರಣೆ ಮುಗಿದ ಮೇಲೂ ಮತ್ತೆ ಗಡ್ಡದ ಬಗ್ಗೆ ಚರ್ಚೆ ಶುರುವಾಗೋಕೆ ಸುಧಾಕರ್ ಅವರ ಪೋಸ್ಟ್ ಕಾರಣವಾಗಿತ್ತು ಆದರೆ, ಈಗ ಪೋಸ್ಟ್ ಕಾಣೆಯಾಗಿರುವುದರಿಂದ ಅದರ ಸ್ಕ್ರೀನ್ಶಾಟ್ ಮಾತ್ರ ಓಡಾಡುತ್ತಿದೆ.
ಇದನ್ನೂ ಓದಿ:
‘ಪೊಲೀಸರ ಗಡ್ಡದ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡೋಲ್ಲ, ಅದು ಸಾಂವಿಧಾನಿಕ ಹಕ್ಕಲ್ಲ‘- ಅಲಹಾಬಾದ್ ಹೈಕೋರ್ಟ್
(Dr K Sudhakar wish for World beard day gone viral later post deleted)
Published On - 11:07 am, Tue, 7 September 21