ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

Viral Video: ದೊಡ್ಡ ಆನೆಗಳೆಲ್ಲಾ ಮರದ ಕೊಂಬೆಯನ್ನು ಸೊಂಡಿಲಿನಿಂದ ಬಗ್ಗಿಸಿ ಗೊಂಚಲು ಗೊಂಚಲಾಗಿ ಹಸಿರೆಲೆಗಳನ್ನು ಹೊಟ್ಟೆಗಿಳಿಸುತ್ತಿದ್ದರೆ, ಮರಿಯಾನೆ ತನ್ನ ಪುಟಾಣಿ ಸೊಂಡಿಲಿಗೆ ಎಟಕುವ ಕೊಂಬೆಯಿಂದ ಚಿಗುರೆಲೆಗಳನ್ನು ಕಿತ್ತು ತಿನ್ನುವ ದೃಶ್ಯ ಮನಮೋಹಕವಾಗಿದೆ.

ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್
ನಕ್ಸಲ್​ಬರಿ ಟೀ ಎಸ್ಟೇಟ್​ನಲ್ಲಿ ಆನೆಗಳ ಸ್ವಚ್ಛಂದ ಓಡಾಟ
Edited By:

Updated on: Jun 25, 2021 | 1:33 PM

ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ವಿಚಾರಗಳಿಗೆ ಆಯಸ್ಸು ಮುಗಿಯುತ್ತದೆ ಎಂಬ ಪ್ರಶ್ನೆಯೇ ಇರುವುದಿಲ್ಲ. ಒಂದರ್ಥದಲ್ಲಿ ಅವು ಎಂದಿಗೂ ಚಿರಾಯು. ಏಕೆಂದರೆ ಒಬ್ಬರಲ್ಲಾ ಒಬ್ಬರು ಅವುಗಳನ್ನು ನೋಡುತ್ತಲೇ ಇರುತ್ತಾರೆ. ನೋಡಿದ ಮೇಲೆ ಇಷ್ಟಪಟ್ಟು ಮತ್ತೆ ಆಗಾಗ ಕಣ್ಣು ಹಾಯಿಸುತ್ತಾ ಖುಷಿಪಡುತ್ತಾರೆ. ಅದರಲ್ಲೂ ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳಿದ್ದರಂತೂ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ಅದರತ್ತ ಕಣ್ಣು ನೆಟ್ಟಿರುತ್ತಾರೆ. ಈಗಂತೂ ಲಾಕ್​ಡೌನ್, ಕೊರೊನಾ ಭಯ, ವರ್ಕ್​ ಫ್ರಂ ಹೋಂ ಹೀಗೆ ಬೇರೆ ಬೇರೆ ಕಾರಣಗಳಿಂದ ಜನರು ಮನೆಯಲ್ಲೇ ಕೂತಿರುವುದರಿಂದ ಸಮಯ ಕಳೆಯಲು ಇಂತಹ ವಿಷಯಗಳನ್ನು ಹುಡುಕಿಕೊಂಡು ಹೋಗುವುದೂ ಸಾಮಾನ್ಯವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟೀ ಎಸ್ಟೇಟ್​ನಲ್ಲಿ ಸ್ವಚ್ಛಂದವಾಗಿ ಮೇಯುತ್ತಿರುವ ಆನೆಗಳ ವಿಡಿಯೋ ಒಂದು ವೈರಲ್ ಆಗಿದೆ.

ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಧಾ ರಾಮನ್ ಎಂಬುವವರು 20 ಸೆಕೆಂಡ್​ಗಳ ಪುಟ್ಟ ವಿಡಿಯೋ ಹಂಚಿಕೊಂಡ ನಂತರ ಅದು ಎಲ್ಲರ ಗಮನ ಸೆಳೆದಿದೆ. ಡಾರ್ಜಿಲಿಂಗ್​ ಬಳಿಯಿರುವ ನಕ್ಸಲ್​ಬರಿ ಟೀ ಎಸ್ಟೇಟ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮೊದಲು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದನ್ನು ಸುಧಾ ರಾಮನ್ ಕೂಡಾ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಕ್ಸಲ್​ಬರಿ ಟೀ ಎಸ್ಟೇಟ್​ನಲ್ಲಿ ಆನೆಗಳ ಕುಟುಂಬವೊಂದು ಸ್ವಚ್ಛಂದವಾಗಿ ತಿರುಗಾಡುತ್ತಾ, ತಮಗೆ ಬೇಕಾದ ಆಹಾರವನ್ನು ತಿನ್ನುತ್ತಾ, ಚಿಗುರು ಎಲೆಗಳನ್ನೆಲ್ಲಾ ಸೊಂಡಿಲಿನಿಂದ ಕಿತ್ತು ತಿನ್ನುವ ವಿಡಿಯೋ ಈಗ ವೈರಲ್ ಆಗಿದೆ.

ಗಜಪಡೆಯಲ್ಲಿ ದೊಡ್ಡ ಆನೆಗಳ ಜತೆಗೆ ಮರಿ ಆನೆಯೂ ಇದ್ದು, ಅವೆಲ್ಲವೂ ಒಟ್ಟಾಗಿ ಮೇಯುವುದನ್ನು ನೋಡಲಿಕ್ಕೆ ಖುಷಿಯಾಗುತ್ತದೆ. ದೊಡ್ಡ ಆನೆಗಳೆಲ್ಲಾ ಮರದ ಕೊಂಬೆಯನ್ನು ಸೊಂಡಿಲಿನಿಂದ ಬಗ್ಗಿಸಿ ಗೊಂಚಲು ಗೊಂಚಲಾಗಿ ಹಸಿರೆಲೆಗಳನ್ನು ಹೊಟ್ಟೆಗಿಳಿಸುತ್ತಿದ್ದರೆ, ಮರಿಯಾನೆ ತನ್ನ ಪುಟಾಣಿ ಸೊಂಡಿಲಿಗೆ ಎಟಕುವ ಕೊಂಬೆಯಿಂದ ಚಿಗುರೆಲೆಗಳನ್ನು ಕಿತ್ತು ತಿನ್ನುವ ದೃಶ್ಯ ಮನಮೋಹಕವಾಗಿದೆ.

ಆನೆಗಳ ಗುಂಪಿನ ಬಗ್ಗೆ ಹೇಳಿರುವ ನಕ್ಸಲ್​ಬರಿ ಟೀ ಎಸ್ಟೇಟ್​, ಈಗೀಗ ಈ ಆನೆಗಳು ಹಗಲು ರಾತ್ರಿಗಳ ಪರಿವೆಯಿಲ್ಲದೇ ಇಲ್ಲೇ ಅಡ್ಡಾಡಿಕೊಂಡಿರುತ್ತವೆ. ಆನೆಗಳಿಗೆ ಸಾಕಾಗುವಷ್ಟು ನೀರಿನ ಸೌಲಭ್ಯವೂ ನಮ್ಮಲ್ಲಿರುವುದರಿಂದ ಕೊಳಕ್ಕೆ ಹೋಗಿ ಬಾಯಾರಿಕೆಯನ್ನೂ ನೀಗಿಸಿಕೊಳ್ಳುತ್ತವೆ. ಬೇಕಾದಷ್ಟು ಮರಗಳೂ ಇಲ್ಲಿದ್ದು, ಆಹಾರಕ್ಕಾಗಿ ಅವು ಒದ್ದಾಡುವುದೂ ಬೇಕಿಲ್ಲ. ನಮ್ಮ ಎಸ್ಟೇಟ್ ಅವುಗಳಿಗೆ ಸುರಕ್ಷಿತ ಎಂದೆನಿಸಿದೆ. ಹೀಗಾಗಿ ಕೆಲವು ಆನೆಗಳಂತೂ ಹೊಟ್ಟೆ ತುಂಬಿಸಿಕೊಂಡು ನಿಶ್ಚಿಂತೆಯಿಂದ ಮಲಗಿಬಿಡುತ್ತವೆ ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗಜಪಡೆಯ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ.

ಹೀಗೆ ಆನೆಗಳು ಕುಟುಂಬ ಸಮೇತವಾಗಿ ನಲಿದಾಡುವುದನ್ನು ನೋಡಿ ಜನರು ಸಂತಸ ವ್ಯಕ್ತಪಡಿಸಿದ್ದು, ಅವುಗಳಿಗೆ ಅಂತಹ ವಾತಾವರಣ ಹಾಗೂ ಸ್ವಾತಂತ್ರ್ಯ ಕೊಟ್ಟವರನ್ನೂ ಶ್ಲಾಘಿಸಿದ್ದಾರೆ. ಅಲ್ಲದೇ, ವಿಡಿಯೋವನ್ನು ಹೆಚ್ಚಿನವರು ಹಂಚಿಕೊಳ್ಳುತ್ತಿದ್ದು, ಸಹಬಾಳ್ವೆಯ ಮಹತ್ವವನ್ನೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:
ಚೀನಾದ ಅಲೆಮಾರಿ ಆನೆಗಳ ವಿಶ್ವ ದಾಖಲೆ ನಡಿಗೆ; ಈ ಗಜಪಡೆಯ ಮಹಾಪ್ರವಾಸ ಎಷ್ಟು ಗಮ್ಮತ್ತಾಗಿದೆ ಗೊತ್ತಾ? 

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ