ಸಾವಿರಾರು ವರ್ಷಗಳಷ್ಟು ಪುರಾತನವಾದ ಕುಂಭಕರ್ಣನ ಖಡ್ಗವನ್ನು ಕಂಡುಹಿಡಿದಿರುವುದಾಗಿ ಫೋಟೋ ಒಂದು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಳಿಕ ಇದು ಸುಳ್ಳು ಸುದ್ದಿ, ಇದನ್ನು ಎಐ ತಂತ್ರಜ್ಞಾನದಿಂದ ರಚಿಸಲಾಗಿದೆ ಎಂಬುದು ತಿಳಿದುಬಂತು. ಇದೀಗ ಮತ್ತೊಂದು ಇದೇರೀತಿಯ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ದಕ್ಷಿಣ ಆಫ್ರಿಕಾದ ಸುದ್ವಾರ ಎಂಬ ಗುಹೆಯಲ್ಲಿ ಸುಮಾರು 6 ಸಾವಿರ ವರ್ಷಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಫೇಸ್ಬುಕ್, ಎಕ್ಸ್ನಲ್ಲಿ ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, “ಜಗತ್ತು ಹಿಂದೂ ಧಾರ್ಮಿಕ ಸಂಕೇತಗಳನ್ನು ನಾಶಪಡಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರತಿದಿನ ಅದರ ಪುರಾವೆಗಳು ಹೊರಬರುತ್ತಲೇ ಇವೆ. ದಕ್ಷಿಣ ಆಫ್ರಿಕಾದ ಸುದ್ವಾರ ಎಂಬ ಗುಹೆಯಲ್ಲಿ ಸುಮಾರು 6 ಸಾವಿರ ವರ್ಷಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಅಂತಹ ಯಾವುದೇ ಶಿವಲಿಂಗ ಕಂಡುಬಂದಿಲ್ಲ. ವೈರಲ್ ಮಾಹಿತಿಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಾವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ಮಾಡಿದ್ದೇವೆ. ಆಗ, ದಕ್ಷಿಣ ಆಫ್ರಿಕಾದಲ್ಲಿ ಸುದ್ವಾರ ಎಂಬ ಹೆಸರಿನ ಗುಹೆಯೇ ಇಲ್ಲ ಎಂದು ತಿಳಿದುಬಂದಿದೆ. ಬದಲಿಗೆ, ಸುದ್ವಾರ ಎಂಬ ಹೆಸರಿನ ಇಂಪುಮಲಂಗಾ ಪ್ರಾಂತ್ಯದಲ್ಲಿ ಗುಹೆಗಳಿವೆ ಎಂದು ತಿಳಿದುಬಂದಿದೆ.
ಬಳಿಕ ನಾವು ಸುದ್ವಾರ ಗುಹೆಗಳಲ್ಲಿ ಪುರಾತತ್ತ್ವಜ್ಞರಿಂದ 6000 ವರ್ಷಗಳಷ್ಟು ಹಳೆಯದಾದ ಶಿವಲಿಂಗದ ಆವಿಷ್ಕಾರದ ಬಗ್ಗೆ ಸುದ್ದಿಗಳನ್ನು ಹುಡುಕಿದೆವು. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ಕೂಡ ಕಂಡುಬಂದಿಲ್ಲ.
ನೆಲ್ಸ್‌ಪ್ರೂಟ್ ನೇಚರ್ ರಿಸರ್ವ್ (ಸುದ್ವಾಲಾ ಗುಹೆಗಳಿಂದ ಸುಮಾರು 35-40 ಕಿಮೀ) ನಲ್ಲಿರುವ ಬಂಡೆಯ ರಚನೆಯನ್ನು ಶಿವಲಿಂಗವೆಂದು ಪರಿಗಣಿಸಲಾಗಿದೆ. ಇದನ್ನು ಸುಮಾರು 1800 ವರ್ಷಗಳ ಹಿಂದೆ ಆಫ್ರಿಕಾಕ್ಕೆ ಪ್ರಯಾಣಿಸಿದ ಭಾರತೀಯ ಪ್ರಯಾಣಿಕರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು. ಆದರೆ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ 6000 ವರ್ಷಗಳಷ್ಟು ಹಳೆಯದಾದ ಶಿವಲಿಂಗ ಅಲ್ಲ.
ನಮ್ಮ ಹುಡುಕಾಟದ ಪರಿಣಾಮವಾಗಿ, ದಕ್ಷಿಣ ಆಫ್ರಿಕಾದ ಸುದ್ವಾರ ಎಂಬ ಗುಹೆಯಲ್ಲಿ 6000 ವರ್ಷಗಳಷ್ಟು ಹಳೆಯದಾದ ಶಿವಲಿಂಗ ಕಂಡುಬಂದಿದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಹಿತಿಯು ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ