ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟದ ಭರ್ಜರಿ ಗೆಲುವಿನ ನಂತರ ಮತ್ತೆ ಇವಿಎಂ ಟಾಕ್‌ನಲ್ಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ವರೆಗೆ, ಎಲ್ಲರೂ ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಇವಿಎಂಗಳ ತನಿಖೆಗೆ ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಜನರು ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಧ್ವಜಗಳನ್ನು ಬೀಸುತ್ತಾ, ಈ ಜನರು ‘‘ಇವಿಎಂಗಳನ್ನು ತೆಗೆದುಹಾಕಿ, ದೇಶವನ್ನು ಉಳಿಸಿ’’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುವವರ ಪ್ರಕಾರ, ಇದು ಮಹಾರಾಷ್ಟ್ರದಿಂದ ಬಂದಿದೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇವಿಎಂಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ನವೆಂಬರ್ 27 ರಂದು ಈ ವಿಡಿಯೋವನ್ನು ಹಂಚಿಕೊಂಡು, ‘‘ಸಹೋದರ, ಮಹಾರಾಷ್ಟ್ರದಲ್ಲಿ ಇವಿಎಂ ತೆಗೆಯಲು ಜನರ ದೊಡ್ಡ ಗುಂಪು ಬೀದಿಗಿಳಿದಿದೆ, ಈಗ ಬಿಜೆಪಿಯ ಸೋಲು ಖಂಡಿತವಾಗಿಯೂ ಗೋಚರಿಸುತ್ತಿದೆಯೇ? ಇಡೀ ಪ್ರತಿಪಕ್ಷಗಳು ಶೀಘ್ರದಲ್ಲೇ ಒಗ್ಗೂಡುತ್ತವೆ ಮತ್ತು ಬೀದಿಗಳಿಂದ ಸದನದವರೆಗೆ ಧ್ವನಿ ಎತ್ತಲು ಸಿದ್ಧವಾಗುತ್ತವೆ’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದ ಟಿವಿ9 ಕನ್ನಡ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಹಿಡಿದಿದೆ. ಅಸಲಿಗೆ ಇದು ಜನವರಿ 2024 ರಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇವಿಎಂಗಳ ವಿರುದ್ಧದ ಪ್ರತಿಭಟನೆಯ ಹಳೆಯ ವಿಡಿಯೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ನಲ್ಲಿ ಹಿಮ್ಮುಖವಾಗಿ ಸರ್ಚ್ ಮಾಡಿದ್ದೇವೆ. ಆಗ ಜನವರಿ 31, 2024 ರ ಟ್ವೀಟ್‌ನಲ್ಲಿ ನಾವು ಥೇಟ್ ಇದೇ ವಿಡಿಯೋವನ್ನು ಕಂಡುಕೊಂಡಿದ್ದೇವೆ. ವಿಡಿಯೋವನ್ನು ಹಂಚಿಕೊಳ್ಳುವಾಗ ಬಳಕೆದಾರ, ‘‘ವಾಮನ್ ಮೆಶ್ರಮ್ ಸ್ವಾತಂತ್ರ್ಯ ಪ್ರಾರಂಭವಾಗಿದೆ. ಇವಿಎಂಗಳನ್ನು ಒಡೆದು ಹಾಕುತ್ತಾರೆ’’ ಎಂದಿದ್ದಾರೆ. ವಾಮನ್ ಮೇಶ್ರಮ್ ಅವರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ (BAMCEF) ಮತ್ತು ಭಾರತ್ ಮುಕ್ತಿ ಮೋರ್ಚಾದ ಅಧ್ಯಕ್ಷರಾಗಿದ್ದಾರೆ.
#WamanMeshram.
आजादी का आगाज हुआ।
ईवीएम फोड़ेंगे। pic.twitter.com/mafWyyS9ZT— Somesh Meshram (@SomeshMeshram6) January 31, 2024
ಇವಿಎಂಗಳ ವಿರುದ್ಧದ ಪ್ರತಿಭಟನೆ ಎಂದು ವಿಡಿಯೋಗಳನ್ನು ಹಂಚಿಕೊಳ್ಳಲಾದ ಆ ಸಮಯದ ಹಲವು ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಜನವರಿ 31, 2024 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಈ ಪ್ರತಿಭಟನೆ ನಡೆಯಿತು ಎಂದು ಹೇಳಲಾಗಿದೆ. ಈ ಮೂಲಕ ಈ ವಿಡಿಯೋ ಇತ್ತೀಚಿನದಲ್ಲ ಎಂಬುದು ಇಲ್ಲಿಂದ ಸ್ಪಷ್ಟವಾಗುತ್ತದೆ.
ಇದರ ನಂತರ, ವಾಮನ್ ಮೇಶ್ರಾಮ್ ಅವರ ಫೇಸ್‌ಬುಕ್ ಖಾತೆಯಲ್ಲಿ (https://www.facebook.com/watch/?v=1817287838684715) ಜನವರಿ 31, 2024 ರ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಪೋಸ್ಟ್‌ನಲ್ಲಿ ಈ ಚಳುವಳಿಯ ಮತ್ತೊಂದು ವಿಡಿಯೋ ಕೂಡ ಇದೆ. ಅದರಲ್ಲಿ ಹಸಿರು ಮತ್ತು ಹಳದಿ ಬಣ್ಣದ ಬೋರ್ಡ್ ಕಾಣಿಸುತ್ತಿದ್ದು, ವೈರಲ್ ವಿಡಿಯೋದಲ್ಲೂ ಇದನ್ನು ಕಾಣಬಹುದು. ಅಲ್ಲದೆ, ರಸ್ತೆಯಲ್ಲಿ ನೆರೆದಿದ್ದ ಜನರ ಕೈಯಲ್ಲಿ ಕಂಡುಬರುವ ಧ್ವಜಗಳು ಸಹ ವೈರಲ್ ವಿಡಿಯೋದಲ್ಲಿನ ಧ್ವಜಗಳಿಗೆ ಹೊಂದಿಕೆಯಾಗುತ್ತವೆ.
ಈ ಪ್ರತಿಭಟನೆಯ ಕುರಿತು ಪ್ರಕಟವಾದ ಸುದ್ದಿಯ ಪ್ರಕಾರ, ಜನವರಿ 31, 2024 ರಂದು, ಭಾರತ್ ಮುಕ್ತಿ ಮೋರ್ಚಾ ದೆಹಲಿಯ ಜಂತರ್ ಮಂತರ್‌ನಲ್ಲಿ ಇವಿಎಂಗಳ ವಿರುದ್ಧ ಪ್ರತಿಭಟನೆ ನಡೆಯಿತು. ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಕರ್ಣಿ ಸೇನೆಯ ಅಧ್ಯಕ್ಷ ರಾಜ್ ಶೇಖಾವತ್ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿರುವ ಈ ನಗರದಲ್ಲಿ ಇಂಟರ್ನೆಟ್ ಇಲ್ಲ, ಫೋನ್ ಇಲ್ಲ, ವೈ-ಫೈ, ಮೈಕ್ರೋವೇವ್ ಇಲ್ಲವೇ ಇಲ್ಲ
ಇದರ ನಂತರ, ನಾವು ಫೇಸ್‌ಬುಕ್‌ನಲ್ಲಿ ಈ ಸಂಪೂರ್ಣ ಪ್ರತಿಭಟನೆಯ ಲೈವ್ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ನಾಯಕರು ಒಬ್ಬರ ನಂತರ ಒಬ್ಬರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದರಲ್ಲಿ 1:55:58 ಸೆಕೆಂಡುಗಳ ನಂತರ, ವೈರಲ್ ವಿಡಿಯೋದ ಘೋಷಣೆಯನ್ನು ಜನರು ಕೂಗುತ್ತಿರುವುದನ್ನು ಕೇಳಬಹುದು. ಈ ಘೋಷಣೆಗಳನ್ನು ನ್ಯಾಷನಲ್ ಯುನೈಟೆಡ್ ಫ್ರಂಟ್‌ನ ರಾಷ್ಟ್ರೀಯ ಅಧ್ಯಕ್ಷರಾದ ಡಿ.ಸಿ.ಕಪಿಲ್ ಅವರು ಕೂಗಿದ್ದಾರೆ.
ಜನವರಿ 2024 ರಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇವಿಎಂಗಳ ವಿರುದ್ಧ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆಯ ವಿಡಿಯೋವನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಮಾಡಲಾಗಿದೆ ಎಂದು ಹೇಳುವ ಮೂಲಕ ಈಗ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ