Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾಕಾಂಡ ಎಂದು ಫೇಕ್ ವಿಡಿಯೋ ವೈರಲ್

ಈ ವಿಡಿಯೋ ಬಾಂಗ್ಲಾದೇಶದ ವಿವಿಧ ಕಾಲೇಜು ವಿದ್ಯಾರ್ಥಿಗಳ ನಡುವಿನ ಹೊಡೆದಾಟಕ್ಕೆ ಸಂಬಂಧಿಸಿದೆ. ಇದು ಬಾಂಗ್ಲಾದೇಶಿ ಹಿಂದೂಗಳ ಮೇಲೆ ಮುಸ್ಲಿಮರು ದೌರ್ಜನ್ಯ ಮಾಡಿರುವುದಲ್ಲ. ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾಕಾಂಡ ಎಂದು ಫೇಕ್ ವಿಡಿಯೋ ವೈರಲ್
Fact Check
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Nov 28, 2024 | 2:17 PM

ಇಸ್ಕಾನ್ ದೇವಾಲಯದ ಪ್ರಮುಖ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ನಂತರ ಬಾಂಗ್ಲಾದೇಶದಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ಅವರನ್ನು ದೇಶದ್ರೋಹದ ಆರೋಪದ ಮೇಲೆ ನವೆಂಬರ್ 25 ರಂದು ಬಂಧಿಸಲಾಯಿತು. ಈ ಬೆಳವಣಿಗೆಗಳ ನಡುವೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಕೆಲವರು ದೊಣ್ಣೆಯಿಂದ ಹೊಡೆದು ವಿಧ್ವಂಸಕ ಕೃತ್ಯ ಎಸಗುತ್ತಿದ್ದಾರೆ. ಇದರಲ್ಲಿ ಕಾಲೇಜು ಕಟ್ಟಡವೊಂದರ ಗಾಜು ಒಡೆದಿರುವುದು ಸಹ ಗೋಚರಿಸುತ್ತದೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾಕಾಂಡವು ಭಾರತ ಮತ್ತು ಪ್ರಪಂಚದ ಇತರ ಹಿಂದೂಗಳ ಕಣ್ಣು ತೆರೆಸುವಂತಿದೆ. ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗಿನಿಂದ ಬಾಂಗ್ಲಾದೇಶದಲ್ಲಿರುವ ನಿಮ್ಮ ಸಹೋದರ ಸಹೋದರಿಯರನ್ನು ಒಂಟಿಯಾಗಿ ಬಿಡಬೇಡಿ,’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋ ಬಾಂಗ್ಲಾದೇಶದ ವಿವಿಧ ಕಾಲೇಜು ವಿದ್ಯಾರ್ಥಿಗಳ ನಡುವಿನ ಹೊಡೆದಾಟಕ್ಕೆ ಸಂಬಂಧಿಸಿದೆ. ಇದು ಬಾಂಗ್ಲಾದೇಶಿ ಹಿಂದೂಗಳ ಮೇಲೆ ಮುಸ್ಲಿಮರು ದೌರ್ಜನ್ಯ ಮಾಡಿರುವುದಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ವಿಡಿಯೋದಲ್ಲಿ ‘bdnews24.com’ ಲೋಗೋ ಇರುವುದು ಕಂಡುಬಂದಿದೆ. ಈ ಮಾಹಿತಿಯನ್ನು ಆಧರಿಸಿ ನಾವು ಗೂಗಲ್​ನಲ್ಲಿ ಕೀವರ್ಡ್ ಹುಡುಕಾಟವನ್ನು ಮಾಡಿದ್ದೇವೆ. ಆಗ bdnews24.com ನ ಅಧಿಕೃತ ಯೂ ಟ್ಯೂಬ್ ಚಾನಲ್‌ನಲ್ಲಿ ನಾವು ಈ ವೈರಲ್ ವೀಡಿಯೊದ ದೃಶ್ಯಗಳನ್ನು ನೋಡಬಹುದಾದ ಹಲವು ವಿಡಿಯೋಗಳನ್ನು ಕಂಡುಕೊಂಡಿದ್ದೇವೆ.

ಈ ವಿಡಿಯೋಗಳಲ್ಲಿ ಒಂದರ ಶೀರ್ಷಿಕೆ ಮತ್ತು ವಿವರಣೆಯ ಪ್ರಕಾರ, ಬಾಂಗ್ಲಾದೇಶದ ಢಾಕಾದಲ್ಲಿರುವ ಡಾ. ಮಹಬೂಬುರ್ ರಹಮಾನ್ ಮೊಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಶಹೀದ್ ಸುಹ್ರವರ್ದಿ ಕಾಲೇಜು ಮತ್ತು ಕಬಿ ನಜ್ರುಲ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಘರ್ಷಣೆ ನಡೆಸಿದರು ಎಂದು ಬರೆಯಲಾಗಿದೆ.

ಇದಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಹುಡುಕಿದಾಗ, ಈ ಘಟನೆಯು ಬಾಂಗ್ಲಾದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಸಂಬಂಧಿಸಿದೆ ಎಂದು ಬರೆಯಲಾದ ಅನೇಕ ಬಾಂಗ್ಲಾ ವೆಬ್​ಸೈಟ್​ನ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.

ನವೆಂಬರ್ 16 ರಂದು, 12 ನೇ ತರಗತಿಯ ವಿದ್ಯಾರ್ಥಿ ಅಭಿಜೀತ್ ಹಲ್ದಾರ್ ಡೆಂಗ್ಯೂ ನಿಂದ ಬಳಲುತ್ತಿದ್ದರು, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿ ಅವರು ನವೆಂಬರ್ 18 ರಂದು ನಿಧನರಾದರು. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಸೂಕ್ತ ಚಿಕಿತ್ಸೆ ನೀಡದಿರುವುದು ಅವರ ಸಾವಿಗೆ ಕಾರಣವಾಯಿತು ಎಂದು ಸಹ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದಾದ ನಂತರ ಹಲವು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಆದರೆ, ಢಾಕಾ ನ್ಯಾಷನಲ್ ಮೆಡಿಕಲ್ ಕಾಲೇಜು ಆಸ್ಪತ್ರೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

ವರದಿಗಳ ಪ್ರಕಾರ, ವಿದ್ಯಾರ್ಥಿಯ ಸಾವಿನ ವಿರುದ್ಧದ ಪ್ರತಿಭಟನೆ ಕೆಲವೇ ಸಮಯದಲ್ಲಿ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಸರ್ಕಾರಿ ಶಹೀದ್ ಸುಹ್ರವರ್ದಿ ಕಾಲೇಜು ಮತ್ತು ಕಬಿ ನಜ್ರುಲ್ ಸರ್ಕಾರಿ ಕಾಲೇಜುಗಳನ್ನು ಧ್ವಂಸಗೊಳಿಸಿದರು ಮತ್ತು ಹತ್ತಿರದ ಅಂಗಡಿಗಳ ಮೇಲೂ ದಾಳಿ ಮಾಡಿದರು. ಢಾಕಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಡಾ. ಮಹಬೂಬುರ್ ರಹಮಾನ್ ಮೊಲ್ಲಾ ಕಾಲೇಜಿನ ವಿದ್ಯಾರ್ಥಿಗಳೇ ಈ ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಢಾಕಾ ಟ್ರಿಬ್ಯೂನ್ ಪ್ರಕಾರ, ಮರುದಿನ ಇತರ ಎರಡು ಕಾಲೇಜುಗಳ ವಿದ್ಯಾರ್ಥಿಗಳು ಡಾ. ಮಹಬೂಬುರ್ ರೆಹಮಾನ್ ಮೊಲ್ಲಾ ಕಾಲೇಜನ್ನು ಧ್ವಂಸಗೊಳಿಸಿದರು ಮತ್ತು ಅವರ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳಲು ಅಲ್ಲಿನ ವಿದ್ಯಾರ್ಥಿಗಳನ್ನು ಥಳಿಸಿದರು. ಹಲವು ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಈ ಘರ್ಷಣೆಯಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಸಂಬಂಧಿಸಿದ ವಿಡಿಯೋ ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದರಿಂದ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯ ವಿಡಿಯೋವನ್ನು ಕೋಮು ಬಣ್ಣ ಬಳಿದು ಶೇರ್ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ