ಉತ್ತರ ಪ್ರದೇಶದ ದೇವಸ್ಥಾನವೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಕ್ತರು ತೀರ್ಥ ಎಂದು ಭಾವಿಸಿ ಎಸಿಯಿಂದ ನೀರು ಕುಡಿಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇದೀಗ ಈ ವಿಡಿಯೋದ ಸ್ಕ್ರೀನ್ ಶಾಟ್ ಇರುವ ಪೋಸ್ಟ್ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕಾಣುತ್ತಿರುವುದು ನಿಜವಾದ ತೀರ್ಥ, ಅದು ಎಸಿ ನೀರು ಅಲ್ಲ. ಎಸಿ ನೀರು ಎಂದು ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಏಸಿಯಿಂದ ಬರುವ ನೀರು ತೀರ್ಥ ಅಲ್ಲ ಎಂದು ಕೆಲ ಮುಸ್ಲಿಮರು ಈ ರೀತಿಯ ವೀಡಿಯೊ ಪೋಸ್ಟ್ ಮಾಡಿ ಹಿಂದೂ ಕುಲಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿರುವ ವಿಗ್ರಹಕ್ಕೆ ಅಭಿಷೇಕ ಮಾಡಿ ಹೊರ ಹರಿಯುತ್ತಿದೆ. ಅದು ತೀರ್ಥವೇ.!!’’ ಎಂದು ಬರೆದುಕೊಂಡಿದ್ದಾರೆ.
ಏಸಿಯಿಂದ ಬರುವ ನೀರು ತೀರ್ಥ ಅಲ್ಲ ಎಂದು ಕೆಲ ಮುಸ್ಲಿಮರು ಈ ರೀತಿಯ ವೀಡಿಯೊ ಪೋಸ್ಟ್ ಮಾಡಿ ಹಿಂದೂ ಕುಲಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿರುವ ವಿಗ್ರಹಕ್ಕೆ ಅಭಿಷೇಕ ಮಾಡಿ ಹೊರ ಹರಿಯುತ್ತಿದೆ. ಅದು ತೀರ್ಥವೇ.!! pic.twitter.com/tnTDPtoyyD
— ಅರುಣ್ ಕುಮಾರ್ ಹಿಂದೂ 🚩 (@arukumrhin11669) November 8, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದ ಟಿವಿ9 ಕನ್ನಡ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಾವು ನಡೆಸಿದ ತನಿಖೆಯ ಪ್ರಕಾರ ಈ ವೈರಲ್ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ ಎಂದು ಕಂಡುಬಂದಿದೆ. ಇಲ್ಲಿ ಎಸಿಯಿಂದ ಹೊರಬರುವ ನೀರನ್ನು ತೀರ್ಥ ಎಂದು ತಪ್ಪಾಗಿ ಜನರು ಕುಡಿದಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ಮೊದಲು ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ತೀರ್ಥ ಎಂದು ಭಾವಿಸಿ ಎಸಿ ನೀರು ಕುಡಿಯುವುದಕ್ಕೆ ಸಂಬಂಧಿಸಿದ ಸುದ್ದಿಯನ್ನು ಪರಿಶೀಲಿಸಿದೆವು. ಆಗ ಈ ಘಟನೆಗೆ ಸಂಬಂಧಿಸಿದ ಅನೇಕ ಸುದ್ದಿಗಳು ನಮಗೆ ಸಿಕ್ಕಿವೆ. ಸ್ವತಃ ಟಿವಿ9 ಕನ್ನಡ ನವೆಂಬರ್ 4, 2024 ರಂದು ‘‘ಪುಣ್ಯ ಜಲ ಎಂದು ತಪ್ಪಾಗಿ ಭಾವಿಸಿ ಎಸಿ ನೀರನ್ನು ಕುಡಿದ ಭಕ್ತರು; ವಿಡಿಯೋ ವೈರಲ್’’ ಎಂದು ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.
Viral: ಪುಣ್ಯ ಜಲ ಎಂದು ತಪ್ಪಾಗಿ ಭಾವಿಸಿ ಎಸಿ ನೀರನ್ನು ಕುಡಿದ ಭಕ್ತರು; ವಿಡಿಯೋ ವೈರಲ್
ನಂತರ ಮಥುರಾ ಬಂಕೆ ಬಿಹಾರಿ ದೇವಸ್ಥಾನದ ಅಧಿಕಾರಿಗಳು ಈ ಘಟನೆ ಬಗ್ಗೆ ಏನಾದರು ಹೇಳಿಕೆ ನೀಡಿದ್ದಾರೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಈ ಬಗ್ಗೆ ದೇವಸ್ಥಾನದ ಅರ್ಚಕರಲ್ಲೊಬ್ಬರಾದ ದಿನೇಶ್ ಗೋಸ್ವಾಮಿ ವಿವರಣೆ ನೀಡಿರುವುದು ನಮಗೆ ಸಿಕ್ಕಿದೆ. ತೀರ್ಥ ಎಂದು ಜನರು ತಪ್ಪಾಗಿ ಎಸಿ ನೀರು ಕುಡಿದಿದ್ದಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ. ವರದಿಯ ಪ್ರಕಾರ, ಮತ್ತೊಬ್ಬ ಅರ್ಚಕ ಮೋಹನ್ ಗೋಸ್ವಾಮಿ ಕೂಡ ಇದನ್ನು ಪುನರುಚ್ಚರಿಸಿದ್ದಾರೆ ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆ ಸಂಭಾಜಿ ಮಹರಾಜ ಯಾರು? ಈ ಭೂಮಿ ನಿಜಾಮರಿಗೆ ಸೇರಿದ್ದು; ಮುಸ್ಲಿಂ ಮಹಿಳೆಯ ವಿವಾದಾತ್ಮಕ ಹೇಳಿಕೆ
‘‘ನಾವು ದೇವರಲ್ಲಿನ ಜನರ ನಂಬಿಕೆಯನ್ನು ಗೌರವಿಸುತ್ತೇವೆ, ಆದರೆ ಅದರ ಬಗ್ಗೆ ಅವರಿಗೆ ತಿಳಿಸುವುದು ಮುಖ್ಯ. 'ಚರಣ್ ಅಮೃತ್' ಎಂದು ಅವರು ನಂಬಿರುವ ನೀರು ವಾಸ್ತವವಾಗಿ ಎಸಿಯಿಂದ ಬಂದ ನೀರು. ನಿಜವಾದ 'ಚರಣ್ ಅಮೃತ್' ತುಳಸಿ ಮತ್ತು ಗುಲಾಬಿ ದಳಗಳಂತಹ ಅಂಶಗಳನ್ನು ಒಳಗೊಂಡಿರುತ್ತದೆ,’’ ಎಂದು ದಿನೇಶ್ ಗೋಸ್ವಾಮಿ ಹೇಳಿದ್ದಾರೆ.
ದಿನೇಶ್ ಗೋಸ್ವಾಮಿ ಅವರನ್ನು ಉಲ್ಲೇಖಿಸಿ ಟಿವಿ0 ಭಾರತ್ ವರ್ಷ್ ಕೂಡ ವರದಿಯನ್ನು ಪ್ರಕಟಿಸಿದೆ. ಈ ವರದಿಯನ್ನು ಇಲ್ಲಿ ಓದಬಹುದು.
ಹೀಗಾಗಿ ಉತ್ತರ ಪ್ರದೇಶದ ದೇವಸ್ಥಾನದಲ್ಲಿ ಭಕ್ತರು ಸೇವಿಸಿದ್ದು ತೀರ್ಥವಲ್ಲ, ಎಸಿಯಿಂದ ಹೊರ ಬಂದ ನೀರು ಎಂದು ಲಭ್ಯವಾಗಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Fri, 8 November 24