ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ, ಒಬ್ಬ ವ್ಯಕ್ತಿಯು ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಕೇರಳದ ಡೈರಿ ಪ್ಲಾಂಟ್‌ನಲ್ಲಿ ಮುಸ್ಲಿಂ ಉದ್ಯೋಗಿಯೊಬ್ಬರು ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿದ್ದಾರೆ ಮತ್ತು ಇದೇ ಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡ, ‘‘ಕೇರಳದ ಹಾಲಿನ ಡೈರಿ (ಕಾರ್ಖಾನೆ) ಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ನೋಡಿ ಮತ್ತು ಅದೇ ಹಾಲನ್ನು ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ನಿಜವೋ ಅಲ್ಲವೋ ಎಂಬುದು ಮುಖ್ಯವೇ?’’ ಎಂದು ಬರೆದುಕೊಂಡಿದ್ದಾರೆ.
केरल की एक दूध डेयरी (फैक्ट्री) का नजारा देखिए
जहां एक मुस्लिम व्यक्ति दूध के टब में नहा रहा है और वही दूध पैक करके बाजार में बेचा जा रहा है
इस घटना की जांच होना जरुरी है कि ये बात सच है या नहीं ??? pic.twitter.com/yNpSDNuUfc— बकरी वाले मौलाना (बकरी न्यूज़) (@rajasolank71070) November 6, 2024
ಈ ವಿಡಿಯೋವನ್ನು ಇದೇ ಹೇಳಿಕೆಯೊಂದಿಗೆ ಇತರ ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಕೇರಳ ಅಥವಾ ಭಾರತದ್ದೇ ಅಲ್ಲ. ಈ ಘಟನೆ ನಡೆದಿರುವುದು ಟರ್ಕಿಯಲ್ಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ‘Bath Milk Worker’ ಎಂಬ ಕೀವರ್ಡ್ ಬಳಸಿ ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ಇದಕ್ಕೆ ಸಂಬಂಧಿಸಿದ ಅನೇಕ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಘಟನೆ 2020 ರಲ್ಲಿ ಟರ್ಕಿಯಲ್ಲಿ ನಡೆದಿರುವುದಾಗಿದೆ. ಟಿವಿ9 ತೆಲುಗು ನವೆಂಬರ್ 9, 2020 ರಂದು ಈ ಘಟನೆ ಕುರಿತು ಸುದ್ದಿ ಪ್ರಕಟಿಸಿದ್ದು, ಈ ವಿಡಿಯೋ ಟರ್ಕಿಯಿಂದ ಬಂದಿದೆ ಎಂದು ವಿವರಿಸಲಾಗಿದೆ.
ವರದಿಗಳ ಪ್ರಕಾರ, ಈ ವೀಡಿಯೊವು ಮಧ್ಯ ಅನಾಟೋಲಿಯನ್ ಪ್ರಾಂತ್ಯದ ಕೋನಿಯಲ್ಲಿರುವ ಡೈರಿ ಪ್ಲಾಂಟ್ನದ್ದಾಗಿದೆ. ಹಾಲಿನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಎಮ್ರೆ ಸಾಯರ್ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಕಾಣಿಸಿಕೊಂಡ ನಂತರ ಡೈರಿ ಪ್ಲಾಂಟ್ ಅನ್ನು ಸಹ ಮುಚ್ಚಲಾಗಿದೆ. ಆದರೆ, ಈ ವ್ಯಕ್ತಿಯು ಹಾಲಿನಲ್ಲಿ ಸ್ನಾನ ಮಾಡಲಿಲ್ಲ, ನೀರು ಮತ್ತು ಶುಚಿಗೊಳಿಸುವ ದ್ರವದ ಮಿಶ್ರಣದಲ್ಲಿ ಆತ ಇದ್ದ ಎಂದು ಮಾಲೀಕರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Fact Check: ತೆಲಂಗಾಣದ ಹನುಮಾನ್ ಮಂದಿರದ ಧ್ವಂಸ ಘಟನೆಗೆ ಕೋಮು ಬಣ್ಣ: ನಿಜವಾಗಿ ನಡೆದಿದ್ದೇನು?
ಇನ್ನು ಟರ್ಕಿಯ ಸುದ್ದಿ ವಾಹಿನಿಯ ವರದಿಯ ಪ್ರಕಾರ, ಈ ಘಟನೆ ಟರ್ಕಿಯ ಕೊನ್ಯಾ ನಗರದಲ್ಲಿ ನಡೆದಿದೆ. ಕೊನ್ಯಾದಲ್ಲಿನ ಡೈರಿ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಮ್ರೆ ಸಾಯರ್ ಅವರನ್ನು ಹಾಲಿನಲ್ಲಿ ಸ್ನಾನ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 6, 2020 ರಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಂಡ ಪ್ಲಾಂಟ್‌ನ ಇನ್ನೊಬ್ಬ ಕೆಲಸಗಾರ ಉಗುರ್ ತುರ್ಗುಟ್ ಅವರನ್ನು ಸಾಯಾರ್ ಜೊತೆಗೆ ಬಂಧಿಸಲಾಯಿತು. ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಡೈರಿ ಪ್ಲಾಂಟ್‌ಗೆ ದಂಡ ವಿಧಿಸಲಾಗಿದೆ ಮತ್ತು ಅವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಲ್ಲಿದೆ.
ಹೀಗಾಗಿ ವೈರಲ್ ವಿಡಿಯೋ ಇತ್ತೀಚಿನದಲ್ಲ ಮತ್ತು ಕೇರಳದ್ದಲ್ಲ ಎಂದು ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ಸ್ಪಷ್ಟವಾಗಿದೆ. ಈ ವಿಡಿಯೋ 2020 ರದ್ದಾಗಿದೆ. ಟರ್ಕಿಯ ಡೈರಿ ಪ್ಲಾಂಟ್‌ನಲ್ಲಿ ನಡೆದ ಘಟನೆ ಇದಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸದ್ಯ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ