ಅಮೆರಿಕಾದ ರಸ್ತೆಗಳಲ್ಲೂ ಹೊಂಡ, ಗುಂಡಿ ಸಮಸ್ಯೆ; ಬಾಳೆ ಮರ ನೆಟ್ಟು ಪ್ರತಿಭಟಿಸಿದ ಜನ

| Updated By: Skanda

Updated on: Sep 12, 2021 | 8:28 AM

ಅಮೆರಿಕಾದ ಫ್ಲೋರಿಡಾದಲ್ಲಿನ ರಸ್ತೆ ಗುಂಡಿಯೊಂದರ ಸಮಸ್ಯೆ ಹಾಗೂ ಅದಕ್ಕೆ ಜನ ಪ್ರತಿಭಟಿಸಿದ ರೀತಿ ಸಿಕ್ಕಾಪಟ್ಟೆ ವೈರಲ್​ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿಯನ್ನು ಅಲ್ಲಿನ ಸುದ್ದಿ ವಾಹಿನಿಯೊಂದು ಬಿತ್ತರಿಸಿದ್ದು, ರಸ್ತೆಯಲ್ಲಿನ ಗುಂಡಿಗೆ ಜನ ಬಾಳೆ ಮರ ನೆಟ್ಟು ಪ್ರತಿಭಟಿಸಿರುವ ಕುರಿತು ಗಮನ ಸೆಳೆದಿದೆ.

ಅಮೆರಿಕಾದ ರಸ್ತೆಗಳಲ್ಲೂ ಹೊಂಡ, ಗುಂಡಿ ಸಮಸ್ಯೆ; ಬಾಳೆ ಮರ ನೆಟ್ಟು ಪ್ರತಿಭಟಿಸಿದ ಜನ
ರಸ್ತೆ ನಡುವಲ್ಲಿ ಬಾಳೆ ಮರ ನೆಟ್ಟಿರುವುದು
Follow us on

ರಸ್ತೆಗಳಲ್ಲಿ ಗುಂಡಿ ಬೀಳುವುದು ನಮ್ಮಲ್ಲಿ ಅತೀ ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಒಮ್ಮೆ ತಿರುಗಾಡಿದರೆ ಹೆಜ್ಜೆಗೊಂದರಂತೆ ಗುಂಡಿ ಸಿಕ್ಕರೂ ಅಚ್ಚರಿಯಿಲ್ಲ. ಇನ್ನು ಗ್ರಾಮೀಣ ಪ್ರದೇಶಗಳ ರಸ್ತೆಗಳ ಕತೆಯಂತೂ ಕೇಳುವುದೇ ಬೇಡ. ಕೆಲವೆಡೆ ರಸ್ತೆಗಳಲ್ಲಿ ಗುಂಡಿಯೋ, ಗುಂಡಿಗಳ ನಡುವೆ ರಸ್ತೆಯೋ ಎನ್ನುವಂತಹ ಗಂಭೀರ ಪರಿಸ್ಥಿತಿ ಇರುತ್ತದೆ. ಜನಸಾಮಾನ್ಯರು ಆ ಗುಂಡಿಗಳ ಅವಸ್ಥೆಯನ್ನು ದೂಷಿಸುತ್ತಾ ಅದೇ ನೆಪದಲ್ಲಿ ಜನಪ್ರತಿನಿಧಿಗಳಿಗೆ ಒಂದಷ್ಟು ಬೈದು, ಮುಂದಿನ ಚುನಾವಣೆಗೆ ಮತ ಕೇಳಲು ಬಂದರೆ ಆ ಗುಂಡಿಯಲ್ಲೇ ನಿಲ್ಲಿಸುತ್ತೇವೆ ಎಂದೆಲ್ಲಾ ಆಕ್ರೋಶ ಹೊರಹಾಕುತ್ತಾರೆ. ಇನ್ನು ಕೆಲವರು ರಸ್ತೆಯ ಗುಂಡಿಗಳಲ್ಲೇ ಮರ ಗಿಡಗಳನ್ನು ನೆಟ್ಟು ವಿಭಿನ್ನವಾಗಿ ಪ್ರತಿಭಟಿಸುತ್ತಾರೆ. ಇದು ಭಾರತೀಯರ ಪಾಲಿಗೆ ತೀರಾ ಹೊಸ ವಿಷಯ ಏನಲ್ಲ. ಆದರೆ, ಇಂದು ಈ ಸುದ್ದಿಗೆ ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವೇನು ಎಂದರೆ ಇದು ಭಾರತದ ಸಮಸ್ಯೆಯಷ್ಟೇ ಅಲ್ಲ ಬದಲಾಗಿ ಜಾಗತಿಕ ಮಟ್ಟದಲ್ಲೇ ಗುಂಡಿಗಳ ಸಮಸ್ಯೆ ಹಬ್ಬಿಕೊಂಡಿದೆ. ಇದಕ್ಕೆ ಅಮೆರಿಕವೂ ಹೊರತಾಗಿಲ್ಲ ಎನ್ನುವುದು.

ಕಳೆದ ಒಂದೆರೆಡು ದಿನಗಳಿಂದ ಅಮೆರಿಕಾದ ಫ್ಲೋರಿಡಾದಲ್ಲಿನ ರಸ್ತೆ ಗುಂಡಿಯೊಂದರ ಸಮಸ್ಯೆ ಹಾಗೂ ಅದಕ್ಕೆ ಜನ ಪ್ರತಿಭಟಿಸಿದ ರೀತಿ ಸಿಕ್ಕಾಪಟ್ಟೆ ವೈರಲ್​ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿಯನ್ನು ಅಲ್ಲಿನ ಸುದ್ದಿ ವಾಹಿನಿಯೊಂದು ಬಿತ್ತರಿಸಿದ್ದು, ರಸ್ತೆಯಲ್ಲಿನ ಗುಂಡಿಗೆ ಜನ ಬಾಳೆ ಮರ ನೆಟ್ಟು ಪ್ರತಿಭಟಿಸಿರುವ ಕುರಿತು ಗಮನ ಸೆಳೆದಿದೆ. ರಸ್ತೆಯಲ್ಲಿನ ಗುಂಡಿಗಳನ್ನು ನೋಡಿ ನೋಡಿ ಅದರಿಂದ ಬೇಸತ್ತು, ಇನ್ನು ಪ್ರತಿಭಟಿಸದೇ ಇದ್ದರೆ ಪರಿಹಾರವೇ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಹೀಗೆ ಬಾಳೆಮರ ನೆಟ್ಟಿದ್ದಾನೆ ಎನ್ನಲಾಗಿದೆ.

ಫ್ಲೋರಿಡಾದ ರಸ್ತೆಯೊಂದರಲ್ಲಿ ದೊಡ್ಡ ಹೊಂಡವೊಂದು ಬಿದ್ದಿದ್ದು ವಾಹನ ಸವಾರರು ಅಚಾನಕ್​ ಆಗಿ ಗುಂಡಿಗೆ ವಾಹನ ಹಾರಿಸಿ ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಸ್ಥಳೀಯ ಆಡಳಿತದ ಗಮನ ಸೆಳೆಯಲು ಆ ವ್ಯಕ್ತಿ ರಸ್ತೆಯ ನಡುವಲ್ಲೇ ದೊಡ್ಡ ಬಾಳೆ ಮರವೊಂದನ್ನು ತಂದು ನೆಟ್ಟಿದ್ದಾನೆ. ಬ್ರಿಯಾನ್​ ರೇಮಂಡ್​ ಎಂಬಾತನನ್ನು ಈ ಪ್ರತಿಭಟನೆಯ ರೂವಾರಿ ಎಂದು ಗುರುತಿಸಲಾಗಿದೆ. ಮೊದಲೆಲ್ಲಾ ಸಿಮೆಂಟ್​ ತಂದು ರಸ್ತೆಯ ಗುಂಡಿಗಳನ್ನು ತಾನೇ ತುಂಬುತ್ತಿದ್ದ ಬ್ರಿಯಾನ್​ ರೇಮಂಡ್ ಕಡೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಬೇಸತ್ತು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:
ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ವೃದ್ಧ ಬಲಿ 

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು; ಬಿಬಿಎಂಪಿ ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ

(Florida man plants banana tree in pothole to warn commuters photo gone viral)