
ಮದುವೆ (Weeding), ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಸಾಮಾನ್ಯವಾಗಿ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ಆಹ್ವಾನಿಸುವುದು ಸಂಪ್ರದಾಯ. ಆದರೆ ಕೆಲವರು ಆಹ್ವಾನವಿಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡುವುದು ಕೂಡ ಇರುತ್ತದೆ. ವಿಶೇಷವಾಗಿ ನಗರಗಳಲ್ಲಿ ಇಂಥ ‘(Gatecrashing) ಗೇಟ್ ಕ್ರ್ಯಾಶಿಂಗ್ (ಆಹ್ವಾನವಿಲ್ಲದೆ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು)’ ನಡೆಯತ್ತದೆ. ‘ಅತಿಥಿ ದೇವೋ ಭವ (ಅತಿಥಿಗಳನ್ನೇ ದೇವರು ಎಂದು ಪರಿಗಣಿಸುವ)’ ಎಂಬ ದೇಶ ನಮ್ಮದಾಗಿರುವ ಕಾರಣ ಇದು ದೊಡ್ಡದಲ್ಲ ಬಿಡಿ. ಸಮಾರಂಭಕ್ಕೆ ಬಂದವರಿಗೆ ಉಪಚಾರ ಮಾಡಿ ಕಳುಹಿಸಲಾಗುತ್ತದೆ.
ಆದರೆ, ಈಗ ಕಾಲ ಬದಲಾಗುತ್ತಿದೆ. ಈ ದುಬಾರಿ ದುನಿಯಾದಲ್ಲಿ ಕರೆಯದೇ ಬಂದವರನ್ನು ಸ್ವಾಗತಿಸಿ ಊಟ ಹಾಕಲೇಬೇಕೆಂದೇನಿಲ್ಲವಲ್ಲ! ಅದು ಹಾಗಿರಲಿ. ಆಹ್ವಾನವಿಲ್ಲದೆ ಮದುವೆ ಅಥವಾ ಇತರ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು ಕಾನೂನುಬಾಹಿರ ಆಗಬಹುದು ಎಂಬ ಕಲ್ಪನೆಯೂ ಅನೇಕರಿಗೆ ಇರಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಯಕ್ರಮಗಳ ಆಯೋಜಕರು ಆಹ್ವಾನಿಸದೇ ಊಟಕ್ಕೆ ಬರುವವರನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ‘ತೆಲುಗು’ ಬೋರ್ಡ್ ಒಂದು ಇದೀಗ ವೈರಲ್ ಆಗುತ್ತಿದೆ.
ಸಮಾರಂಭವೊಂದರ ಹಾಲ್ನ ಹೊರಭಾಗದಲ್ಲಿ ಹಾಕಲಾಗಿರುವ ಬೋರ್ಡ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸಮಾರಂಭಕ್ಕೆ ಸಂಬಂಧಿಸದವರು ಒಳಗೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಂಥವರಿಗೆ ಸೆಕ್ಷನ್ 441 ರ ಅಡಿಯಲ್ಲಿ 3 ತಿಂಗಳು ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಂದು ಆ ಬೋರ್ಡ್‌ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441 (ಈಗ ಭಾರತೀಯ ನ್ಯಾಯ ಸಂಹಿತಾ ಅಥವಾ BNS ಎಂದು ಬದಲಾಗಿದ್ದು, ಸೆಕ್ಷನ್ 329 ಆಗಿದೆ) ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದೆ. ಅಂದರೆ, ಯಾರಾದರೂ ವ್ಯಕ್ತಿಯ ಖಾಸಗಿ ಆಸ್ತಿ ಅಥವಾ ಅವರು ಕಾರ್ಯಕ್ರಮ ನಡೆಸುತ್ತಿರುವ ಸ್ಥಳಕ್ಕೆ ಅವರ ಅನುಮತಿಯಿಲ್ಲದೆ ಪ್ರವೇಶಿಸಿದರೆ ಅದು ಅಪರಾಧವಾಗುತ್ತದೆ.
ಈ ನಿಯಮದ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ ಎಂದು ಕಾನೂನು ಹೇಳುತ್ತದೆ. ಕೆಲ ಸಂದರ್ಭಗಳಲ್ಲಿ ಆಯೋಜಕರು ದಂಡ ವಿಧಿಸುವ ಬಗ್ಗೆ ಕೂಡಾ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ
ಹೀಗಾಗಿ, ಆಹ್ವಾನಿಸದ ಮದುವೆ ಅಥವಾ ಸಮಾರಂಭಗಳಿಗೆ ಹೋಗಿ ಊಟ ಮಾಡುವ ಮುನ್ನ ಅದರ ಕಾನೂನು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂಬ ಚರ್ಚೆ ಈಗ ಶುರುವಾಗಿದೆ. ಒಟ್ಟಿನಲ್ಲಿ, ಮೋಜಿಗಾಗಿ ಅಥವಾ ಉಚಿತ ಊಟಕ್ಕಾಗಿ ‘ಗೇಟ್ ಕ್ರ್ಯಾಶಿಂಗ್’ ಮಾಡುವವರು ಇಂತಹ ಕಾನೂನು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ