Viral Video : ಇತ್ತೀಚೆಗಷ್ಟೇ ಜರ್ಮನಿಯ ಸೊಸೆಯೊಬ್ಬಳು ಉತ್ತರಭಾರತದ ಅತ್ತೆಯೊಂದಿಗೆ ಹೊಲದಲ್ಲಿ ಈರುಳ್ಳಿ ನಾಟಿ ಮಾಡುತ್ತಿರುವ ವಿಡಿಯೋ ನೋಡಿದಿರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈಕೆ ಕೂಡ ಜರ್ಮನ್ ಮೂಲದವಳೇ. ವಾಸಿಸುವುದು ಮೈಸೂರಿನಲ್ಲಿ. ತನ್ನನ್ನು ತಾನು ವಿಡಿಯೋ ಕ್ರಿಯೇಟರ್, ಡ್ಯಾನ್ಸರ್ ಮತ್ತು ಆ್ಯಕ್ಟರ್ ಎಂದು ಹೇಳಿಕೊಂಡಿದ್ದಾಳೆ. ಈ ಕೆಳಗಿನ ವಿಡಿಯೋ ಗಮನಿಸಿ, ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಸಂಜೆಹೊತ್ತಿನಲ್ಲಿ ತೆಂಗಿನಕಾಯಿ ಮಾರಲು ಕುಳಿತಿದ್ದಾಳೆ. ಒಂದು ತೆಂಗಿನಕಾಯಿಗೆ ರೂ. 20 ಎನ್ನುತ್ತಿದ್ದಾಳೆ. ಅಲ್ಲಿಗೆ ಬಂದ ಗ್ರಾಹಕ ರೂ. 50ಕ್ಕೆ ಮೂರು ಕೊಡುತ್ತೀರಾ ಎಂದು ಕೇಳುತ್ತಾನೆ. ಬೆಳಗ್ಗೆ ನಾಲ್ಕು ಗಂಟೆಗೆ ಬನ್ನಿ ಎನ್ನುತ್ತಾಳೆ ಆಕೆ. ಯಾಕೆ ಎನ್ನುತ್ತಾನೆ ಗ್ರಾಹಕ. ಏಕೆಂದರೆ ಬೆಳಗ್ಗೆ ಎಲ್ಲಾ ಬಂದ್ ಇರುತ್ತದೆ ಎನ್ನುತ್ತಾಳೆ ಆಕೆ!
ಜರ್ಮನ್ ಮೂಲದ ಜೆನ್ನಿಫರ್ಗೆ ಭಾರತವೆಂದರೆ ಬಹಳ ಇಷ್ಟ. ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತ ಸ್ಥಳೀಯ ಭಾಷೆಗಳನ್ನು ಕಲಿಯುವುದು, ರೀಲ್ಸ್ ಮಾಡುವುದು ಇವಳಿಗೆ ಇಷ್ಟದ ಹವ್ಯಾಸ. ‘ನಾನು ಮಾರಾಟಗಾರಳಾಗಿದ್ದು ದೇವರಾಜ ಮಾರ್ಕೆಟ್ನಲ್ಲಿ ಇದ್ದಿದ್ದರೆ ಹೀಗೇ ಕಾಣುತ್ತಿದ್ದೆ. ಈ ವಿಡಿಯೋದ ಸ್ಟೋರಿ ಬೋರ್ಡ್ ಮಾಡಿದ ಸ್ನೇಹಿತ ಆದಿಲ್, ಸ್ಥಳಾವಕಾಶ ಮಾಡಿಕೊಟ್ಟ ರಾಹುಲ್, ರೀಲ್ಗಾಗಿ ಶೂಟ್ ಮಾಡಿದ ಲೋಟೋಯಾ ಅವರಿಗೆ ಧನ್ಯವಾದ’ ಎಂದಿದ್ದಾಳೆ ಜೆನ್ನಿಫರ್.
ಈ ಮೇಲಿನ ವಿಡಿಯೋದಲ್ಲಿ ಜೆನ್ನಿಫರ್, ‘ಭವಿಷ್ಯದಲ್ಲಿ ನಾನು ನನ್ನದೇ ಆದ ಒಂದು ಅಂಗಡಿಯನ್ನು ನಡೆಸಬಹುದಾ, ಏನಂತೀರಿ? ಅಂದಹಾಗೆ ಈ ಅಂಗಡಿ ಇರುವುದು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ. ಅಲ್ಲಿ ಪೂಜೆಗೆ ಸಂಬಂಧಿಸಿದ ಎಲ್ಲ ಸಾಮಾನುಗಳೂ ಸಿಗುತ್ತವೆ’ ಎಂಬ ನೋಟ್ ಈ ವಿಡಿಯೋಗಿದೆ.
ಎಷ್ಟು ಸ್ಪಷ್ಟವಾಗಿ ಕನ್ನಡ ಉಚ್ಚರಿಸಿದ್ದೀರಿ ಮೇಡಮ್, ಧನ್ಯವಾದ ನಿಮಗೆ ಎಂದಿದ್ದಾರೆ ಹಲವರು. ನಿಮಗಿರುವ ಕನ್ನಡಾಭಿಮಾನ ಮೆಚ್ಚತಕ್ಕದ್ದು. ಇಲ್ಲಿಯೇ ಅನ್ನ ಉಂಡು ಇಲ್ಲಿಯೇ ನೀರು ಕುಡಿದು ಇಲ್ಲೇ ವಾಸಿಸುವವರಿಗೆ ಕನ್ನಡದ ಬಗ್ಗೆ ಸ್ವಾಭಿಮಾನವಿಲ್ಲವಲ್ಲ ಎಂದಿದ್ಧಾರೆ ಒಬ್ಬರು. ನೀವು ಹೋದ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟಿದ್ದಿರಿ ಎನ್ನಿಸುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು.
ಹೊಸತನ್ನು ಕಲಿಯಬೇಕೆಂದರೆ ಮುಕ್ತ ಮನಸ್ಸಿನಿಂದ ಇರಬೇಕು. ಕಲಿತಷ್ಟೂ ಬೆಳೆಯುತ್ತೀರಿ. ಬೆಳೆಯಬೇಕೆಂದರೆ ಸ್ವೀಕರಿಸುವುದನ್ನು ಕಲಿಯಬೇಕು.
ನಿಮ್ಮ ಅಭಿಪ್ರಾಯವೇನು ಈ ವಿಡಿಯೋ ನೋಡಿದ ಮೇಲೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ