ಇತ್ತೀಚಿನ ದಿನಗಳಲ್ಲಿ ವಿಚ್ಛೇದನ (Divorce) ಪ್ರಕರಣಗಳು ತೀರಾ ಹೆಚ್ಚಾಗಿದ್ದು, ಇದರಲ್ಲಿ ಸೆಲೆಬ್ರಿಟಿ ದಂಪತಿಗಳ ಡಿವೋರ್ಸ್ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತವೆ. ಅಂದಹಾಗೆ ಕೆಲವು ದಿನಗಳಿಂದ ಕ್ರಿಕೆಟ್ ತಾರೆ ಯುಜ್ವೇಂದ್ರ ಚಹಾಲ್ (Yuzvendra Chahal) ಮತ್ತು ಧನಶ್ರೀ ವರ್ಮಾ (Dhanashree Verma) ಅವರ ಡಿವೋರ್ಸ್ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇವರಿಬ್ಬರ ವಿಚ್ಛೇದನ ಪ್ರಕರಣ ಅಂತ್ಯಗೊಂಡಿದ್ದು, ಸುಮಾರು ನಾಲ್ಕು ವರ್ಷಗಳ ದಾಂಪತ್ಯದ ನಂತರ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ವರದಿಗಳ ಪ್ರಕಾರ ಚಹಾಲ್ 4.75 ಕೋಟಿ ರೂ. ಮೊತ್ತವನ್ನು ಧನಶ್ರೀಗೆ ಜೀವನಾಂಶವಾಗಿ (alimony) ನೀಡಲಿದ್ದಾರೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಡಿವೋರ್ಸ್ ಪ್ರಕರಣಗಳಲ್ಲಿ ಜೀವನಾಂಶ ನಿರ್ಧಾರವಾಗೋದು ಹೇಗೆ? ಮಹಿಳೆಯರಂತೆ ಪುರುಷರಿಗೂ ಕೂಡಾ ಜೀವನಾಂಶ ಪಡೆಯುವ ಅರ್ಹತೆ ಇದೆಯೇ? ಈ ಎಲ್ಲದರ ಕುರಿತ ಒಂದಷ್ಟು ಮಾಹಿತಿಯನ್ನು ತಿಳಿಯಿರಿ.
ಭಾರತೀಯ ಕಾನೂನಿನಲ್ಲಿ ಜೀವನಾಂಶವನ್ನು ನಿರ್ಧರಿಸಲು ಯಾವುದೇ ನಿಗದಿತ ಸೂತ್ರವಿಲ್ಲ. ಜೀವನಾಂಶದ ಮೊತ್ತವನ್ನು ನ್ಯಾಯಾಲಯಗಳು ಪ್ರಕರಣದಿಂದ ಪ್ರಕರಣಕ್ಕೆ ಅವರವರ ಅನುಗುಣವಾಗಿ ನಿರ್ಧರಿಸುತ್ತವೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟನೆಯನ್ನು ನೀಡಿದ್ದು, “ಜೀವನಾಂಶವು ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವ ಸಲುವಾಗಿ ರಚಿಸಿಲ್ಲ, ಬದಲಿಗೆ ಅವಲಂಬಿತ ಪಾಲುದಾರನ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವುದು ಅದರ ಉದ್ದೇಶವಾಗಿದೆ” ಎಂದು ಹೇಳಿತ್ತು. ಹೀಗಿದ್ದರೂ ಭಾರತೀಯ ಕಾನೂನಿನಡಿಯಲ್ಲಿ ಹೆಂಡತಿಯು ತನ್ನ ಪತಿಯಿಂದ ಜೀವನಾಂಶವನ್ನು ಪಡೆಯುವಾಗ ಕೆಲವೊಂದು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
• ಭಾರತೀಯ ಕಾನೂನಿನಡಿಯಲ್ಲಿ, ಹೆಂಡತಿ ತನ್ನ ಸ್ವಂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ, ಅಂದರೆ ಯಾವುದೇ ಆದಾಯದ ಮೂಲವಿಲ್ಲದಿದ್ದರೆ ಅವಳು ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ.
• ಪತಿಯ ಕ್ರೂರ ವರ್ತನೆಯ, ಮಾನಸಿಕ ಹಿಂಸೆಯಿಂದ ಬೇಸತ್ತು ಬೇರೆಯಾಗಲು ಬಯಸಿದಾಗ ಆಕೆ ಜೀವನಾಂಶವನ್ನು ಕೊಡುವಂತೆ ಕೋರಬಹುದು.
• ಹೆಂಡತಿ ಕೆಲಸ ಮಾಡುತ್ತಿದ್ದರೂ, ಮಕ್ಕಳ ಜವಬ್ದಾರಿಯೂ ಆಕೆಯ ಮೇಲೆಯೇ ಇದ್ದ ಸಂದರ್ಭದಲ್ಲಿ ಮಕ್ಕಳ ಆರೈಕೆಗಾಗಿ ಜೀವನಾಂಶ ಕೇಳಬಹುದು.
• ಗಂಡ-ಹೆಂಡತಿ ಇಬ್ಬರ ಸಂಬಳವೂ ಬಹುತೇಕ ಸಮವಾಗಿದ್ದರೆ ವಿಚ್ಛೇದನದ ಸಂದರ್ಭದಲ್ಲಿ ಜೀವನಾಂಶ ಕೇಳುವ ಅಗತ್ಯವಿರುವುದಿಲ್ಲ.
• ಹೆಂಡತಿಗೆ ಬೇರೆ ಪುರುಷನೊಂದಿಗೆ ಸಂಬಂಧವಿದೆ ಎಂದು ಸಾಬೀತಾದರೆ ಅವಳು ಜೀವನಾಂಶ ಕೇಳುವಂತಿಲ್ಲ.
• ಇಬ್ಬರ ಆರ್ಥಿಕ ಸ್ಥಿತಿ
• ಅವರ ಗಳಿಕೆಯ ಸಾಮರ್ಥ್ಯ
• ಮದುವೆಯ ಸಮಯದಲ್ಲಿ ಹೆಂಡತಿಯ ಜೀವನಶೈಲಿ
• ಹೆಂಡತಿಗೆ ಸ್ವಂತ ಆದಾಯದ ಮೂಲವಿದೆಯೇ?
• ಪತಿಯ ಆರ್ಥಿಕ ಸ್ಥಿತಿ, ಆದಾಯ, ಆಸ್ತಿ ಮತ್ತು ಹೊಣೆಗಾರಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ: ಎಲ್ಲಾ ಎಣ್ಣೆ ಮಹಿಮೆ; ಕುಡಿದ ಮತ್ತಲ್ಲಿ ರೈಲನ್ನೇ ತಡೆದು ನಿಲ್ಲಿಸಿದ ಕುಡುಕ
ಭಾರತೀಯ ಕಾನೂನಿನಲ್ಲಿ ಗಂಡಂದಿರು ಸಹ ಜೀವನಾಂಶ ಕೇಳುವ ಹಕ್ಕನ್ನು ಹೊಂದಿದ್ದಾರೆ. ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 24 ಮತ್ತು 25 ರ ಅಡಿಯಲ್ಲಿ, ಪತಿ ಜೀವನಾಂಶ ಪಡೆಯಬಹುದು. ಪತಿಯು ಅಂಗವೈಕಲ್ಯ ಅಥವಾ ಕೆಲಸ ಮಾಡಲು ಸಾಧ್ಯವಾಗದ ನಿರ್ದಿಷ್ಟ ಕಾರಣದಿಂದಾಗಿ ಹೆಂಡತಿಯ ಮೇಲೆ ಆರ್ಥಿಕವಾಗಿ ಅವಲಂಬಿತನಾಗಿದ್ದನೆಂದು ಜೀವನಾಂಶ ಕೇಳಬಹುದು. ಯಾವುದೇ ಆದಾಯದ ಮೂಲವಿಲ್ಲದಿದ್ದರೆ, ಪತಿಯು ತನ್ನ ಹೆಂಡತಿಯಿಂದ ಜೀವನಾಂಶವನ್ನು ಕೇಳಬಹುದು. ಪತ್ನಿಗಿಂತ ಕಡಿಮೆ ಆದಾಯವಿದ್ದರೂ ಸಹ, ಪತಿಯು ತನ್ನ ಪತ್ನಿಯಿಂದ ಜೀವನಾಂಶವನ್ನು ಕೋರಬಹುದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ