Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ

ಸಾವಿಗೆ ಕೆಲವು ದಿನಗಳ ಹಿಂದೆ ದೆಹಲಿ ಮೂಲದ ವೈದ್ಯರಾದ ಡಾ. ಡಿಂಪಲ್​ ಅರೋರಾ ಚಾವ್ಲಾ ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಕೊರೊನಾ ವೈರಸ್​ಅನ್ನು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆಯ ಮಾತುಗಳನ್ನಾಡಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು.

Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ
ಡಾ. ಡಿಂಪಲ್​ ಅರೋರಾ ಚಾವ್ಲಾ ಕುಟುಂಬ
Follow us
shruti hegde
|

Updated on:May 12, 2021 | 5:04 PM

ಡಾ. ಡಿಂಪಲ್​ ಅರೋರಾ ಚಾವ್ಲಾ ದಂತ ವೈದ್ಯರು. ಏಪ್ರಿಲ್​ನಲ್ಲಿ ಕೊವಿಡ್​ ಪರೀಕ್ಷೆಗೆ ಒಳಗಾದಾಗ ಅವರು 7 ತಿಂಗಳ ಗರ್ಭಿಣಿ. ಪರೀಕ್ಷೆಯ ವರದಿಯ ಪ್ರಕಾರ ವೈದ್ಯೆ ಡಿಂಪಲ್​ ಅರೋರಾ ಚಾವ್ಲಾ ಅವರಿಗೆ ಕೊವಿಡ್​ ಪಾಸಿಟಿವ್​ ಬಂತು. ಈಗ ತಾನೆ ಜಗತ್ತು ನೋಡಲಿರುವ ಮಗುವನ್ನು 34ನೇ ವಯಸ್ಸಿನಲ್ಲಿರುವ ಅವರು ಕಳೆದುಕೊಂಡರು. ಆ ನೋವಿನಲ್ಲಿಯೂ ದೃತಿಗೆಡದೇ ಕೊರೊನಾ ವೈರಸ್​ ವಿರುದ್ಧ ಹೋರಾಡಿದರು. ಆದರೆ ದುರಾದೃಷ್ಟವಶಾತ್​ ತನ್ನ ಮೂರು ವರ್ಷದ ಮಗು ಮತ್ತು ಗಂಡನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಸಾವಿಗೆ ಕೆಲವು ದಿನಗಳ ಹಿಂದೆ ದೆಹಲಿ ಮೂಲದ ವೈದ್ಯರಾದ ಇವರು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಕೊರೊನಾ ವೈರಸ್​ಅನ್ನು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆಯ ಮಾತುಗಳನ್ನಾಡಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು. ‘ಬಹಳ ಕಷ್ಟದಿಂದ ಈ ವಿಡಿಯೋ ಮಾಡುತ್ತಿದ್ದೇನೆ. ಎಲ್ಲರಿಗೂ ಹೇಳಬಯಸುವುದೇನೆಂದರೆ, ದಯವಿಟ್ಟು ಕೊರೊನಾ ಸೋಂಕನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಬೇಡಿ. ಆರೋಗ್ಯಕ್ಕೆ ತುಂಬಾ ಗಂಭೀರವಾದ ಲಕ್ಷಣಗಳನ್ನು ಬೀರುತ್ತದೆ. ನನಗೆ ಮಾತನಾಡಲು ಸಹ ಆಗುತ್ತಿಲ್ಲ. ನನ್ನ ಈ ಸಂದೇಶ ಎಲ್ಲರಿಗೆ ಮನಮುಟ್ಟಿದೆ ಎಂದು ನಾನು ಬಯಸುತ್ತೇನೆ. ಈ ಸಂದೇಶವನ್ನು ಎಲ್ಲರಿಗೂ ತಿಳಿಸಿ’ ಎಚ್ಚರಿಕೆ ನೀಡಿದ ಸಂದೇಶವನ್ನು ಏಪ್ರಿಲ್​ 7ರಂದು ರೆಕಾರ್ಡ್​ ಮಾಡಿದ 2 ನಿಮಿಷ 20 ಸೆಕೆಂಡುಗಳ ವಿಡಿಯೋದಲ್ಲಿ ನೋಡಬಹುದಾಗಿದೆ.

‘ನಿಮ್ಮ ಆತ್ಮೀಯರೊಂದಿಗೆ, ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಅಥವಾ ಹೊರಗೆ ಹೋಗುವಾಗ ದಯವಿಟ್ಟು ಮುಖಗವಸನ್ನು ಧರಿಸಿ’ ಎಂದು ಡಾ. ಡಿಂಪಲ್​ ಅರೋರಾ ಚಾವ್ಲಾ ಎಚ್ಚರಿಸಿದ್ದರು. ಈ ವಿಡಿಯೋವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಾವಿರಾರು ಜನರು ಸಂತಾಪ ಸೂಚಿಸಿದ್ದಾರೆ.

ಎನ್​ಡಿಟಿವಿಯೊಂದಿಗೆ ಮಾತನಾಡಿದ ರವೀಶ್​ ಚಾವ್ಲಾ ಅವರು, ಜನರು, ನನ್ನ ಹೆಂಡತಿಯ ಕೊನೆಯ ಆಶಯಗಳನ್ನು ಗೌರವಿಸುತ್ತಿದ್ದಾರೆ. ಆಕೆ ಹೇಳಿದ ಮಾತುಗಳೆಲ್ಲವೂ ಜಾಗೃತಿ ಮೂಡಿಸುವ ಸಂದೇಶಗಳಾಗಿವೆ. ಆದ್ದರಿಂದ ಯಾರೂ ಕೂಡಾ ಸಾಂಕ್ರಾಮಿಕವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಮಾತನಾಡಿದರು.

‘ಮುನ್ನೆಚ್ಚರಿಕೆಯ ಕುರಿತಾಗಿ ಜನರಿಗೆ ತಿಳಿಸುವುದು ಡಾ. ಡಿಂಪಲ್​ ಚಾವ್ಲಾ ಅವರಿಗೆ ಸಹಜ ಸ್ವಭಾವವಾಗಿತ್ತು. ಹಾಗಾಗಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗಾಗಿ ವಿಡಿಯೋ ರೆಕಾರ್ಡ್​ ಮಾಡಿದ್ದರು. ಆದರೆ ಅವರ ಅಕಾಲಿಕ ಮರಣವು, ಈ ಸಂದೇಶವನ್ನು ಜಗತ್ತಿಗೆ ಪೋಸ್ಟ್​ ಮಾಡುವಂತೆ ಮಾಡಿತು. ಕೊವಿಡ್​ಅನ್ನು ದಯಮಾಡಿ ಲಘುವಾಗಿ ಪರಿಗಣಿಸಬೇಡಿ ಎಂದು ತಮ್ಮ ನೋವನ್ನು ಹಂಚಿಕೊಳ್ಳುವುದರ ಮೂಲಕ ಜನರಿಗೆ ಸೂಚನೆ ನೀಡಿದರು. ನಿಮಗಾಗಿ ಮಾತ್ರವಲ್ಲದೇ ಸುತ್ತ-ಮುತ್ತಲಿನ ಜನರಿಗಾಗಿ ನೀವು ಮುಖಗವಸನ್ನು ಧರಿಸಬೇಕು. ವಯಸ್ಸಾದವರು, ಗರ್ಭಿಣಿಯರಿರುತ್ತಾರೆ ಅವರಿಗೋಸ್ಕರ ನೀವು ಮುಖಗವಸನ್ನು ಧರಿಸಲು ಮರೆಯದಿರಿ ಎಂದು ಅವರು ಸಂದೇಶ ಸಾರಿದರು.

ಕೊವಿಡ್​ನಿಂದ ತನ್ನ ಹೆಂಡತಿ ಹೋರಾಡಿದ ಘಟನೆಯನ್ನು ಹೇಳಿದ ಚಾವ್ಲಾ ಅವರು, ಕೊವಿಡ್​ ಪಾಸಿಟಿವ್​ ಬಂದ 10 ದಿನಗಳ ಬಳಿಕ ಅವರಿಗೆ ಉಸಿರಾಡಲು ಕಷ್ಟವಾಗತೊಡಗಿತು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್​ ನೀಡಲಾಯಿತು. ಜೊತೆಗೆ ಎರಡು ಸುತ್ತಿನ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕು: ಮಂಗಳೂರಿನಲ್ಲಿ ಗರ್ಭಿಣಿ ವೈದ್ಯೆ ಬಲಿ; ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ-ಪತ್ನಿ ಸಾವು

Published On - 5:01 pm, Wed, 12 May 21