Trending Video : ನಗರನಗರಗಳ ಮಧ್ಯೆ, ರಾಜ್ಯರಾಜ್ಯಗಳ ಮಧ್ಯೆ ಸಂಪರ್ಕ ಕಲ್ಪಿಸಲು ಮತ್ತು ಪ್ರಯಾಣವನ್ನು ಸುಲಭಗೊಳಿಸಲು ಎಕ್ಸ್ಪ್ರೆಸ್ ಸೇತುವೆಗಳು, ಸುರಂಗಮಾರ್ಗಗಳು ನಿರ್ಮಾಣಗೊಳ್ಳುತ್ತಲೇ ಇವೆ. ಆದರೆ ನಮ್ಮ ದೇಶದ ಹಳ್ಳಿಗಳಲ್ಲಿರುವ ಮಕ್ಕಳು ನಿತ್ಯ ಶಾಲೆಗೆ ಪ್ರಯಾಣಿಸಲು ಸೂಕ್ತ ದಾರಿಗಳಿಲ್ಲದೆ ಪರದಾಡುವಂಥ ಪರಿಸ್ಥಿತಿಗೆ ಮುಕ್ತಿ ಯಾವಾಗಲೋ? ಮಹಾರಾಷ್ಟ್ರಾದ ನಾಸಿಕ್ ಜಿಲ್ಲೆಯ ಗ್ರಾಮೀಣ ಮಕ್ಕಳು ಸೂಕ್ತ ಸೇತುವೆ, ರಸ್ತೆ ಇಲ್ಲದೆ ದಿನವೂ ನದಿ ದಾಟಿಕೊಂಡೇ ಹೋಗಬೇಕಾದ ಅಪಾಯಕರ ಪರಿಸ್ಥಿತಿ ಇದೆ. ಎಎನ್ಐ ಹಂಚಿಕೊಂಡ ಈ ಕೆಳಗಿನ ವಿಡಿಯೋ ಗಮನಿಸಿ. ನಾಸಿಕ್ನ ಪೇಠ್ ತಾಲೂಕಿನಲ್ಲಿ ಹರಿದಿರುವ ಈ ನದಿಯ ಹೆಸರು ಸುಕಿ. ಮಕ್ಕಳನ್ನು ಹೊತ್ತುಕೊಂಡು ಹೋಗುವ ಈ ಪೋಷಕರ ಎದೆಮಟ್ಟ ನೀರು ಇದೆ. ಇವರು ತಮ್ಮ ಹೆಗಲಮೇಲೆ ಹೊತ್ತುಕೊಂಡೋ ಅಥವಾ ದೊಡ್ಡದೊಡ್ಡ ಪಾತ್ರೆಗಳಲ್ಲಿ ಕೂರಿಸಿಕೊಂಡೋ ಮಕ್ಕಳಿಗೆ ನದಿ ದಾಟಿಸುತ್ತಾರೆ. ಶಾಲೆಗೆ ಹೋಗಲು ಇವರಿಗಿರುವುದು ಇದೊಂದೇ ಮಾರ್ಗ. ಈ ಕಾರಣಕ್ಕೆ ಸಾಕಷ್ಟು ಮಕ್ಕಳು ಮತ್ತು ಪೋಷಕರು ಇಂಥ ಸಾಹಸಕ್ಕೆ ಮನಸ್ಸು ಮಾಡದೇ ತಮ್ಮಷ್ಟಕ್ಕೆ ಉಳಿಯುವಂತಾಗಿದೆ. ಹೀಗಾಗಿ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ.
‘ಆಳವಾದ ಈ ನದಿಯನ್ನು ದಾಟಲು ಬಹಳ ಕಷ್ಟವಾಗುತ್ತದೆ. ಹೆಗಲ ಮೇಲೆ ಬೆಳೆದ ಮಕ್ಕಳನ್ನು ಕೂರಿಸಿಕೊಂಡು ಹೋಗುವುದು ಅಥವಾ ದೊಡ್ಡ ಪಾತ್ರೆಗಳಲ್ಲಿ ಸಾಗಿಸುವುದು ಎಷ್ಟು ಸುರಕ್ಷಿತ? ಸೇತುವೆ ನಿರ್ಮಿಸಿ ಕೊಡಬೇಕೆಂದು ಸರ್ಕಾರಕ್ಕೆ ಈ ಮೂಲಕ ಕೋರುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯ ಪೋಷಕರೊಬ್ಬರು.
ಅನೇಕ ಪೋಷಕರು ತಮ್ಮ ಮಕ್ಕಳನ್ನು ಪ್ರತಿದಿನ ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿಸುತ್ತಿದ್ದಾರೆ. ಆದರೆ ಉಳಿದ ಪೋಷಕರು, ನದಿ ದಾಟಿಸುವಾಗ ಅನಾಹುತ ಸಂಭವಿಸಿದರೆ? ಎಂದು ದೂರವೇ ಉಳಿಯುತ್ತಿದ್ದಾರೆ.
#WATCH |Maharashtra: In absence of a bridge, group of children in Peth taluka, Nashik cross river every day to reach school
“River is deep but children have to go to school, so we carry them either on shoulders or in big utensils. We request admn to build a bridge,” says a local pic.twitter.com/rNmdPKD3lx
— ANI (@ANI) August 4, 2022
‘ಮಳೆಗಾಲದಲ್ಲಿ ಇಂಥ ಸ್ಥಿತಿ ಉಂಟಾಗಲು ಹಿನ್ನೀರನ್ನು ನದಿಗೆ ಬಿಡುವುದೇ ಕಾರಣ. ತಿಂಗಳುಗಟ್ಟಲೆ ತುಂಬಿ ಹರಿಯುವ ನದಿಯಿಂದಾಗಿ ಮಕ್ಕಳು ಶಾಲೆಯಿಂದ ದೂರವಾಗುತ್ತಾರೆ. ಇದು ಪ್ರತೀ ವರ್ಷವೂ ಪುನರಾವರ್ತಿಸುತ್ತದೆ’ ಎನ್ನುತ್ತಾರೆ ಇನ್ನೊಬ್ಬ ಪೋಷಕರು.
ಪ್ರತೀ ಚುನಾವಣೆಯಲ್ಲಿಯೂ ಜನಪ್ರತಿನಿಧಿಗಳು ಮತ ಕೇಳಲು ಬಂದಾಗ ಸೇತುವೆ ನಿರ್ಮಿಸಿ ಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ ಮನವಿಯನ್ನೂ ಸಲ್ಲಿಸುತ್ತಾರೆ. ಆದರೆ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸದೇ ಇರುವುದು ಗ್ರಾಮಸ್ಥರನ್ನು ಬೇಸರಕ್ಕೆ ತಳ್ಳಿದೆ. ಎಷ್ಟೋ ವರ್ಷಗಳಿಂದ ಇಲ್ಲಿಯ ಬದುಕು ಹೀಗೆಯೇ ಸಾಗುತ್ತಿದೆ.
ಮತ್ತಷ್ಟು ಮಳೆ ಸುದ್ದಿಗಾಗಿ ಕ್ಲಿಕ್ ಮಾಡಿ
Published On - 12:51 pm, Fri, 5 August 22