Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇನ್ನೂ ಮೂರು ದಿನ ಮಳೆ; ನೆರೆ ರಾಜ್ಯಗಳಲ್ಲೂ ಮಳೆಗಿಲ್ಲ ವಿರಾಮ
Bengaluru Rains: ಕಳೆದ ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯೇ ಸುರಿದಿದೆ. ಇಂದು ಮತ್ತು ನಾಳೆಯೂ ಕರ್ನಾಟಕದಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ಬೆಂಗಳೂರು: ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ (Karnataka Rains). ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಲಕ್ಷದ್ವೀಪ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಉತ್ತಮ ಮಳೆಯಾಗಿದೆ. ಆಂಧ್ರ ಕರಾವಳಿಯ ದಕ್ಷಿಣ ಮತ್ತು ತಮಿಳುನಾಡು ಕರಾವಳಿಯ ಉತ್ತರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ವಾತಾವರಣ (Cyclonic Circulation) ನಿರ್ಮಾಣವಾಗಿದೆ.
ಇದರ ಪರಿಣಾಮವಾಗಿ ಮುಂದಿನ ಮೂರು ದಿನಗಳ ಅವಧಿಗೆ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಆಗಸ್ಟ್ 7ರವರೆಗೆ ಕರ್ನಾಟಕ, ಆಂಧ್ರ ಪ್ರದೇಶ, ಪುದುಚೇರಿ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಮಳೆ ಮುಂದುವರಿಯಲಿದೆ. ಉತ್ತರ ಭಾರತದಲ್ಲಿ ಚದುರಿದಂತೆ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೂರು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಆಗಸ್ಟ್ ತಿಂಗಳ ಮೊದಲ ಮೂರು ದಿನಗಳಲ್ಲಿ ಬೆಂಗಳೂರು ನಗರದಲ್ಲಿ 162.7 ಮಿಮೀ ಮಳೆಯಾಗಿದೆ. ವಾಡಿಕೆಯಂತೆ ಆಗಸ್ಟ್ ತಿಂಗಳ ಸರಾಸರಿ ಮಳೆ 162.7 ಮಿಮೀ ಇದೆ. ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿಯೂ ಬೆಂಗಳೂರು ನಗರದಲ್ಲಿ ಉತ್ತಮ ಮಳೆಯಾಗಿತ್ತು. ಮಾಸಿಕ ಸರಾಸರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಮಳೆಯೇ ಸುರಿದಿದೆ. ನಗರದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಇಂದು ಮತ್ತು ನಾಳೆ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮಂಡ್ಯ: ತಗ್ಗಿದ ಮಳೆ ಆರ್ಭಟ
ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಬುಧವಾರ ರಾತ್ರಿಯಿಂದೀಚೆಗೆ ತುಸು ಬಿಡುವುಕೊಟ್ಟಿದೆ. ವ್ಯಾಪಕ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇದೀಗ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಇಂದು ಮುಂಜಾನೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೊಲೀಸರು ಅನುಮತಿಸಿದ್ದಾರೆ.
ಕೊಡಗು: ಮುಂದುವರಿದ ಮಳೆ ಅಬ್ಬರ
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ದಬ್ಬಡ್ಕ ಗ್ರಾಮದಲ್ಲಿ ಎರಡು ಸಂಪರ್ಕ ಸೇತುವೆಗಳು ನಾಶವಾಗಿದ್ದು, ಹೊರ ಜಗತ್ತಿನ ಸಂಪರ್ಕ ಕಡಿತಗೊಂಡಿದೆ. ದಬ್ಬಡ್ಕ-ಅಡ್ಡಹೊಳೆ ಮತ್ತು ದಬ್ಬಡ್ಕ-ಕೊಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಹಾಳಾಗಿವೆ.
Published On - 9:21 am, Thu, 4 August 22