Mallikarjun Kharge: ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್; ಯಂಗ್ ಇಂಡಿಯನ್ ಕಚೇರಿ ಶೋಧದ ವೇಳೆ ಹಾಜರಿರಲು ಸೂಚನೆ
ಶೋಧ ಕಾರ್ಯಾಚರಣೆ ಮುಂದುವರಿಸುವ ನಿಟ್ಟಿನಲ್ಲಿ ‘ಯಂಗ್ ಇಂಡಿಯನ್’ ಸಂಸ್ಥೆಯ ಪದಾಧಿಕಾರಿ ಮಲ್ಲಿಕಾರ್ಜು ಖರ್ಗೆ ಅವರಿಗೆ ಸಮನ್ಸ್ ನೀಡಲಾಗಿದೆ.

ದೆಹಲಿ: ಜಾರಿ ನಿರ್ದೇಶನಾಲಯವು ಬುಧವಾರ ಹೆರಾಲ್ಡ್ ಹೌಸ್ನ (Herald House) ಒಂದು ಭಾಗಕ್ಕೆ ಬೀಗಮುದ್ರೆ ಹಾಕಿದೆ. ಕರ್ನಾಟಕ ಮೂಲದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೂ ಸಮನ್ಸ್ ಜಾರಿ ಮಾಡಿದ್ದು, ‘ಯಂಗ್ ಇಂಡಿಯನ್’ (Young Indian) ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಹಾಜರಿರುವಂತೆ ಸಮನ್ಸ್ ಜಾರಿ ಮಾಡಿದೆ. ‘ನ್ಯಾಷನಲ್ ಹೆರಾಲ್ಡ್’ (National Herald) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿತು. ಈ ಕಂಪನಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತ್ತು ಅವರ ಮಗ ರಾಹುಲ್ ಗಾಂಧಿ (Rahul Gandhi) ನಿರ್ವಹಿಸುತ್ತಿದ್ದಾರೆ.
ಹೆರಾಲ್ಡ್ ಹೌಸ್ನ 4ನೇ ಮಹಡಿಯಲ್ಲಿ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಯ ಕಚೇರಿ ಇದೆ. ಮೋಸದ ವಹಿವಾಟಿನಿಂದ ಯಂಗ್ ಇಂಡಿಯನ್ ಈ ಆಸ್ತಿಯನ್ನು ಸಂಪಾದಿಸಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಇಡಿ ಪ್ರತಿ ವಹಿವಾಟನ್ನೂ ಪರಿಶೀಲಿಸುತ್ತಿದೆ. ಯಂಗ್ ಇಂಡಿಯನ್ಗೆ ಸಂಬಂಧಿಸಿದ ಅಧಿಕೃತ ವ್ಯಕ್ತಿಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಪೂರ್ಣ ಪ್ರಮಾಣದಲ್ಲಿ ಶೋಧ ನಡೆಸಲು ಆಗಿರಲಿಲ್ಲ. ಹೀಗಾಗಿ ತನಿಖಾ ಸಂಸ್ಥೆಯು ಯಂಗ್ ಇಂಡಿಯನ್ ಕಚೇರಿಗೆ ಬೀಗಮುದ್ರೆ ಹಾಕಬೇಕಾಯಿತು. ಶೋಧ ಕಾರ್ಯಾಚರಣೆ ಮುಂದುವರಿಸುವ ನಿಟ್ಟಿನಲ್ಲಿ ‘ಯಂಗ್ ಇಂಡಿಯನ್’ ಸಂಸ್ಥೆಯ ಪದಾಧಿಕಾರಿ ಮಲ್ಲಿಕಾರ್ಜು ಖರ್ಗೆ ಅವರಿಗೆ ಸಮನ್ಸ್ ನೀಡಲಾಗಿದೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಇಡಿ ನಡೆಸಿದೆ. ಖರ್ಗೆ ಮತ್ತು ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಅವರನ್ನು ಇಡಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿತ್ತು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ₹ 90 ಕೋಟಿ ಅಕ್ರಮ ವರ್ಗಾವಣೆ ನಡೆದಿದೆ ಎಂದು ಇಡಿ ಆರೋಪಿಸಿದೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಗೆ ಈ ಹಣ ಪಾವತಿ ಮಾಡಲಾಗಿದೆ ಎಂದು ಪಕ್ಷವು ಹೇಳಿದೆಯಾದರೂ, ಲೆಕ್ಕದ ಪುಸ್ತಕಗಳಲ್ಲಿ ನಮೂದಾಗಿರುವ ಈ ಮೊತ್ತದ ವಹಿವಾಟು ಎಲ್ಲಿಯೂ ನಡೆದೇ ಇಲ್ಲ ಇಡಿ ಆರೋಪಿಸಿದೆ.
ನಂತರದ ದಿನಗಳಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯು ₹ 800 ಕೋಟಿ ಮೌಲ್ಯದ ತನ್ನ ಎಲ್ಲ ಆಸ್ತಿಗಳನ್ನು ಯಂಗ್ ಇಂಡಿಯನ್ಗೆ ಕೇವಲ ₹ 50 ಲಕ್ಷಕ್ಕೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕಿದ್ದ ₹ 90 ಕೋಟಿ ಸಾಲವನ್ನು ಇತ್ಯರ್ಥಪಡಿಸಿಕೊಂಡಿದೆ. ಕಾಂಗ್ರೆಸ್ ಪಕ್ಷ, ಅಸೋಸಿಯೇಟೆಡ್ ಜರ್ನಲ್ಸ್ ಅಥವಾ ಅವುಗಳ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯನ್ಸ್ ಆಗಲಿ ಈವರೆಗೆ ₹ 90 ಕೋಟಿ ವಹಿವಾಟಿಗೆ ಸಂಬಂಧಿಸಿದಂತೆ ನಿಖರ ಸಾಕ್ಷ್ಯಗಳನ್ನು ಒದಗಿಸಿಲ್ಲ. ಕಾಂಗ್ರೆಸ್ ಪಕ್ಷವು ಈ ಮೊತ್ತವನ್ನು ನಗದು ರೂಪದಲ್ಲಿ ನೀಡಿದೆಯೇ ಅಥವಾ ಚೆಕ್ ರೂಪದಲ್ಲಿ ನೀಡಿದೆಯೇ ಎಂಬ ಬಗ್ಗೆಯೂ ಮಾಹಿತಿ ಬಹಿರಂಗವಾಗಿಲ್ಲ. ದೇಶದ ವಿವಿಧೆಡೆ ಯಂಗ್ ಇಂಡಿಯನ್ ಕಂಪನಿಯು ₹ 800 ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದೆ.
Published On - 8:05 am, Thu, 4 August 22




