Viral Video: ಅದು ವಿದ್ವಾನ್ ಬಾತುಕೋಳಿಯವರ ಬೀಟ್ಬಾಕ್ಸ್; ಎಡಿಟಿಂಗ್ ವೇಳೆ ಗೊತ್ತಾದ ಸತ್ಯ
Vasudhaiva Kutumbakam: ಹೀಗೊಂದು ಬಾತುಕೋಳಿ ರೆಕಾರ್ಡಿಂಗ್ನಲ್ಲಿ ವೃತ್ತಿಪರ ಕಲಾವಿದರಂತೆ ಪಾಲ್ಗೊಂಡಿತ್ತು ಎನ್ನುವುದು ಸಂಗೀತ ಕಲಾವಿದ ಕುಲದೀಪ್ ಎಂ ಪೈ ಅವರಿಗೆ ಎಡಿಟಿಂಗ್ನ ವೇಳೆ ತಿಳಿದುಬಂದಿದೆ. ತಾವು ಮಾಡುತ್ತಿದ್ದ ಪ್ರಾಜೆಕ್ಟ್ನ ಉದ್ದೇಶವು ಬಾತುಕೋಳಿಯ ಆಕಸ್ಮಿಕ ಪ್ರವೇಶ ಮತ್ತದರ ಪ್ರಸ್ತುತಿಯಿಂದ ತನ್ನಿಂತಾನೇ ಈಡೇರಿದೆ ಎಂದು ಅವರು ಸಂತಸ ವ್ಯಕ್ತಪಡಿದ್ದಾರೆ. ನೋಡಿ ವಿಡಿಯೋ.
Music : ಚೆನ್ನೈನಲ್ಲಿ ವಾಸವಾಗಿರುವ ವಿದ್ವಾನ್ ಕುಲದೀಪ ಎಂ. ಪೈ (Kuldeep M Pai) ಅನೇಕ ಪ್ರತಿಭಾವಂತ ಮಕ್ಕಳನ್ನು ಜಗತ್ತಿಗೆ ಪರಿಚಯಿಸಿದ ಸಂಗೀತ ಕಲಾವಿದ. ಸೂರ್ಯಾಗಾಯತ್ರಿ, ರಾಹುಲ್ ವೆಲ್ಲಾಲ್, ಉತ್ತರಾ ಉಣ್ಣಿಕೃಷ್ಣನ್ ಮುಂತಾದವರು ಸಾಮಾಜಿಕ ಜಾಲತಾಣಗಳಲ್ಲಿ ಹಾಡಿದ ಭಕ್ತಿಗೀತೆಗಳಿಂದಲೇ ಅನೇಕ ಮಕ್ಕಳ ಬೆಳಗಾಗುವುದು. ಆ ಬಾಲಕಲಾವಿದರೆಲ್ಲ ಇಂದು ಹದಿಹರೆಯಕ್ಕೆ ಕಾಲಿಟ್ಟಿದ್ದು ಭಕ್ತಿ ಮತ್ತು ನಾದಮಾಧುರ್ಯವನ್ನು ಅನವರತ ಹರಿಸುತ್ತಲೇ ಇದ್ದಾರೆ. ಕುಲದೀಪ ಇತ್ತೀಚೆಗೆ ರಾಹುಲ್ ವೆಲ್ಲಾಲ್ ಮತ್ತು ರಘುವೀರ್ ಮಣಿಕಂಡಮ್ ಜೊತೆಗೂಡಿ ‘ವಸುದೈವ ಕುಟುಂಬಕಂ’ ಎಂಬ ಪ್ರಾಜೆಕ್ಟ್ನಲ್ಲಿ ತೊಡಗಿಕೊಂಡಿದ್ದರು. ಇದರ ರೆಕಾರ್ಡಿಂಗ್ ವೇಳೆ ವಿಶೇಷ ಕಲಾವಿದರೊಬ್ಬರು ಬೀಟ್ಬಾಕ್ಸ್ (Beatboxing) ಪ್ರಸ್ತುಪಡಿಸಿ ಹೋಗಿರುವುದು ಎಡಿಟಿಂಗ್ ವೇಳೆ ಬೆಳಕಿಗೆ ಬಂದಿದೆ!
ಇದನ್ನೂ ಓದಿ : Viral Video: ಶಿವಲಿಂಗದ ಮೇಲೆ ಅರ್ಘ್ಯದಿಂದ ಕೈ ತೊಳೆದುಕೊಂಡ ಉತ್ತರಪ್ರದೇಶದ ಸಚಿವ; ಪ್ರತಿಪಕ್ಷಗಳಿಂದ ಟೀಕೆ
‘ವಸುದೈವ ಕುಟುಂಬಕಂ’ ಹಾಡಿನ ರೆಕಾರ್ಡಿಂಗ್ ನಡೆಸುತ್ತಿದ್ದೆವು. ಆಗ ನಮ್ಮ ಅನುಮತಿ ಇಲ್ಲದೇ ಒಬ್ಬರು ಆ ಜಾಗವನ್ನು ಪ್ರವೇಶಿಸಿದ್ದರು. ಅಲ್ಲಲ್ಲ, ಅವರ ಜಾಗವನ್ನು ನಾವು ಪ್ರವೇಶಿಸಿದ್ದೆವು ಎನ್ನುವುದೇ ಸರಿ. ನಾವು ಹಾಡುವಾಗ ಅವರು ಕ್ವ್ಯಾಕ್ ಕ್ವ್ಯಾಕ್ ಎಂದು ತಾಳಕ್ಕೆ ತಕ್ಕಂತೆ ತಾಳವಾದ್ಯ ಪ್ರಸ್ತುಪಡಿಸಿ ಹೋಗಿದ್ದಾರೆ. ಆದರೆ ಈ ವಿಡಿಯೋ ಅನ್ನು ಎಡಿಟ್ ಮಾಡುವಾಗ ಅವರ ಧ್ವನಿ ಅಡಕವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಬಾತುಕೋಳಿಯ (Duck) ವಿಡಿಯೋ ನಮಗೆ ಸಿಕ್ಕಿಲ್ಲ. ಈ ಆಕಸ್ಮಿಕ ಕೂಡ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲ? ಇಡೀ ಜಗತ್ತೇ ಒಂದು ಕುಟುಂಬ ಎನ್ನಿಸಿಕೊಳ್ಳುವುದು ಹೀಗೇ ಅಲ್ಲವೆ? ‘ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ ಕುಲದೀಪ.
ವಿದ್ವಾನ್ ಬಾತುಕೋಳಿ ಪ್ರಸಂಗದ ಬಗ್ಗೆ ಕುಲದೀಪ
View this post on Instagram
ರೆಕಾರ್ಡಿಂಗ್ ವೇಳೆ ಇವರ ಹಾಡನ್ನು ಕೇಳಿಕೊಂಡು ಅಲ್ಲಿಯೇ ಓಡಾಡಿಕೊಂಡಿದ್ದ ವಿದ್ವಾನ್ ಬಾತುಕೋಳಿಯವರು, ‘ಜಗದೇವ ಕುಟುಂಬಕಂ ವಸುದೈವ ಕುಟುಂಬಕಂ’ ಎಂಬ ಪಲ್ಲವಿ ಮುಗಿದು ಚರಣ ಶುರುವಾಗುವ ಹೊತ್ತಿಗೆ ಕ್ವ್ಯಾಕ್ ಕ್ವ್ಯಾಕ್ ಎಂದು ಬೀಟ್ಬಾಕ್ಸ್ ಸಾಥಿ ಕೊಟ್ಟಿದ್ದಾರೆ. ಆ ಶ್ರುತಿ ಲಯ ಎಷ್ಟು ಪಕ್ಕಾಗಿದೆ ಎಂದರೆ ಅದೊಂದು ಬಾತುಕೋಳಿಯ ಕೂಗು ಎಂದು ಹೇಳದ ಹೊರತು ಯಾರ ಅರಿವಿಗೂ ಬಾರದಷ್ಟು. ಹೆಚ್ಚೂ ಕಡಿಮೆ ಮೋರ್ಚಿಂಗ್ ವಾದ್ಯದ ಸಾಮ್ಯತೆ ಇದಕ್ಕೆ ಒದಗಿದೆ.
ಬಾತುಕೋಳಿಯ ಬೀಟ್ಬಾಕ್ಸ್ನೊಂದಿಗೆ ವಸುದೈವ ಕುಟುಂಬಕಂ ಹಾಡನ್ನು ಕೇಳಿ
View this post on Instagram
ಸಕಲ ಜೀವರಾಶಿಗಳು ಪ್ರಕೃತಿಯ ಮೂಲಕ ಕಲೆಯೊಳಗೆ ಏಕತೆಯನ್ನು ಸಾಧಿಸುವುದೆಂದರೆ ಇದೇ ಏನೋ ಎನ್ನಿಸುತ್ತದೆ. ನೆಟ್ಟಿಗರನೇಕರು ಈ ವಿಡಿಯೋ ನೋಡಿ ವಿಸ್ಮಯಗೊಂಡಿದ್ದಾರೆ. ಪ್ರ್ಯಾಕ್ಟೀಸ್ ವೇಳೆಯ ವಿಡಿಯೋಗಳನ್ನ ಹೆಚ್ಚೆಚ್ಚು ಅಪ್ಲೋಡ್ ಮಾಡಿ. ಮಕ್ಕಳು ಮತ್ತು ಯುವಪ್ರತಿಭೆಗಳಿಗೆ ಒತ್ತಾಸೆಯಾಗಿ ನಿಂತ ನಿಮಗೆ ಸಾವಿರದ ಶರಣು ನಿಮಗೆ ಒಳ್ಳೆಯದಾಗಲಿ. ನಿಜವಾದ ವಸುದೈವ ಕುಟುಂಬವನ್ನು ಕಟ್ಟುವ ಶಕ್ತಿ ಸಂಗೀತದ ಮೂಲಕ ನಿಮಗೆ ಒದಗಲಿ ಎಂದು ಅವರು ಹಾರೈಸಿದ್ದಾರೆ.
ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:32 pm, Tue, 5 September 23