Tomato: ತಾಯಿಯ ಆಸೆ ಪೂರೈಸಲು ದುಬೈಯಿಂದ 10 ಕೆಜಿ ಟೊಮೆಟೊ ತಂದ ಮಗಳು! ಟ್ವೀಟ್ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 22, 2023 | 1:17 PM

ಈ ಹಣದುಬ್ಬರದ ಸಮಯದಲ್ಲಿ ದುಬೈನಿಂದ ಟೊಮೆಟೊ ತಂದ ಮಗಳಿಗೆ ‘ಅತ್ಯುತ್ತಮ ಮಗಳು ಪ್ರಶಸ್ತಿ’ ನೀಡಬಹುದು ಎಂದು ಟ್ವಿಟರ್ ಬಳಕೆದಾರ ನಯನತಾರಾ ಮೆನನ್ ಬಾಗ್ಲಾ ಎಂಬವರು ಪ್ರತಿಕ್ರಿಯಿಸಿದ್ದಾರೆ.

Tomato: ತಾಯಿಯ ಆಸೆ ಪೂರೈಸಲು ದುಬೈಯಿಂದ 10 ಕೆಜಿ ಟೊಮೆಟೊ ತಂದ ಮಗಳು! ಟ್ವೀಟ್ ವೈರಲ್
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಜುಲೈ 21: ತಾಯಿಯ ಆಸೆಯನ್ನು ಪೂರೈಸುವುದಕ್ಕಾಗಿ ದುಬೈ ವಲಸಿಗ ಮಹಿಳೆಯೊಬ್ಬರು ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮೆಟೊಗಳನ್ನು (Tomato) ಪ್ಯಾಕ್ ಮಾಡಿ ಭಾರತಕ್ಕೆ (India) ತಂದ ಅಪರೂಪದ ವಿದ್ಯಮಾನ ವರದಿಯಾಗಿದೆ. ರಜೆಗಾಗಿ ಭಾರತಕ್ಕೆ ಮನೆಗೆ ಹೊರಟಿದ್ದ ಮಹಿಳೆ ತನ್ನ ತಾಯಿ ಬಳಿ ದುಬೈನಿಂದ ಏನು ತರಬೇಕು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರ ಅಮ್ಮ, ದೇಶದಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಅದುವೇ ಆದೀತು ಎಂದು ಉತ್ತರಿಸಿದ್ದಾರೆ. ಮಹಿಳೆ ಟೊಮೆಟೊದೊಂದಿಗೆ ಸ್ವದೇಶಕ್ಕೆ ಬಂದಿದ್ದಾರೆ. ಈ ಕುರಿತ ಟ್ವೀಟೊಂದು ಈಗ ವೈರಲ್ ಆಗಿದೆ.

‘ನನ್ನ ಸಹೋದರಿ ತನ್ನ ಮಕ್ಕಳ ಬೇಸಿಗೆ ರಜೆಗಾಗಿ ದುಬೈನಿಂದ ಭಾರತಕ್ಕೆ ಬಂದಿದ್ದಾಳೆ. ಬರುವ ಮುನ್ನ ದುಬೈನಿಂದ ಏನಾದರೂ ಬೇಕೇ ಎಂದು ನನ್ನ ಅಮ್ಮನನ್ನು ಕೇಳಿದ್ದಳು. ತಾಯಿ 10 ಕಿಲೋ ಟೊಮೆಟೊಗಳನ್ನು ತನ್ನಿ ಎಂದು ಹೇಳಿದ್ದರು. ಹೀಗಾಗಿ ಅವಳು ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮೇಟೊ ಪ್ಯಾಕ್ ಮಾಡಿ ತಂದಿದ್ದಾಳೆ’ ಎಂದು ರೇವ್ಸ್ ಎಂಬ ಹೆಸರಿನ ಟ್ವೀಟ್ ಅಕೌಂಟ್​​ನಿಂದ ಟ್ವೀಟ್ ಮಾಡಲಾಗಿದೆ.

ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಅವಳು (ಸಹೋದರಿ) ಅದನ್ನು ದೊಡ್ಡ ಪರ್ಲ್‌ಪೆಟ್ ಬಾಕ್ಸ್‌ಗಳಲ್ಲಿ ಹಾಕಿದಳು ಮತ್ತು ಅವುಗಳನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ತಂದಳು ಎಂದು ರೇವ್ಸ್ ಟ್ವೀಟ್​​​ನಲ್ಲಿ ಉಲ್ಲೇಖಿಸಿದ್ದಾರೆ.


ಈ ಟ್ವೀಟ್ ಸದ್ಯ 53,500ಕ್ಕೂ ವಿವ್ಸ್ ಪಡೆದಿದೆ. ಅನೇಕರು ಬಳಕೆದಾರರಿಗೆ ಟೊಮೆಟೊ ಸಂಗ್ರಹಣೆ ಮತ್ತು ಕಸ್ಟಮ್ಸ್ ನಿಯಮಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಹಣದುಬ್ಬರದ ಸಮಯದಲ್ಲಿ ದುಬೈನಿಂದ ಟೊಮೆಟೊ ತಂದ ಮಗಳಿಗೆ ‘ಅತ್ಯುತ್ತಮ ಮಗಳು ಪ್ರಶಸ್ತಿ’ ನೀಡಬಹುದು ಎಂದು ಟ್ವಿಟರ್ ಬಳಕೆದಾರ ನಯನತಾರಾ ಮೆನನ್ ಬಾಗ್ಲಾ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಏರಿಕೆಯಾಗಿದ್ದು, ದೇಶದ ಕೆಲವು ಭಾಗಗಳಲ್ಲಿ ಕೆಜಿಗೆ 250 ರೂ.ವರೆಗೆ ಏರಿಕೆಯಾಗಿದೆ.

ಇದನ್ನೂ ಓದಿ: Tomato Price: ಸರ್ಕಾರದಿಂದ ಟೊಮೆಟೋಗೆ ಸಬ್ಸಿಡಿ ಇನ್ನಷ್ಟು ಹೆಚ್ಚಳ; ಕಿಲೋಗೆ 70 ರೂನಂತೆ ಮಾರಾಟ

ನೇಪಾಳದಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಮೂರು ಟನ್ ಟೊಮೆಟೊಗಳನ್ನು ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ವಶಪಡಿಸಿದ್ದರು ಎಂದು ‘ಐಎಎನ್​​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ವರದಿಗಳ ಪ್ರಕಾರ, ತಡವಾದ ಮುಂಗಾರು ಮಳೆ, ಹೆಚ್ಚಿನ ತಾಪಮಾನ ಮತ್ತು ಕಡಿಮೆ ಉತ್ಪಾದನೆಯು ಇತ್ತೀಚೆಗೆ ಟೊಮೆಟೊ ಬೆಲೆ ಏರಿಕೆಗೆ ಕಾರಣವಾಗಿರಬಹುದು. ಭಾರೀ ಮಳೆಯೂ ಬೆಲೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:15 pm, Fri, 21 July 23