ಮನಸೂರೆಗೊಳ್ಳುವ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ ಉದ್ಯಮಿ ಅನಂದ್ ಮಹಿಂದ್ರಾ, ಈ ಬಾರಿ ಕರ್ನಾಟಕದ್ದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 31, 2022 | 3:02 PM

ಮಹಿಂದ್ರ ಗ್ರೂಪ್ ಚೇರ್ಮನ್ ಆಗಿರುವ ಮಹಿಂದ್ರಾ, ಈ ವಿಡಿಯೋವನ್ನು ಕರ್ನಾಟಕದಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನಲ್ಲಿ ಚಿತ್ರೀಕರಿಸಲಾಗಿದೆ ಎಂದಿದ್ದಾರೆ.

ಮನಸೂರೆಗೊಳ್ಳುವ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ ಉದ್ಯಮಿ ಅನಂದ್ ಮಹಿಂದ್ರಾ, ಈ ಬಾರಿ ಕರ್ನಾಟಕದ್ದು!
ನರ್ತಕಿಗೆ ಆನೆಯ ಆಶೀರ್ವಾದ!
Follow us on

ಉದ್ಯಮಿ ಆನಂದ್ ಮಹಿಂದ್ರಾ (Anand Mahindra) ಇಂಟರ್ನೆಟ್ ನಲ್ಲಿ ಸಾಕಷ್ಟು ಸಮಯವನ್ನು ವ್ಯಯಿಸುವುದರಿಂದ ನಮಗೆ ಹಲವಾರು ಕುತೂಹಲಕಾರಿ, ವಿನೋದಮಯ, ಸಾಹಸ ಮತ್ತು ರೋಮಾಂಚಕಾರಿ (exciting) ವಿಡಿಯೋಗಳು ನೋಡಸಿಗುತ್ತಿವೆ. ಈ ಬಾರಿ ಅವರು ನಮ್ಮ ರಾಜ್ಯದ ದೇವಸ್ಥಾನವೊಂದರ ಅನೆಯ ವಿಡಿಯೋವನ್ನು ಪೋಸ್ಟ್ ಮಾಡಿ ನಮ್ಮನ್ನು ಚಕಿತಗೊಳಿಸಿದ್ದಾರೆ. ಟ್ವಿಟರ್ ನಲ್ಲಿ ಮಹಿಂದ್ರಾ ಅಪ್ಲೋಡ್ ಮಾಡಿರುವ ಈ ವಿಡಿಯೋ ಕ್ಲಿಪ್ ನಲ್ಲಿ ನಮಗೆ ಕಾಣುತ್ತಿರುವಂತೆ, ಸಾಂಪ್ರದಾಯಿಕ ಉಡುಗೆಯಲ್ಲಿ ಒಬ್ಬ ನರ್ತಕಿ (dancer) ದೇವಸ್ಥಾನದ ಆವರಣದಲ್ಲಿ ನೃತ್ಯ ಮಾಡುತ್ತಿದ್ದಾಳೆ. ಆಕೆಯ ಹಿಂಭಾಗದಲ್ಲಿ ಆನೆ ಮತ್ತು ಅದರ ಮಾವುತ ನಿಂತಿದ್ದಾರೆ. ನರ್ತಕಿ ಆನೆ ಕಡೆ ತಿರುಗಿ ಅದರಿಂದ ಆಶೀರ್ವಾದ ಯಾಚಿಸುವ ಹಾಗೆ ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ಆನೆಯು ಬಹಳ ಸೌಮ್ಯವಾಗಿ ತನ್ನ ಸೊಂಡಿಲನ್ನು ಆಕೆಯ ತಲೆಮೇಲೆ ಇಡುತ್ತದೆ. ನಂತರ ನರ್ತಕಿ ತನ್ನ ನೃತ್ಯವನ್ನ ಮುಂದುವರಿಸಿದಾಗ ಆನೆ ಆಶೀರ್ವದಿಸುವುದನ್ನು ಮುಂದುವರಿಸುತ್ತದೆ ಮತ್ತು ಆಕೆಗೆ ಶಹಬ್ಬಾಸ್ ಗಿರಿ ನೀಡುವ ಹಾಗೆ ತನ್ನ ತಲೆಯನ್ನು ಅಲ್ಲಾಡಿಸುತ್ತದೆ.

ಮಹಿಂದ್ರ ಗ್ರೂಪ್ ಚೇರ್ಮನ್ ಆಗಿರುವ ಮಹಿಂದ್ರಾ, ಈ ವಿಡಿಯೋವನ್ನು ಕರ್ನಾಟಕದಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನಲ್ಲಿ ಚಿತ್ರೀಕರಿಸಲಾಗಿದೆ ಎಂದಿದ್ದಾರೆ. ‘ಕರ್ನಾಟಕದ ಕಟೀಲ್ ನಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಅದ್ಭುತ. ಈ ದೇವಸ್ಥಾನದ ಆನೆಯು ಹೊಸ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ನಮ್ಮೆಲ್ಲರನ್ನು ಆಶೀರ್ವದಿಸಲಿ ಅಂತ ಅಂದುಕೊಳ್ಳುತ್ತೇನೆ,’ ಎಂದು ಅವರು ಬರೆದಿದ್ದಾರೆ.


ವಿಡಿಯೋ ಕ್ಲಿಪ್ ನೋಡಿದ ಬಳಿಕ ಹಲವಾರು ಜನ ಕಾಮೆಂಟ್ ಮಾಡಿತ್ತಿದ್ದಾರೆ.

‘ಆನೆಗಳು ಅದೆಷ್ಟು ಸುಂದರವಾದ ಪ್ರಾಣಿಗಳೆಂದರೆ ಅವುಗಳನ್ನು ನೋಡುತ್ತಿದ್ದಂತೆಯೇ ಪೂಜಿಸುವ ಭಾವನೆ ಮನಸಲ್ಲಿ ಹುಟ್ಟುತ್ತದೆ,’ ಅಂತ ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ

ಮತ್ತೊಬ್ಬರು, ‘ದೇವಸ್ಥಾನಗಳ ಆನೆಗಳು ಬಹಳ ಅನುನಯದ ಪ್ರಾಣಿಗಳು…ಪ್ರತಿಯೊಬ್ಬರನ್ನು ಅವು ತಮ್ಮ ಸೊಂಡಿಲುನಿಂದ ಅತ್ಯಂತ ಸೌಮ್ಯವಾಗಿ ಆಶೀರ್ವದಿಸುತ್ತಿರುತ್ತವೆ,’ ಅಂತ ಬರೆದಿದ್ದಾರೆ.

‘ನಿಜವಾದ ಭಾರತೀಯ ಪರಂಪರೆ,’ ಅಂತ ಮೂರನೇಯವರು ಹೇಳಿದ್ದಾರೆ.

ಹಲವಾರು ಜನ ವಿಡಿಯೋವನ್ನು ಅದ್ಭುತ ಮತ್ತು ಮನಮೋಹಕ ಅಂತ ವರ್ಣಿಸಿದ್ದಾರೆ.

ಇದಕ್ಕೂ ಮೊದಲು, ಮಹೀಂದ್ರಾ ತಮ್ಮ ‘ಸೋಮವಾರದ ಮೋಟಿವೇಶನಲ್ ಸಂದೇಶದಲ್ಲಿ ಒಬ್ಬ ಹುಡುಗ ತನ್ನ ಕೈಗಳಿಂದ ಅನಿಯಂತ್ರಿತ ವಿಮಾನವನ್ನು ತಡೆಹಿಡಿಯುವ ವಿಡಿಯೊವನ್ನು ಹಂಚಿಕೊಂಡಿದ್ದರು. ಕ್ಲಿಪ್ ನಲ್ಲಿ ವಿಮಾನವು ಭಾರೀ ವೇಗ ಮತ್ತು ನಿಯಂತ್ರಣ ಕಳೆದುಕೊಂಡ ರೀತಿಯಲ್ಲಿ ಕೆಳಗಿಳಿಯುತ್ತಿರುವುದು ಕಾಣುತ್ತದೆ. ಬೈಕ್ ಸವಾರನೊಬ್ಬ ಅದರ ಕಡೆ ಬೊಟ್ಟು ಮಾಡಿ ತೋರುತ್ತಿರುವುದು ಕಾಣುತ್ತದೆ. ವಿಮಾನ ನಿಶ್ಚಿತವಾಗಿ ಪತನಗೊಳ್ಳಲಿದೆ ಎಂದು ನಮಗೆ ಭಾಸವಾಗುತ್ತದೆ. ಆದರೆ ಹಾಗಾಗುವುದಿಲ್ಲ. ಶಾಲೆಯ ಛಾವಣಿಯ ಮೇಲೆ ನಿಂತಿರುವ ಹುಡುಗನೊಬ್ಬ ಅದನ್ನು ಗಾಳಿಯಲ್ಲಿ ಹಿಡಿಯುತ್ತಾನೆ.

ಇದನ್ನೂ ಓದಿ:  Babar Azam: ಪ್ರಶ್ನಿಸಿದ ಪರ್ತಕರ್ತನನ್ನು ಕಣ್ಣಲ್ಲೇ ಗುರಾಯಿಸಿದ ಪಾಕ್ ನಾಯಕ ಬಾಬರ್; ವಿಡಿಯೋ ವೈರಲ್

‘ಈ ವಿಡಿಯೊ ನನ್ನನ್ನು ಕೊನೆಯವರೆಗೂ ಮೂರ್ಖನನ್ನಾಗಿಸಿತು. ನೈತಿಕ ಪಾಠ? ನಮ್ಮ ಸಮಸ್ಯೆ ಮತ್ತು ಆತಂಕಗಳನ್ನು ಅವುಗಳ ಅಸಲಿ ಸ್ವರೂಪಕ್ಕಿಂತ ದೊಡ್ಡದಾಗಿ ನಾವು ಕಲ್ಪಿಸಿಕೊಳ್ಳುತ್ತೇವೆ. ಪರಿಹಾರಗಳು ಸದಾ ನಮ್ಮ ಹಿಡಿತದಲ್ಲಿರುತ್ತವೆ. ನಿಮ್ಮ ವಾರವು ಅಗತ್ಯಕ್ಕಿಂತ ಹೆಚ್ಚು ಚಿಂತಾಜನಕವಾಗಿ ನನಗೆ ಕಾಣುವಂತೆ ಮಾಡಬೇಡಿ,’ ಎಂದು ಮಹಿಂದ್ರಾ ಬರೆದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ