ಚಳಿಗಾಲ ಆರಂಭವಾಗಿಬಿಟ್ಟಿದೆ. ಈ ಸಮಯದಲ್ಲಿ ಹಿಮಾಚಲದಿಂದ ಉತ್ತರಾಖಂಡದವರೆಗೆ ಮತ್ತು ಜಮ್ಮು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಕೆಲವು ಸ್ಥಳಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತದೆ. ಈ ಹಿಮಪಾತದ ದೃಶ್ಯ ನಮಗೆಲ್ಲರಿಗೂ ನೋಡಲು ಅದ್ಭುತವಾಗಿ ಕಂಡರೂ, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ನಿವಾಸಿಗಳ ಪಾಡು ಹೇಳ ತೀರದು. ಇದಕ್ಕೆ ಉದಾಹರಣೆಯಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಭಾರಿ ಹಿಮಪಾತದಿಂದಾಗಿ ರಸ್ತೆಯೆಲ್ಲಾ ಹಿಮಾವೃತವಾದ ಪರಿಣಾಮ ಗರ್ಭಿಣಿ ಮಹಿಳೆಯೊಬ್ಬರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ ಕೊರೆಯುವ ಚಳಿಯಲ್ಲಿ ಹಿಮಾವೃತ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಹೃದಯ ವಿದ್ರಾವಕ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದಲ್ಲಿ ನಡೆದಿದ್ದು, ಹಿಮಪಾತವಾದ ಬಳಿಕ ರಸ್ತೆಗಳಲ್ಲಿ ಬಿದ್ದ ಭಾರೀ ಪ್ರಮಾಣದ ಹಿಮಗಳನ್ನು ತೆರವುಗೊಳಿಸದ ಪರಿಣಾಮ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾರದೆ ತುಂಬು ಗರ್ಭಿಣಿ ಮಹಿಳೆ ನಡು ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ವರದಿಗಳ ಪ್ರಕಾರ ಮಚಿಲ್ ವ್ಯಾಲಿಯ ಮಹಿಳೆಯೊಬ್ಬರಿಗೆ ಭಾನುವಾರ (ನವೆಂಬರ್ 24) ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯ ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸುತ್ತಾರೆ. ಆದರೆ ರಸ್ತೆಯಲ್ಲಿ ಹಿಮ ಬಿದ್ದ ಕಾರಣದಿಂದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲಾಗದೆ ಆ ಮಹಿಳೆ ಕೊರೆಯುವ ಚಳಿಯ ನಡುವೆ ನಡು ರಸ್ತೆಯಲ್ಲಿಯೇ ಮಗುವಿಗೆ ಜನ್ಮವನ್ನು ನೀಡಿದ್ದಾರೆ.
ಈ ಹೃದಯವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗರ್ಭಿಣಿ ಮಹಿಳೆಗೆ ತುರ್ತು ಸೇವೆಯನ್ನು ಒದಗಿಸಿಕೊಡದಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಇದಕ್ಕೆಲ್ಲಾ ಆಡಳಿತಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ನೋಟಿನ ಮಾಲೆಯಿಂದ ಹಣ ಎಗರಿಸಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ವರ; ವಿಡಿಯೋ ವೈರಲ್
ಇಲ್ಲಿನ ಸ್ಥಳೀಯ ನಿವಾಸಿಯಾದ ಮುಹಮ್ಮದ್ ಜಮಾಲ್ ಲೋನ್ ʼಇಲ್ಲಿ ಸಾಕಷ್ಟು ಆರೋಗ್ಯ ಸೌಲಭ್ಯಗಳು ಲಭ್ಯವಿಲ್ಲ, ನಮ್ಮಲ್ಲಿ ಆರೋಗ್ಯ ಕೇಂದ್ರವಿದೆ ಆದರೆ ವೈದ್ಯರಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಸರಿಯಾದ ಆರೋಗ್ಯ ಸೌಲಭ್ಯಗಳಿಲ್ಲದ ಪರಿಣಾಮ ತಾಯಿ ಮತ್ತು ಮಗುವನ್ನು ರಕ್ಷಿಸಲು ನಾವು ಗಂಟೆಗಟ್ಟಲೆ ಹರಸಾಹಸವನ್ನು ಪಡಬೇಕಾಯಿತುʼ ಎಂದು ಹೇಳಿದ್ದಾರೆ. ಇನ್ನೂ ಸ್ಥಳೀಯರು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದೆಂದು ರಸ್ತೆಯಲ್ಲಿ ಬೀಳುವಂತಹ ಹಿಮ ತೆರವು ಕಾರ್ಯವನ್ನು ಸರಿಯಾಗಿ ಮಾಡಬೇಕು ಹಾಗೂ ಆರೋಗ್ಯ ಸೌಲಭ್ಯ ಮತ್ತು ಸೇವೆಯನ್ನು ಸುಧಾರಿಸಲು ಮನವಿ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ