ತಿರುವನಂತಪುರಂ: ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸುವ ಕುರಿತು ತೀವ್ರತರದ ಚರ್ಚೆಗಳು ನಡೆಯುತ್ತಿವೆ. ಕಡಿಮೆ ಮಕ್ಕಳನ್ನು ಹೊಂದಿದ ಕುಟುಂಬಕ್ಕಷ್ಟೇ ಸರ್ಕಾರಿ ಯೋಜನೆಗಳನ್ನು ನೀಡುವುದಾಗಿ ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಘೋಷಿಸಿವೆ. ಈ ಹೊತ್ತಲ್ಲೇ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಕೆಲವು ಉತ್ತೇಜನಕಾರಿ ಯೋಜನೆಗಳನ್ನು ಒದಗಿಸುವುದಾಗಿ ಕೇರಳದ ಚರ್ಚ್ ಒಂದರ ಬಿಷಪ್ (Kerala Bishop) ಘೋಷಿಸಿದ್ದಾರೆ.
ಸಿರೋ ಮಲಬಾರ್ ಚರ್ಚ್ನ ಮಾರ್ ಜೊಸೆಫ್ ಅವರೇ ಈ ಘೋಷಣೆ ಮಾಡಿದವರು. ತಮ್ಮ ಚರ್ಚ್ನ ವ್ಯಾಪ್ತಿಯಲ್ಲಿ ಬರುವ ದಂಪತಿಗಳಿಗೆ 5 ಅಥವಾ 5ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಬಂಪರ್ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ 2000ನೇ ಇಸವಿಯ ನಂತರ ಮದುವೆಯಾದ ದಂಪತಿಗಳು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ ಎಂದು ಸಹ ಕೆಲ ನಿಯಮವನ್ನೂ ಅವರು ರೂಪಿಸಿದ್ದಾರೆ.
2000ನೇ ಇಸವಿಯ ನಂತರ ಮದುವೆಯಾದ ದಂಪತಿಗಳ 4ನೆ ಮಗುವಿನಿಂದ ನಂತರದ ಮಕ್ಕಳೆಲ್ಲರೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಚರ್ಚ್ನ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಈ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುವುದು, ಅದೂ ಪ್ರತಿ ತಿಂಗಳು ₹1500 ಪ್ರೋತ್ಸಾಹ ಧನವನ್ನೂ ಒದಗಿಸಿ ಶಿಕ್ಷಣ ನೀಡಲಾಗುವುದು ಎಂದು ಬಿಷಪ್ ಘೋಷಿಸಿದ್ದಾರೆ. ದಂಪತಿಗಳ ನಾಲ್ಕನೇ ಮಗುವಿನಿಂದ ನಂತರದ ಎಲ್ಲಾ ಮಕ್ಕಳಿಗೆ ವೈದ್ಯಕೀಯ ಸೌಲಭ್ಯವನ್ನು ಸಹ ಚರ್ಚ್ ನಡೆಸುತ್ತಿರುವ ಆಸ್ಪತ್ರೆಯೇ ನೋಡಿಕೊಳ್ಳಲಿದೆ ಎಂದು ಸಹ ಅವರು ತಿಳಿಸಿದ್ದಾರೆ.
ವರ್ಚುವಲ್ ಮೀಟಿಂಗ್ ಒಂದರಲ್ಲಿ ಬಿಷಪ್ ಈ ಯೋಜನೆಯನ್ನು ಘೋಷಿಸಿದಾರೆ. ಆಗ ಎಲ್ಲರ ಹುಬ್ಬುಗಳೂ ಅಚ್ಚರಿಯಿಂದ ಮೇಲೇರಿದವಂತೆ. ಆದರೆ ಬಿಷಪ್ ತಾವು ಮಾಡಿದ ಘೋಷಣೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.
ಇದನ್ನೂ ಓದಿ:
‘ಲಂಚವನ್ನು ನಾನು ಸ್ವೀಕರಿಸುವುದೂ ಇಲ್ಲ, ಕೊಡುವುದೂ ಇಲ್ಲ’; ವೈರಲ್ ಆಯ್ತು ರಾಜ್ ಕುಂದ್ರಾ ಹಳೆಯ ವಿಡಿಯೋ
(Kerala Bishop announces special project if there are more than 5 children! )