ಅನೇಕರು ತಮ್ಮ ನೆಚ್ಚಿನ ಕ್ರಿಕೆಟ್ ತಂಡದ ಆಟವನ್ನು ಕಣ್ಣಾರೆ ನೋಡಲು ಅದೆಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ಬಹಳ ಉತ್ಸಾಹದಿಂದ ಸ್ಟೇಡಿಯಂ ಗೆ ಬರುತ್ತಾರೆ. ಹೀಗೆ ಬಂದವರು ತಮ್ಮ ನೆಚ್ಚಿನ ಆಟಗಾರನೊಂದಿಗೆ ಮಾತನಾಡಬೇಕು, ಅವರನ್ನು ಭೇಟಿಯಾಗಬೇಕೆಂದು ಮೈದಾನದೊಳಗೆ ನುಗ್ಗುವಂತಹದ್ದೂ ಅಥವಾ ಇನ್ನಾವುದಾದರೂ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ. ಇಂತಹ ಹಲವಾರು ಪ್ರಸಂಗಗಳು ಈ ಹಿಂದೆ ನಡೆದಿವೆ. ಕೆಲ ದಿನಗಳ ಹಿಂದೆಯೂ ಧೋನಿ ಅಭಿಮಾನಿಯೊಬ್ಬ ಕ್ರಿಕೆಟ್ ಪಂದ್ಯಾವಳಿಯ ವೇಳೆ ಮೈದಾನದೊಳಗೆ ನುಗ್ಗಿದ್ದ ಘಟನೆಯೊಂದು ನಡೆದಿದ್ದು. ಇದೀಗ ಮತ್ತೊಂದು ಸ್ವಾರಸ್ಯಕರ ಘಟನೆಯೊಂದು ನಡೆದಿದ್ದು, ಕ್ರಿಕೆಟ್‌ನ ಹುಚ್ಚು ಅಬಿಮಾನಿಯೊಬ್ಬ ಐಪಿಎಲ್ ಪಂದ್ಯಾವಳಿಯ ವೇಳೆ ಕ್ರಿಕೆಟ್ ಚೆಂಡನ್ನೇ ಎಗರಿಸಲು ಯತ್ನಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಾರಂತ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಈ ಘಟನೆ ನಡೆದಿದ್ದು, ಕೆಕೆಆರ್ ತಂಡದ ಅಪ್ಪಟ ಅಭಿಮಾನಿಯೊಬ್ಬ ಕ್ರಿಕೆಟ್ ಬಾಲ್ ಅನ್ನು ಕದಿಯಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸ್ವಾರಸ್ಯಕರ ವಿಡಿಯೋವನ್ನು ಮುಫದಲ್ ವೋಹ್ರಾ (@mufaddal_vohra) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಭಿಮಾನಿಯೊಬ್ಬ ಪಂದ್ಯದ ವೇಳೆ ಚೆಂಡನ್ನು ಕದಿಯಲು ಯತ್ನಿಸಿ, ಸಿಕ್ಕಿಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
A fan tried to steal the match ball, but got caught. 😂pic.twitter.com/99bmVET9tM
— Mufaddal Vohra (@mufaddal_vohra) May 14, 2024
ವೈರಲ್ ವಿಡಿಯೋದಲ್ಲಿ ಕೆಕೆಆರ್ ಅಭಿಮಾನಿಯೊಬ್ಬ ಕ್ರಿಕೆಟ್ ಬಾಲ್ ಅನ್ನು ತನ್ನ ಪ್ಯಾಂಟ್ ಒಳಗೆ ಬಚ್ಚಿಟ್ಟು ಅದನ್ನು ಹೇಗಾದ್ರೂ ಮಾಡಿ ಮನೆಗೆ ತಗೊಂಡು ಹೋಗ್ಬೇಕಪ್ಪಾ ಎಂದು ಪ್ಲಾನ್ ಮಾಡುತ್ತಾನೆ. ಆದ್ರೆ ಈ ವಿಷಯ ಪೊಲೀಸರಿಗೆ ಗೊತ್ತಾಗಿ ಆತನನ್ನು ಗದರಿಸಿ ಚೆಂಡನ್ನು ಕಸಿದುಕೊಂಡಿದ್ದಾರೆ. ಹೀಗೆ ಚೆಂಡನ್ನು ಕಸಿದುಕೊಂಡ ಬಳಿಕ ಪೊಲೀಸಪ್ಪ ಆ ಬಾಲಕನನ್ನು ಹೊರ ದಬ್ಬುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕುದುರೆಯಲ್ಲ ಬಿಳಿ ಸ್ಕೂಟಿ ಏರಿ ಮದುವೆ ಮನೆಗೆ ಬಂದ ಮದುಮಗ; ದಿಬ್ಬಣ ನೋಡಿ ಖುಷಿಪಟ್ಟ ಜನ
ಮೇ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆ ಪೊಲೀಸ್ ಬಾಲಕನೊಂದಿಗೆ ಅಷ್ಟು ಕಟುವಾಗಿ ವರ್ತಿಸಬಾರದಿತ್ತು ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ