ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾಡಾನೆಯ ದಾಳಿಗೆ ತುತ್ತಾಗಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿಯನ್ನು ಹೊತ್ತಿದ್ದ, ಅರ್ಜುನ ಆನೆ ಮೃತಪಟ್ಟಿದೆ. ಕಾರ್ಯಾಚರಣೆಯ ವೇಳೆ ಮದವೇರಿದ ಕಾಡಾನೆ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಅಲ್ಲಿಂದ ಓಡಿ ಹೋಗಿವೆ. ಆದರೆ ಅರ್ಜುನ ಆನೆ ಈ ಕಾಡಾನೆಯೊಂದಿಗೆ ಒಬ್ಬಂಟಿಯಾಗಿ ಹೋರಾಡಿದೆ. ಈ ವೇಳೆಯಲ್ಲಿ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಾಗ, ಈ ಮದವೇರಿದ ಕಾಡಾನೆ ತನ್ನ ದಂತದಿಂದ ಅರ್ಜುನನ ಹೊಟ್ಟೆಗೆ ತಿವಿದಿದೆ. ಇದರ ಪರಿಣಾಮವಾಗಿ ಅರ್ಜುನ ಆನೆ ಮೃತಪಟ್ಟಿದೆ. ಅರ್ಜುನನ ಸಾವಿಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದ್ದು, ಅರ್ಜುನನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರ್ಜುನ ಆನೆಗೆ ಅನ್ಯಾಯವಾಗಿದೆ, ಅವನ ಸಾವಿಗೆ ನ್ಯಾಯ ಕೊಡಿಸಿ, ಎಂಬ ಕೂಗೂ ಕೇಳಿ ಬರುತ್ತಿದೆ. ಈ ಮಧ್ಯೆ ಇದೀಗ ಅರ್ಜುನನ ಸಾವಿಗೆ ಕಾರಣವಾದ ಒಂಟಿ ಸಲಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋವನ್ನು ಕಂಡು ನಿನ್ನ ಸೊಕ್ಕಡಗಿಸಲು ಅರ್ಜುನನ ಗೆಳೆಯ ಅಭಿಮನ್ಯು ಆನೆ ಬಂದೇ ಬರುತ್ತಾನೆ ಎಂದು ಕಾಡಾನೆಯ ವಿರುದ್ಧ ನೆಟ್ಟಿಗರು ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.
@mudigere_adventures ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದೇ ಒಂಟಿ ಸಲಗ ಅರ್ಜುನ ಆನೆಯನ್ನು ಬಲಿ ಪಡದಿದ್ದು ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಅರ್ಜುನ ಆನೆಯನ್ನು ಬಲಿ ಪಡೆದ ಕಾಡಾನೆ ಕಾಡಿನಲ್ಲಿ ತಿರುಗಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಲ್ಲುಜ್ಜುತ್ತಿರುವಾಗ ಗಂಟಲಲ್ಲಿ ಸಿಕ್ಕಿಕೊಂಡ ಬ್ರಷ್; ಮುಂದೇನಾಯಿತು ಗೊತ್ತಾ?
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 907K ವೀಕ್ಷಣೆಗಳನ್ನು ಹಾಗೂ 71.8K ಲೈಕ್ಸ್ ಗಳನ್ನು ಪಡೆದುಕೊಂಡಿವೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಇದೇ ಆನೆಯನ್ನು ಹಿಡಿದು ಪಳಗಿಸಿ ಅರ್ಜುನನ ಜಾಗಕ್ಕೆ ತರಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತನ್ನ ಗೆಳೆಯನ ಸಾವಿಗೆ ನ್ಯಾಯ ನೀಡಲು ನಿನ್ನ ಸೊಕ್ಕಡಗಿಸಲು ವೀರಾಧಿವೀರ ಅಭಿಮನ್ಯು ಆನೆ ಬಂದೇ ಬರುತ್ತಾನೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಕಾಡನೆಯನ್ನು ಸದೆಬಡಿಯಲು ನಮ್ಮ ವೀರ ಅಭಿಮನ್ಯವನ್ನು ಕರೆಸಿ ಎಂದು ಕೇಳಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:28 pm, Wed, 6 December 23