Viral Video: ಶ್ರೀ ಕೃಷ್ಣದೇವರಾಯರ ಆಸ್ಥಾನದ ಮಹಾಮಂತ್ರಿ ತಿಮ್ಮರಸರ ವಾಡೆ ಮತ್ತು ಕುಟುಂಬ ಈಗ ಹೇಗಿದೆ ಗೊತ್ತಾ?
ಶ್ರೀ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಎಷ್ಟು ಶ್ರೀಮಂತವಾಗಿತ್ತು ಎಂಬುದನ್ನು ನಾವೆಲ್ಲರೂ ಐತಿಹಾಸಿಕ ಕಥೆಗಳಲ್ಲಿ ಓದಿದ್ದೇವೆ. ಆದರೆ ಅಂದಿನ ಕಾಲದ ಶ್ರೀಮಂತ ವಾಡೆ ಮನೆಗಳು ಹೇಗಿದ್ದವು, ಆ ವಾಡೆಗಳಲ್ಲಿ ಯಾವೆಲ್ಲಾ ಮೂಲಸೌಕರ್ಯ ವ್ಯವಸ್ಥೆಗಳಿತ್ತು ಎಂಬುದನ್ನು ನೀವು ನೋಡಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಶ್ರೀ ಕೃಷ್ಣದೇವರಾಯರ ಆಸ್ಥಾನದ ಮಹಾಮಂತ್ರಿ ತಿಮ್ಮರಸರ ಐತಿಹಾಸಿಕ ವಾಡೆಯ ಕುರಿತ ಮಾಹಿತಿ
ತಿಮ್ಮರಸ ಎಂದೇ ಖ್ಯಾತಿಯನ್ನು ಪಡೆದಿರುವ ಸಾಳುವ ತಿಮ್ಮರಸರು ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯರ ಮಹಾಮಂತ್ರಿಯವರಾಗಿದ್ದವರು. ಕೃಷ್ಣದೇವರಾಯನ ಆಳ್ವಿಕೆಯ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯವು ಎಷ್ಟು ಶ್ರೀಮಂತವಾಗಿತ್ತು ಎಂಬುದನ್ನು ನಾವು ಹಲವಾರು ಇತಿಹಾಸ ಕಥೆಗಳಲ್ಲಿ ಕೇಳಿರುತ್ತೇವೆ. ಆದರೆ ಆಗಿನ ಕಾಲದ ದೊಡ್ಡ ದೊಡ್ಡ ವಾಡೆ (ಮನೆ) ಹೇಗಿತ್ತು, ಆಗಿನ ಕಾಲದ ಮನೆಗಳಲ್ಲಿ ಈದಿನ ಕಾಲದಲ್ಲಿ ಇರುವಂತೆ ಸುಸಜ್ಜಿತ ಸೌಕರ್ಯಗಳು ಇತ್ತೇ ಎಂಬುದು ಬಹುಶಃ ನಮಗೆಲ್ಲ ತಿಳಿದಿಲ್ಲ. ಆದರೆ ಹೆಚ್ಚಿನವರು ಇಂತಹ ಐತಿಹಾಸಿಕ ಸ್ಥಳಗಳ ಕುರಿತ ಕಥೆಗಳನ್ನು ಕೇಳಲು, ವಿಡಿಯೋಗಳನ್ನು ನೋಡಲು ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ. ನೀವು ಕೂಡಾ ಐತಿಹಾಸಿಕ ಸ್ಥಳ, ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯನ್ನು ಹೊಂದಿದ್ದರೆ, ಕನ್ನಡದ ಖ್ಯಾತ ಯೂಟ್ಯೂಬ್ ಚಾನೆಲ್ ʼಕಲಾ ಮಾಧ್ಯಮʼ ಹಂಚಿಕೊಂಡಿರುವ ಕೃಷ್ಣದೇವರಾಯರ ಮಹಾಮಂತ್ರಿ ತಿಮ್ಮರಸರ ವಾಡೆಯ ಕುರಿತ ಈ ಸುಂದರವಾದ ವಿಡಿಯೋವನ್ನೊಮ್ಮೆ ನೋಡಿ.
ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ತಂಡ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿರುವ ಮೇಣೆದಾಳ ವಾಡೆಯ ಕುರಿತ ಇಂಟರೆಸ್ಟಿಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇಲ್ಲಿ ನೀವು ತಿಮ್ಮರಸರ ವಾಡೆ ಎಷ್ಟು ಶ್ರೀಮಂತವಾಗಿತ್ತು ಮತ್ತು ಅವರ ಕುಟುಂಬವರ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ವಿಡಿಯೋ ಇಲ್ಲಿದೆ ನೋಡಿ:
500 ವರ್ಷಗಳ ಇತಿಹಾಸವಿರುವ ಈ ಮೇಣೆದಾಳ ವಾಡೆಯಲ್ಲಿ ಪ್ರಸ್ತುತ ತಿಮ್ಮರಸರ ತಮ್ಮ ತಿಪ್ಪರಸರ 19ನೇ ತಲೆಮಾರಿನವರು ವಾಸವಿದ್ದಾರೆ. ಈ ವಾಡೆಯನ್ನು ನೋಡಿದಾಗ ಅಂದಿನ ಕಾಲದಲ್ಲಿ ಅವರು ಎಷ್ಟು ವೈಭವದ ಜೀವನವನ್ನು ನಡೆಸುತ್ತಿದ್ದರು, ಅಂದಿನ ಕಾಲದಲ್ಲಿ ಎಷ್ಟೆಲ್ಲಾ ಸೌಕರ್ಯಗಳಿತ್ತು ಎಂಬುದನ್ನು ನೋಡಬಹುದು. ಆಧುನಿಕ ಕಾಲದ ಮನೆಗಳಿಗೆ ಸೆಡ್ಡು ಹೊಡೆಯುವಂತೆ ಅಂದಿನ ಕಾಲದಲ್ಲಿಯೇ ಈ ವಾಡೆಯನ್ನು ಒಂದೊಳ್ಳೆ ಪ್ಲಾನಿಂಗ್ ಮಾಡಿ ನಿರ್ಮಿಸಲಾಗಿತ್ತು. ಅಂಗಳ, ಹಜಾರ, ಊರಿನ ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬಗಳನ್ನು ಆಚರಿಸಲು ದೊಡ್ಡ ವೇದಿಕೆ, ಬಾವಿ, ಖಜಾನೆ ಎಲ್ಲವನ್ನು ವಾಡೆಯ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ವಾಡೆಯ ಹೊರಭಾಗದಲ್ಲಿರುವ ವೇದಿಕೆ ಸುತ್ತಮುತ್ತಲಿನ ಕಟ್ಟಡ, ಮೇಲ್ಛಾವಣಿ ಎಲ್ಲಾ ದುರಸ್ಥಿಯ ಹಂತಕ್ಕೆ ಬಂದಿದೆ.
ಇದನ್ನೂ ಓದಿ: ಈ ಮಗುವಿಗೆ ಯಕ್ಷಗಾನದ ಮೇಲಿರುವ ಉತ್ಸಾಹಕ್ಕೆ ತಲೆ ಬಾಗಲೇಬೇಕು
ಆ ಕಾಲದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಇದ್ದ ಕಾರಣ, ವಾಡೆಯ ಒಳ ಭಾಗದಲ್ಲಿ ಹಲವು ಕೋಣೆಗಳನ್ನು ಸಹ ನಿರ್ಮಿಸಲಾಗಿತ್ತು. ಅಲ್ಲದೆ ಮನೆಗೆ ಬೇಕಾಗಿರುವ ಪ್ರತಿಯೊಂದು ಮೂಲ ಸೌಕರ್ಯಗಳನ್ನು ಸಹ ಅಂದಿನ ಕಾಲದಲ್ಲಿಯೇ ಬಹಳ ಸುಸಜ್ಜಿತವಾಗಿ ಮಾಡಲಾಗಿತ್ತು. ವಿಶಾಲವಾದ ದೇವರ ಕೋಣೆ, ಹಿತ್ತಲ ಪಡಸಾಲೆ, ಬಾಣಂತಿಯರ ಕೋಣೆ, ಬಾಣಂತಿಯರಿಗೆ ಪ್ರತ್ಯೇಕ ಬಚ್ಚಲು ಮನೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಬಚ್ಚಲು ಮನೆ, ಬಿಸಿ ನೀರಿನ ತೊಟ್ಟಿ, ತಣ್ಣೀರಿನ ತೊಟ್ಟಿ, ವಿಶಾಲವಾದ ಅಡುಗೆ ಕೋಣೆ, ಮಸಾಲೆ ಪದಾರ್ಥಗಳು ಮತ್ತು ಧಾನ್ಯಗಳನ್ನು ಸಂಗ್ರಹಿಸಿಡಲು ಉಗ್ರಾಣಗಳನ್ನು ಸಹ ನಿರ್ಮಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಆಗಿನ ಕಾಲದಲ್ಲಿ ಯಾವುದೇ ಹೋಟೆಲ್ ಸೌಲಭ್ಯ ಇರದ ಕಾರಣ ಮಧ್ಯಾಹ್ನ ಹಸಿದ ಬಂದವರಿಗಂತಲೇ ಊಟ ಮಾಡಲು, ನೀರು ಕುಡಿಯಲು ಮಲಗಲು ಒಂದು ಕೋಣೆಯ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಆಗಿನ ಕಾಲದಲ್ಲಿಯೇ ಒಂದು ಮನೆಯನ್ನು ಎಷ್ಟು ಸುವ್ಯಸ್ಥಿತವಾಗಿ ನಿರ್ಮಿಸಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ಕಣ್ತುಂಬಿಕೊಳ್ಳಬಹುದು.
ಕಲಾಮಾಧ್ಯಮ ಫೇಸ್ಬುಕ್ ಪೇಜ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 941K ವೀಕ್ಷಣೆಗಳನ್ನು ಹಾಗೂ 34K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಐತಿಹಾಸಿಕ ಸ್ಥಳದ ಬಗ್ಗೆ ಒಂದೊಳ್ಳೆ ಮಾಹಿತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ ಹಲವರು ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ