Love Bombing: ಇದು ಲವ್ ಬಾಂಬ್ ದಾಳಿ, ಮಾತಲ್ಲೇ ಮರಳು ಮಾಡಿ ಪ್ರೀತಿಯ ಬಲೆಗೆ ಬೀಳಿಸಿ, ಯುವಕರ ಜೀವನ ನಾಶ ಮಾಡುವ ತಂತ್ರ
ಅತಿಯಾದರೆ ಅಮೃತವೂ ವಿಷವೆನ್ನುವ ಹಾಗೆ ಅತಿಯಾದ ಪ್ರೀತಿಯೂ ಕೂಡಾ ಕೆಲವು ಬಾರಿ ವಿಷವಾಗಿ ಪರಿಣಮಿಸಬಹುದು ಇಲ್ಲವೆ ಉಸಿರುಗಟ್ಟಿಸಿದಂತಾಗಬಹುದು. ಇದಕ್ಕೆ ಲವ್ ಬಾಂಬಿಂಗ್ ದಾಳಿ ಅಂತಾನೂ ಕರಿತಾರೆ. ಹೌದು, ಮೊದ ಮೊದಲು ನಿಮ್ಮನ್ನು ಅತಿಯಾಗಿ ಪ್ರೀತಿಸಿ ಕೆಲ ಸಮಯದ ಬಳಿಕ ನಿಮ್ಮ ಮೇಲೆ ಅಧಿಕಾರ ಚಲಾಯಿಸಿ ನಿಮಗೆ ನೋವು ಕೊಡುವುದಾಗಿದೆ. ಒಂದು ಲೆಕ್ಕದಲ್ಲಿ ಟಾಕ್ಸಿಕ್ ರಿಲೇಷನ್‌ಶಿಪ್ ಅಂತಾನೇ ಹೇಳಬಹುದು. ಈ ಲವ್ ಬಾಂಬ್ ದಾಳಿಗೆ ಇಂದಿನ ಯುವ ಪೀಳಿಗೆ ಹೆಚ್ಚಾಗಿ ಬಲಿಯಾಗುತ್ತಿದೆ.
ಪ್ರೀತಿಯು ಈ ಪ್ರಪಂಚದ ಅತ್ಯಂತ ಸುಂದರವಾದ ಭಾವನೆಯಾಗಿದೆ. ಹೆಚ್ಚಿನವರು ತಾನು ಪ್ರೀತಿ ಮಾಡುವ ಜೀವ ನನ್ನನ್ನು ಅತಿಯಾಗಿ ಪ್ರೀತಿಸಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಯಾರಾದರೂ ಅತಿಯಾಗಿ ಕಾಳಜಿ, ಪ್ರೀತಿ ತೋರಿಸಿ ಪ್ರಪೋಸ್ ಮಾಡಿದ್ರೆ, ಆ ಹುಡುಗ ಅಥವಾ ಹುಡುಗಿ ಹೇಗೆ ಎಂಬುದನ್ನೂ ನೋಡದೆ ಅವರ ಪ್ರೀತಿಯನ್ನು ಒಪ್ಪಿಕೊಂಡು ಬಿಡ್ತಾರೆ. ಆದ್ರೆ ಈ ಅತಿಯಾದ ಪ್ರೀತಿ, ಮಮತೆ ಕೆಲ ಸಮಯದ ಬಳಿಕ ಸಂಬಂಧವನ್ನು ಹಾಳು ಮಾಡುವುದರ ಜೊತೆಗೆ ನಿಮ್ಮನ್ನೂ ನೋವಿಗೂ ನೂಕುತ್ತದೆ. ಈ ಅತಿಯಾದ ಪ್ರೀತಿ, ಕಾಳಜಿ ತೋರಿಸುವಿಕೆಯನ್ನು ಲವ್ ಬಾಂಬಿಂಗ್ ದಾಳಿ ಎಂದು ಕರೆಯುತ್ತಾರೆ. ಇದಕ್ಕೆ ಹೆಚ್ಚಾಗಿ ಇಂದಿನ ಯುವ ಜನಾಂಗ ಬಲಿಯಾಗುತ್ತಿದೆ.
ಲವ್ ಬಾಂಬಿಂಗ್ ಎಂದರೇನು?
ಲವ್ ಬಾಂಬಿಂಗ್ ಎಂದರೆ ಮುದ್ದಾದ ಮಾತುಗಳಿಂದಲೇ, ಕಾಳಜಿಯಿಂದಲೇ ತಮ್ಮ ಸಂಗಾತಿ ಅಥವಾ ಪ್ರೇಮಿಯನ್ನು ಮಾನಸಿಕವಾಗಿ ತನ್ನ ಖೈದಿಗಳಾಗಿಸಿಕೊಳ್ಳುವ ತಂತ್ರ. ಹೌದು ಮೊದ ಮೊದಲು ವಿಪರೀತ ಪ್ರೀತಿ ತೋರುವುದು, ಆಗಾಗ್ಗೆ ಉಡುಗೊರೆಗಳನ್ನು ನೀಡುವ ಮೂಲಕ ಸಂಗಾತಿಯನ್ನು ಖುಷಿ ಪಡಿಸಿ ಭಾವನಾತ್ಮಕವಾಗಿ ಪ್ರಭಾವ ಬೀರಲು ಶುರು ಮಾಡುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸ್ವಾರ್ಥ ಭಾವದಿಂದ ಸಂಗಾತಿಯನ್ನು ಪ್ರತಿಯೊಂದು ವಿಷಯದಲ್ಲೂ ನಿಯಂತ್ರಿಸಲು ಪ್ರಾರಂಭಿಸಿ ಹಾಗೂ ಹಕ್ಕು ಚಲಾಯಿಸಲು ಪ್ರಾರಂಭಿಸಿ ಅವರಿಗೆ ನೋವನ್ನು ಉಂಟುಮಾಡುತ್ತಾರೆ. ಈ ಲವ್ ಬಾಂಬ್ ದಾಳಿಗೆ Gen Z (1995 ರಿಂದ 2010 ನಡುವೆ ಜನಿಸಿದವರು) ಜನರೇಷನ್‌ನವರು ಅಂದ್ರೆ ಇಂದಿನ ಯುವ ಪೀಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡೇ ಪ್ರತಿನಿತ್ಯ ಕೆಲಸ ಮಾಡುವ ಝೊಮಾಟೊ ಡೆಲಿವರಿ ಬಾಯ್
ಲವ್ ಬಾಂಬಿಂಗ್ ದಾಳಿ ಯಾವಾಗ ಸಮಸ್ಯೆಯಾಗುತ್ತದೆ?
ಮೊದ ಮೊದಲು ನಿಮಗೆ ಅತಿಯಾದ ಪ್ರೀತಿಯನ್ನು ತೋರಿ, ಕೆಲ ಸಮಯದ ಬಳಿಕ ಸ್ವಾರ್ಥದಿಂದ ಹಾಗೂ ಹೆಚ್ಚು ಪೊಸೆಸಿವ್ ಆಗಿ ಆ ಪ್ರೀತಿಯಿಂದಲೇ ನಿಮ್ಮನ್ನು ಕಟ್ಟಿ ಹಾಕಿ ಬೇರೆ ಯಾರೊಂದಿಗೂ ಮಾತನಾಡುವಂತಿಲ್ಲ, ಯಾರೊಂದಿಗೂ ಸುತ್ತಾಡಲು ಹೋಗುವಂತಿಲ್ಲ ಎಂದು ನಿರ್ಬಂಧಗಳನ್ನು ಹಾಕಿ ನಿಮ್ಮ ಮೇಲೆ ಹಕ್ಕು ಚಲಾಯಿಸುತ್ತಾರೆ. ಇಲ್ಲವೇ ತಮ್ಮ ಚುಚ್ಚು ಮಾತುಗಳಿಂದಲೇ ನಿಮಗೆ ನೋವುಂಟು ಮಾಡುತ್ತಾರೆ. ಇಲ್ಲವೇ ಅತಿಯಾಗಿ ಪ್ರೀತಿ ತೋರಿಸಿ ನಿಮ್ಮನ್ನು ಇದ್ದಕ್ಕಿದ್ದಂತೆ ಕಡೆಗಣಿಸಲು ಶುರು ಮಾಡಿ ಕೊನೆಯಲ್ಲಿ ಬಿಟ್ಟು ಹೋಗುತ್ತಾರೆ. ಇಂತಹ ಕೆಲವೊಂದು ಸಂಗತಿಗಳು ಪ್ರೀತಿಯ ಸಂಬಂಧಲ್ಲಿ ಸಮಸ್ಯೆಯಾಗಿ ಪರಿಣಮಿಸಬಹುದು. ಹಾಗಾಗಿ ಪ್ರೀತಿ ಸಂಬಂಧದಲ್ಲಿ ಅತಿಯಾಗಿ ಪ್ರೀತಿ, ಕಾಳಜಿ ತೋರುವವರ ಬಗ್ಗೆ ಸ್ವಲ್ಪ ಜಾಗರೂಕರಾಗಿ ಹಾಗೂ ನಿಮ್ಮ ನಡುವೆ ಆರೋಗ್ಯಕರ ಗಡಿಯನ್ನು ನಿರ್ಮಿಸಿಕೊಳ್ಳಿ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ