
ಮಧ್ಯಪ್ರದೇಶ, ಸೆಪ್ಟೆಂಬರ್ 18: ಹೆಚ್ಚು ಓದುತ್ತಿದ್ದಂತೆ ನಾವುಗಳು ಮನುಷ್ಯತ್ವ ಮರೆತು ವರ್ತಿಸುತ್ತಿದ್ದೇವೆ. ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಮರೆತು ಬಿಟ್ಟಿದ್ದೇವೆ ಎಂದೆನಿಸುತ್ತದೆ. ಈ ದೃಶ್ಯ ನೋಡಿದ ಮೇಲೆ ನಿಮಗೂ ಹಾಗೆಯೇ ಅನಿಸಿದ್ರೂ ತಪ್ಪಿಲ್ಲ. ಹೆರಿಗೆ ಕೊಠಡಿಯೊಳಗೆ (labour room) ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಈ ಘಟನೆಯೂ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ (Shahdol district of Madhya Pradesh) ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
indiainyourfeed ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಹೆರಿಗೆ ನೋವು ಅನುಭವಿಸುತ್ತಿದ್ದ ಮಹಿಳೆಯನ್ನು ಕರೆದೊಯ್ಯುತ್ತಿದ್ದಾರೆ. ಈ ವೇಳೆಯಲ್ಲಿ ವೈದ್ಯರ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸುವುದನ್ನು ನೋಡಬಹುದು. ಈ ಇಬ್ಬರೂ ಯುವತಿಯರು ವೈದ್ಯೆಯ ತಲೆಕೂದಲನ್ನು ಎಳೆದಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಪುರುಷ ವೈದ್ಯರೊಬ್ಬರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸಿದ್ದು, ಆದರೆ, ಈ ವಿದ್ಯಾರ್ಥಿನಿಯರು ವೈದ್ಯರಿಗೆ ಬೆದರಿಕೆ ಹಾಕಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.
ಸೆಪ್ಟೆಂಬರ್ 11 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಈ ವೇಳೆ ಡಾ. ಯೋಗಿತಾ ತ್ಯಾಗಿ ಮತ್ತು ಡಾ. ಶಾನು ಅಗರ್ವಾಲ್ ಅವರು ಹೆರಿಗೆ ಕೊಠಡಿಗೆ ನುಗ್ಗಿ ಡಾ. ಶಿವಾನಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನೈಟ್ ಶಿಫ್ಟ್ ಬಗ್ಗೆ ಇಂಟರ್ನ್‌ಗಳ ನಡುವೆ ಉದ್ವಿಗ್ನತೆ ಉಂಟಾಗಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಆ ಬಳಿಕ ಹಲ್ಲೆಗೊಳಗಾದ ಡಾ. ಶಿವಾನಿಯವರು ಕಾಲೇಜು ಆಡಳಿತ ಮಂಡಳಿಗೆ ಲಿಖಿತ ದೂರು ನೀಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Video: ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಲು ವಿಚಿತ್ರ ಡ್ಯಾನ್ಸ್ ಮಾಡಿದ ಪತಿ
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವಾರು ಜನರು ವೀಕ್ಷಿಸಿದ್ದು ಮಹಿಳೆಯೂ ಹೆರಿಗೆ ನೋವಿನ ನಡುವೆ ಒದ್ದಾಡುತ್ತಿದ್ರೆ ಈ ಯುವತಿಯರು ಈ ರೀತಿ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಯುವತಿಯರು ವೈದ್ಯರಾಗುವುದಕ್ಕೂ ನಾಲಾಯಕ್ಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದೇನು ಹೆರಿಗೆ ಕೊಠಡಿಯೋ, ಇಲ್ಲ ಮಾರ್ಕೆಟೋ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ