
ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಆಗಮನದಿಂದ ಪ್ರಯಾಗ್ ರಾಜ್ ವ್ಯಾಪಾರ ಕೇಂದ್ರವಾಗಿ ಬದಲಾಗಿದ್ದು, ಹಲವು ಜನ ಟೀ, ತಿಂಡಿ ತಿನಿಸು, ಹಾರಗಳು ಹೀಗೆ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಯುವಕನೊಬ್ಬ ಕುಂಭಮೇಳದಲ್ಲಿ ಒಂದು ರೂಪಾಯಿ ಹೂಡಿಕೆಯಿಲ್ಲದೆ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಾಟ 40 ಸಾವಿರ ರೂ. ಗಳಿಸಿದಂತಹ ಸುದ್ದಿ ವೈರಲ್ ಆಗಿತ್ತು. ಇದೀಗ ಇಲ್ಲೊಬ್ಬ ಯುವಕ ಕುಂಭಮೇಳದಲ್ಲಿ ಚಹಾ ಮತ್ತು ನೀರಿನ ಬಾಟಲಿಗಳನ್ನು ಮಾರಾಟ ಮಾಡುವ ಮೂಲಕ ಕೇವಲ ಒಂದೇ ದಿನದಲ್ಲಿ 5 ಸಾವಿರ ರೂ. ಲಾಭ ಗಳಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯುವಕನ ಗಳಿಕೆಯನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಕಂಟೆಂಟ್ ಕ್ರಿಯೆಟರ್ ಶುಭಮ್ ಪ್ರಜಾಪತ್ ಮಹಾ ಕುಂಭಮೇಳದಲ್ಲಿ ಚಹಾ ಮತ್ತು ನೀರಿನ ಬಾಟಲಿಗಳನ್ನು ಮಾರಾಟ ಮಾಡುವ ಮೂಲಕ ಕೇವಲ ಒಂದು ದಿನದಲ್ಲಿ 5 ಸಾವಿರ ರೂ. ಲಾಭ ಗಳಿಸಿದೆ ಎಂದು ಹೇಳಿಕೊಂಡಿದ್ದಾನೆ. ಹೌದು ಆತ ಸುಮಾರು 7 ಸಾವಿರ ಮೌಲ್ಯದ ಟೀ ಹಾಗೂ ನೀರಿನ ಬಾಟಲಿಗಳನ್ನು ಮಾರಾಟ ಮಾಡಿ 5 ಸಾವಿರ ರೂ. ಲಾಭ ಗಳಿಸಿದ್ದಾನೆ.
ಈ ಕುರಿತ ವಿಡಿಯೋವನ್ನು madcap_alive ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ಕುಂಭಮೇಳದಲ್ಲಿ ಚಹಾ ಮಾರಾಟ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಕುಂಭಮೇಳದಲ್ಲಿ ಚಹಾ ಮಾರುತ್ತಿರುವ ದೃಶ್ಯವನ್ನು ಕಾಣಬಹುದು. ಆ ಯುವಕ 10 ರೂಪಾಯಿಗೆ ಒಂದು ಕಪ್ ಚಹಾ ಮಾರಾಟ ಮಾಡುವ ಮೂಲಕ ದಿನದಲ್ಲಿ 5 ಸಾವಿರ ರೂ. ಲಾಭ ಗಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಇದು ನನ್ನ ಮಗುವಿನ ಫಸ್ಟ್ ಫ್ಲೈಟ್; ಹೃದಯಸ್ಪರ್ಶಿ ಸಂದೇಶದೊಂದಿಗೆ ಸಹಪ್ರಯಾಣಿಕರಿಗೆ ಕ್ಯೂಟ್ ಗಿಫ್ಟ್ ಹಂಚಿದ ತಾಯಿ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 13.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗಾದ್ರೆ ಒಂದು ತಿಂಗಳ ಆದಾಯ 1.5 ಲಕ್ಷವೇʼ ಎನ್ನುತ್ತಾ ಆಶ್ಚರ್ಯಚಕಿತರಾಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ವ್ಯಾಪಾರ ಅಂದ್ರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಕೂಡಾ ನಿಮ್ ಜೊತೆ ಚಹಾ ಮಾರಲು ಬರಬಹುದೇʼ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ