ನಿಕೋಟಿನ್ ಪರಿಮಳವುಳ್ಳ ಇನ್ಹೇಲರ್ ಡಿವೈಸ್ (e cigarette) ಅನ್ನು ಮಗುವಿನ ಬಾಯಿಗಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕೃತ್ಯ ನಡೆದಿದ್ದು ಮಲೇಷಿಯಾದಲ್ಲಿ. ಇದಕ್ಕೆ ಕಾರಣನಾದ ವ್ಯಕ್ತಿ ಈಗ ಪೊಲೀಸರ ಅತಿಥಿ. ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಈತನ ಸ್ನೇಹಿತನೇ. ಮಗುವಿನ ತಾಯಿ ನೀಡಿದ ದೂರಿನ ಅನ್ವಯ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿವೇಚನಾರಹಿತ ಕ್ರಮಕ್ಕಾಗಿ ಈತನಿಗೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ವ್ಯೂವ್ಸ್ ಪಡೆಯಲು ಜನರು ಇಂಥ ವಿವೇಚನಾರಹಿತ ಮತ್ತು ವಿಚಿತ್ರ ಕೃತ್ಯಗಳಿಗೆ ಈಡಾಗುವುದು ಮತ್ತೊಬ್ಬರನ್ನು ಈಡು ಮಾಡುವುದು ನಡೆಯುತ್ತಲೇ ಇದೆ. ತಾನು ಪ್ರಸಿದ್ಧನಾಗಬೇಕೆಂಬ ಆಸೆಯಿಂದ ಇಂತ ಮೂರ್ಖತನಕ್ಕೆ ಕೈಹಾಕಿದ ಈ ವ್ಯಕ್ತಿ ಈಗ ಇಂಥ ದೊಡ್ಡ ಶಿಕ್ಷೆಗೆ ಒಳಗಾಗುತ್ತಿದ್ದಾನೆ ಎಂದರೆ ಯೋಚಿಸಿ.
ಈ ಯುವಕನಿಗೆ 23 ವರ್ಷ. ಇ ಸಿಗರೇಟ್ ಅನ್ನು ಬಾಯಿಗಿಟ್ಟ ಮಗು ಆತನ ಸ್ನೇಹಿತನ ಸಹೋದರಿಯದು. ಆರೋಪಿಯು ತನ್ನ ಸ್ನೇಹಿತ ಮತ್ತು ಮಗುವಿನ ತಾಯಿಯೊಂದಿಗೆ ರೆಸ್ಟೋರೆಂಟ್ಗೆ ಭೇಟಿ ಕೊಟ್ಟಾಗ ಈ ಘಟನೆ ನಡೆದಿದೆ. ತಮಾಷೆ ಮಾಡಲು ಹೋಗಿದ್ದು ಅಪಾರಾಧದ ಸ್ವರೂಪವಾಗಿ ಮಾರ್ಪಟ್ಟಿದೆ ಎಂದು ಪೊಲೀಸ್ ಕಮಾಂಡರ್ ರುಪಿಯಾ ಅಬ್ಜ್ ತಿಳಿಸಿದ್ದಾರೆ.
ಜೈಲು ಶಿಕ್ಷೆಯ ಹೊರತಾಗಿಯೂ ಈ ವ್ಯಕ್ತಿಗೆ ರೂ. 90,000 ದಂಡ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ವಿಡಿಯೋ, ಫೋಟೋಗಳ ಬಗ್ಗೆ ಸಾರ್ವಜನಿಕರಿಗೆ ಪೊಲೀಸ್ ಎಚ್ಚರಿಕೆ ನೀಡಿದೆ.
ಇನ್ನಷ್ಟು ಇಂಥ ಸುದ್ದಿಯನ್ನು ಓದಲು ಕ್ಲಿಕ್ ಮಾಡಿ
Published On - 10:58 am, Thu, 11 August 22