Viral : ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಯಾರನ್ನೂ ಹೇಗೂ ವಂಚಿಸಿ ತಮ್ಮ ಕಾಮನೆಗಳನ್ನು ಪೂರೈಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಂತಿದೆ ಈ ಪ್ರಕರಣ. ಆದರೆ ಒಂದಿಲ್ಲಾ ಒಂದು ದಿನ ವಂಚಕತನ ಹೊರಬರಲೇಬೇಕು. ಕಾನೂನಿನ ಮುಂದೆ ಶರಣಾಗಲೇಬೇಕು. ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ಫೇಸ್ಬುಕ್ ಖಾತೆಯೊಂದರ ಮೂಲಕ ಅನೇಕ ಮಹಿಳೆಯರಿಗೆ ವಂಚಿಸಿದ ಪುರುಷ ಮಹಾಶಯ ಈಗ ಸಿಂಗಪೂರಿನ ಜೈಲಿನ ಕಂಬಿಗಳನ್ನು ಎಣಿಸುತ್ತಿದ್ದಾನೆ. ಈತ 4 ವರ್ಷದೊಳಗೆ 38 ಮಹಿಳೆಯರಿಂದ ಸಂಗ್ರಹಿಸಿದ ಖಾಸಗಿ ಅಂಗಗಳ ವಿಡಿಯೋ ಫೋಟೋಗಳ ಸಂಖ್ಯೆ 1,000!
ಸಿಎನ್‌ಎನ್ ವರದಿಯ ಪ್ರಕಾರ, ಸಿಂಗಪೂರಿನ ರಾಜ್ಯ ನ್ಯಾಯಾಲಯವು ಬುಧವಾರದಂದು ಮಲೇಷಿಯಾ ಮೂಲದ ಓಯಿ ಚುಯೆನ್ ವೀ (37) ಎಂಬ ಈ ಆರೋಪಿಗೆ ಜೈಲುಶಿಕ್ಷೆ ವಿಧಿಸಿದೆ. ಮಹಿಳೆಯರನ್ನು ವಂಚಿಸಲು ಈ ಆರೋಪಿಯು ಫೇಸ್ಬುಕ್ ಅನ್ನು ಅವಲಂಬಿಸಿದ್ದ. ಸ್ತ್ರೀರೋಗ ತಜ್ಞೆಯ ಹೆಸರಲ್ಲಿ ನಕಲಿ ಖಾತೆ ತೆರೆದು ಅನೇಕ ಮಹಿಳೆಯರಿಗೆ ವಂಚಿಸುತ್ತಿದ್ದ ಎಂದು ನ್ಯಾಯಾಲಯದ ದಾಖಲೆಗಳಿಂದ ತಿಳಿದುಬಂದಿದೆ. ಮಹಿಳೆಯರ ಲೈಂಗಿಕ ಜೀವನ, ಖಾಸಗೀ ಅಂಗಗಳ ವಿವರಗಳನ್ನು ಪಡೆಯಲು ಸಮೀಕ್ಷಾ ಅರ್ಜಿಯನ್ನು ಭರ್ತಿ ಮಾಡಲು ಕೇಳಿಕೊಳ್ಳುತ್ತಿದ್ದ. ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎಂಬ ಭ್ರಮೆಯಲ್ಲಿ ಅನೇಕ ಮಹಿಳೆಯರು ಈತ ಹೇಳಿದಂತೆ ಮಾಡುತ್ತಿದ್ದರು.
ಈತ ತನ್ನ ಕೃತ್ಯ ಸಾಧಿಸಲು ನಕಲಿ ಹೆಸರು ಮತ್ತು ಪ್ರೊಫೈಲ್ ಅನ್ನು ಹೊಂದಿದ್ದ. ಡಾ. ಲೀ ಎಂಬ ಹೆಸರಿನಲ್ಲಿ ಮಲೇಷಿಯಾ ಮಹಿಳೆಯ ಮುಖಚರ್ಯೆ ಹೋಲುವ ಫೋಟೋ ಅವನ ಫೇಸ್ಬುಕ್ ಪ್ರೊಫೈಲ್ ಫೋಟೋಗೆ ಅಳವಡಿಸಿದ್ದ. ಜನರನ್ನು ನಂಬಿಸಲು ಅದೇ ಹೆಸರಿನ ಪ್ರೊಫೈಲುಗಳನ್ನು ಇನ್ಸ್ಟಾಗ್ರಾಂ, ಲಿಂಕ್ಡಿನ್ನಲ್ಲಿಯೂ ತೆರೆದಿದ್ದ. ಮಹಿಳೆಯರ ಮನಃಸ್ಥಿತಿ ಗಮನಿಸಿ, ಚಾಟ್ ಮೂಲಕ ಆಪ್ತಸಮಾಲೋಚನೆ ನಡೆಸುತ್ತಿದ್ದ. ನಂತರ ಖಾಸಗಿ ಅಂಗಗಳ ವಿಡಿಯೋ ಕಳಿಸಿದಲ್ಲಿ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದ. ಆದರೆ ಈ ವಂಚಕತನಕ್ಕೂ ಒಂದು ಆಯಸ್ಸು ಎನ್ನುವುದೊಂದಿರುತ್ತದೆ. ಅದು ಮುಗಿಯುತ್ತಾ ಬಂದಿತ್ತು.
ಕಳೆದ ಜುಲೈನಲ್ಲಿ ಈ ವಂಚಕನ ಬಗ್ಗೆ ಮಹಿಳೆಯೊಬ್ಬರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು. ಆಗ ಪೊಲೀಸರು ತನಿಖೆ ನಡೆಸಲಾಗಿ ಈತನ ಕೃತ್ಯಗಳು ಒಂದೊಂದಾಗಿ ಬಯಲಾದವು. ನಂತರ ಈತನ ಮನೆಯ ಮೇಲೆ ದಾಳಿ ನಡೆಸಿ ಅವನ ಲ್ಯಾಪ್ಟಾಪ್, ಮೊಬೈಲ್ ಕ್ಯಾಮೆರಾಗಳನ್ನು ವಶಪಡಿಸಿಕೊಂಡರು. ಮಾಡಿದ್ದುಣ್ಣೋ ಮಹಾರಾಯ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ನ್ಯಾಯಾಲಯದೆದುರು ತನ್ನ ಅಪರಾಧವನ್ನು ಒಪ್ಪಿಕೊಂಡನು.
ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್. ಅರವಿಂದ್ರೆನ್, ‘ಈತ ತನ್ನ ಲೈಂಗಿಕ ಆಸೆಯನ್ನು ಪೂರೈಸಿಕೊಳ್ಳಲು ರೂಪಿಸಿದ ಯೋಜನೆ ಇದಾಗಿತ್ತು. ಸ್ತ್ರೀರೋಗ ವೈದ್ಯೆ ಎಂದು ನಂಬಿಸಿ, ಅನೇಕ ಮಹಿಳೆಯರಿಂದ ವಿಡಿಯೋ ಫೋಟೋ ಕಳಿಸುವಂತೆ ದುಂಬಾಲು ಬೀಳುತ್ತಿದ್ದ. ಈತ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಹಾಗಾಗಿ ಮೂರುವರ್ಷಗಳದ ಮೇಲೆ ಎಂಟುತಿಂಗಳ ತನಕ ಜೈಲುಶಿಕ್ಷೆ ವಿಧಿಸಲಾಗಿದೆ’ ಎಂದಿದ್ದಾರೆ.
ಯಾವುದಕ್ಕೂ ಜಾಗ್ರತೆ ಆನ್ಲೈನ್ ವಂಚಕರಿಂದ!
ಟ್ರೆಂಡಿಂಗ್ ನ್ಯೂಸ್ ಓದಲು ಕ್ಲಿಕ್ ಮಾಡಿ
Published On - 12:37 pm, Fri, 28 October 22