Trending : ಒಂದೂವರೆ ವರ್ಷದ ಹಿಂದೆ ಕ್ರೌಡ್ ಫಂಡಿಂಗ್ ಮೂಲಕ ತನ್ನ ತಾಯಿಯ ಚಿಕಿತ್ಸೆಗೆ ಹಣ ಸಂಗ್ರಹಿಸುತ್ತಿದ್ದ ಅಪರಿಚಿತರೊಬ್ಬರಿಗೆ ಕಮಲ್ ಸಿಂಗ್ ಎನ್ನುವ ಲಿಂಕ್ಡಿನ್ ಖಾತೆದಾರರು ರೂ. 201 ಕಳಿಸಿದ್ದರು ಮತ್ತು ಕಳಿಸಿ ಮರೆತೂಬಿಟ್ಟಿದ್ದರು. ಆದರೆ ಇದೀಗ, ಆ ಅಪರಿಚಿತ ವ್ಯಕ್ತಿಯಿಂದ ರೂ. 201 ಮರಳಿ ಅಕೌಂಟಿಗೆ ಹಣ ಸಂದಾಯವಾದಾಗಲೇ ಈ ಹಳೆಯ ಘಟನೆ ಕಮಲ್ ಅವರಿಗೆ ನೆನಪಾಗಿದೆ. ಇ-ಯುಗದಲ್ಲಿ ಇಂದು ಏನೆಲ್ಲಾ ಮೋಸ, ವಂಚನೆ, ಕುಕೃತ್ಯಗಳು ನಡೆಯುತ್ತಿವೆ. ಆದರೂ ಅಲ್ಲಲ್ಲಿ ನಡೆಯುವ ಇಂಥ ಘಟನೆಗಳು ಮಾನವೀಯತೆ ಜೀವಂತವಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತವೆ.
ಇ-ಮೇಲ್, ಮೆಸೇಜ್, ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿಕೆಗಳು ಬಂದರೂ ಪರೋಪಕಾರ ಗುಣವುಳ್ಳವರು ಕೂಡ ಎರಡೆರಡು ಸಲ ಆಲೋಚಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದರೆ ಕಮಲ್ ಸಿಂಗ್ ಒಂದೂವರೆ ವರ್ಷದ ಹಿಂದೆ ಹೀಗೆಲ್ಲ ಯೋಚಿಸದೆ ಒಂದೇ ಬಾರಿಗೆ ಅಪರಿಚಿತರಿಗೆ ಸಹಾಯ ಮಾಡಿದರು. ಸಹಾಯ ಮಾಡಿದ್ದನ್ನು ಮರೆತೂಬಿಟ್ಟರು. ಆದರೆ ಕೆಲ ದಿನಗಳ ಹಿಂದೆ ರೂ. 201 ಹಣ ಸಂದಾಯವಾದ ಬಗ್ಗೆ ತಮ್ಮ ಮೊಬೈಲಿಗೆ ಮೆಸೇಜ್ ಬಂದಾಗಲೇ ಸಹಾಯ ಮಾಡಿದ್ದು ನೆನಪಾಯಿತು. ಈ ವಿಷಯವನ್ನು ಕಮಲ್ ಲಿಂಕ್ಡಿನ್ನಲ್ಲಿ ಹಂಚಿಕೊಂಡರು.
‘ಎಲ್ಲರೂ ವ್ಯಾವಹಾರಿಕ ಜಗತ್ತಿನಲ್ಲಿ ಮುಳುಗಿರುವಾಗ ಈ ವ್ಯಕ್ತಿ ಪ್ರಾಮಾಣಿಕತೆಯಿಂದ ಹಣ ಮರುಪಾವತಿಸಿದ್ದಾರೆ. ಇವರ ನಡೆ ನನ್ನನ್ನು ಅಚ್ಚರಿಗೊಳಿಸಿದೆ’ ಎಂದಿದ್ದಾರೆ ಕಮಲ್.
ಇಂಥ ಆರೋಗ್ಯಕರ ಮನಸ್ಥಿತಿ ಇದ್ದಲ್ಲಿ ಪರಸ್ಪರರು ಹೆಗಲಿಗೆ ಹೆಗಲಾಗಿ ಜೀವನವನ್ನು ಖುಷಿಯಿಂದ ನೆಮ್ಮದಿಯಿಂದ ಕಳೆಯಬಹುದು. ಸಂಬಂಧಗಳು ಎಂದರೆ ರಕ್ತಸಂಬಂಧಗಳಷ್ಟೇ ಅಲ್ಲ. ಮಿತ್ರರು ಎಂದರೆ ಶಾಲೆ, ಕಾಲೇಜು, ಉದ್ಯೋಗದ ವಾತಾವರಣದಲ್ಲಿ ಇರುವವರಷ್ಟೇ ಅಲ್ಲ. ಜಗತ್ತಿನಲ್ಲಿರುವ ಅಪರಿಚಿತರೂ ಕೂಡ ಒಂದಿಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಸಂಬಂಧಿಸಿದವರೇ. ತಂತ್ರಜ್ಞಾನ ಈ ಸಂಬಂಧದ ಅರ್ಥವನ್ನು ವಿಸ್ತರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕಲ್ಲವೆ? ಮಾನವೀಯತೆಯೇ ಇದೆಲ್ಲದರ ತಳಹದಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:58 pm, Thu, 13 October 22