Viral Video : ಅತೀ ಚಿಕ್ಕ ವಯಸ್ಸಿನ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ಗಳಲ್ಲಿ ಕಾಶ್ಮೀರದ ಅಕ್ಸಾ ಮಸರತ್ ಕೂಡ ಒಬ್ಬಾಕೆ. ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಈಕೆ ಕೇವಲ ಕಾಶ್ಮೀರದ ರಮಣೀಯ ಪ್ರಕೃತಿಯ ಬಗ್ಗೆ ವರ್ಣಿಸದೆ, ಅಲ್ಲಿನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾಳೆ. ಸೋಪೋರ್ನ ಶಾ ರಸೂಲ್ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಯಾಗಿರುವ ಈಕೆ ತನ್ನ ಪ್ರಬುದ್ಧ ಆಲೋಚನೆ, ಸಾಮಾಜಿಕ ಕಳಕಳಿ, ನಿರೂಪಣಾ ಶೈಲಿ ಮತ್ತು ಗಂಭೀರ ಪ್ರಸ್ತುತಿಯ ಮೂಲಕ ಲಕ್ಷಾಂತರ ಜನರ ಗಮನ ಸೆಳೆದಿದ್ದಾಳೆ. ಯೂಟ್ಯೂಬ್ನಲ್ಲಿ ಈಕೆ ‘What Aksa Says’ ಎಂಬ ಚಾನೆಲ್ ಹೊಂದಿದ್ದು ನಿಯಮಿತವಾಗಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾಳೆ. 2,800 ಕ್ಕೂ ಹೆಚ್ಚು, Facebook ನಲ್ಲಿ 58,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ.
ಎಎನ್ಐ ಸುದ್ದಿ ಸಂಸ್ಥೆಯ ಪ್ರಕಾರ, ಅಕ್ಸಾ ಆರು ವರ್ಷದವಳಿದ್ದಾಗಲೇ ಸಾಮಾಜಿಕ ಜಾಲತಾಣವನ್ನು ಪ್ರವೇಶಿಸಿದಳು. ಆಗ ಕಾಶ್ಮೀರದದ 40 ದಿನಗಳ ಕಡುಚಳಿಗಾಲದ ಬಗ್ಗೆ ‘ಚಿಲ್ಲಾಯ್ ಕಲ್ಲನ್’ ಎಂಬ ಶೀರ್ಷಿಕೆಯಲ್ಲಿ ತನ್ನ ಮೊದಲ ವಿಡಿಯೋ ಅಪ್ಲೋಡ್ ಮಾಡಿದ್ದಳು. ‘ನನ್ನ ವಯಸ್ಸಿನ ಮಕ್ಕಳು ಇಂಥ ವಿಡಿಯೋಗಳನ್ನು ನೋಡಿ, ಈ ಮೂಲಕ ತಮ್ಮ ಬದುಕಿನ ಘಟನೆಗಳಿಗೆ ಕನೆಕ್ಟ್ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ. ಹಾಗಾಗಿ ‘ಚಿಲ್ಲಾಯ್ ಕಲ್ಲನ್’ ವಿಡಿಯೋ ಮಾಡಿ ಅಪ್ಲೋಡ್ ಮಾಡಿದೆ. ನನ್ನ ಈ ಮೊದಲ ವಿಡಿಯೋಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿತ್ತು. ಇದು ನನಗೆ ಪ್ರೋತ್ಸಾಹ ನೀಡಿತು’ ಎಂದಿದ್ದಾಳೆ ಅಕ್ಸಾ.
ಈತನಕ ಸುಮಾರು 50 ವಿಡಿಯೋಗಳನ್ನು ಈಕೆ ಅಪ್ಲೋಡ್ ಮಾಡಿದ್ದಾಳೆ. ಕಾಶ್ಮೀರದಲ್ಲಿ ಹೇಗೆ ಬೆಳೆ ಬೆಳೆಯಲಾಗುತ್ತದೆ, ಕೊಯ್ಲು ಮಾಡಲಾಗುತ್ತದೆ ಎನ್ನುವುದನ್ನು ತಿಳಿಸುವ ವಿಡಿಯೋ ಕೂಡ ಈಕೆಯ ಚಾನೆಲ್ನಲ್ಲಿ ನೋಡಬಹುದಾಗಿದೆ. ಹಾಗೆಯೇ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ಕ್ರೀಡೆಗಳು ಹೇಗೆ ಸಹಕಾರಿ ಎನ್ನುವ ವಿಡಿಯೋ ಕೂಡ ಇದೆ. ‘ಸೋಪೋರ್ನ ಹಣ್ಣಿನ ಮಂಡಿ, ಭತ್ತದ ಕೊಯ್ಲು ಮುಂತಾದ ವಿಡಿಯೋಗಳನ್ನು ಲಕ್ಷಾಂತರ ಜನರು ನೋಡಿದ್ದಾರೆ. ಇನ್ನು ನನ್ನ ಮಾಮೂ (ಚಿಕ್ಕಪ್ಪ) ಮದುವೆಯ ಬಗ್ಗೆ ಮಾಡಿದ ವಿಡಿಯೋ ಅನ್ನು ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಇದಕ್ಕಿರುವ ಪ್ರಶಂಸೆಗಳ ಸುರಿಮಳೆ ಹೇಳತೀರದು’ ಎಂದಿದ್ದಾಳೆ ಅಕ್ಸಾ.
ಹಲವಾರು ಜನರು ಇವಳ ಈ ಕೆಲಸಕ್ಕಾಗಿ ಪ್ರೀತಿಸುವವರೂ ಇದ್ದಾರೆ ಹಾಗೆಯೇ ಸಮಸ್ಯೆ ಸೃಷ್ಟಿ ಮಾಡುವವರೂ ಇದ್ಧಾರೆ. ಸಮಸ್ಯೆಯಾದಾಗೆಲ್ಲ ಈಕೆಯ ಕುಟುಂಬ ಈಕೆಗೆ ಸಹಕರಿಸಿದೆ. ‘ಈ ಕೆಲಸಕ್ಕೆ ನನ್ನ ಮಾಮೂನೇ ಸ್ಫೂರ್ತಿ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಫೋಟೋ ಜರ್ನಲಿಸ್ಟ್ ಆಗಿದ್ದಾರೆ’ ಎಂದಿದ್ದಾಳೆ ಅಕ್ಸಾ.
ಸದ್ಯ ಈಕೆ 5ನೇ ತರಗತಿಯಲ್ಲಿ ಓದುತ್ತಿರುವ ಈಕೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾಳೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:45 pm, Tue, 4 October 22