ಹೆಂಡತಿ ಕಾಟದಿಂದ ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ; ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಯ್ತು ಮೆನ್​ಟೂ ಹ್ಯಾಶ್​ಟ್ಯಾಗ್

| Updated By: Digi Tech Desk

Updated on: Dec 12, 2024 | 11:01 AM

ಅತುಲ್ ಸುಭಾಷ್ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರ ಪತ್ನಿ ಉತ್ತರ ಪ್ರದೇಶದಲ್ಲಿ ಅವರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅವರು ವೀಡಿಯೊದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ನನ್ನ ಮಗುವಿನ ಪಾಲನೆಯನ್ನು ನನ್ನ ಹೆತ್ತವರಿಗೆ ನೀಡಬೇಕೆಂದು ಅತುಲ್ ಸುಭಾಷ್ ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಿಟೂ ರೀತಿಯಲ್ಲೇ ಮೆನ್​ಟೂ ಎಂಬ ಹ್ಯಾಶ್​ಟ್ಯಾಗ್​ ಅಭಿಯಾನ ಶುರುವಾಗಿದೆ.

ಹೆಂಡತಿ ಕಾಟದಿಂದ ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ; ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಯ್ತು ಮೆನ್​ಟೂ ಹ್ಯಾಶ್​ಟ್ಯಾಗ್
ಅತುಲ್ ಸುಭಾಷ್
Follow us on

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆಯಷ್ಟೇ (ಡಿಸೆಂಬರ್ 9) ಸಾಫ್ಟ್​ವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ರೀತಿಯ ಆತ್ಮಹತ್ಯೆಯ ಪ್ರಕರಣಗಳು ದಿನವೂ ನಡೆಯುತ್ತಲೇ ಇರುತ್ತವೆಯಾದರೂ ಈ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಅದಕ್ಕೆ ಕಾರಣ ಅವರು ಬರೆದಿರುವ 24 ಪುಟಗಳ ಸೂಸೈಡ್ ನೋಟ್ ಮತ್ತು ಸಾಯುವ ಮೊದಲು ಮಾಡಿರುವ 1 ಗಂಟೆಯ ವಿಡಿಯೋ ರೆಕಾರ್ಡ್​. ಹೆಂಡತಿ ಮತ್ತು ಪತ್ನಿಯ ಮನೆಯವರ ಕಾಟ ತಡೆಯಲಾರದೆ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೆನ್​ಟೂ (#MenToo) ಹ್ಯಾಶ್​ಟ್ಯಾಗ್ ಟ್ರೆಂಡಿಂಗ್​ನಲ್ಲಿದೆ.

ನ್ಯಾಯ ಸಿಗುವುದು ಬಾಕಿಯಿದೆ ಎಂದು ಲೆಟರ್ ಬರೆದಿಟ್ಟು ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಅವರು ಲ್ಯಾಪ್​ಟ್ಯಾಪ್​ನಲ್ಲಿ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅದನ್ನು ನ್ಯಾಯಾಧೀಶರಿಗೆ, ಪೊಲೀಸರಿಗೆ, ತಮ್ಮ ಕಂಪನಿಯ ಬಾಸ್​ಗೆ ಕಳುಹಿಸಿದ್ದಾರೆ. ನಂತರ ಮೊದಲೇ ಪ್ಲಾನ್ ಮಾಡಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತುರದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ, ಅವರು ಬಹಳ ಪ್ಲಾನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಖಚಿತವಾಗಿದೆ.

ಏಕೆಂದರೆ, ಅವರು ಸಾಯುವ ಮುನ್ನ ಕಂಪ್ಯೂಟರ್, ಐಡಿಗಳನ್ನೆಲ್ಲ ತಮ್ಮ ಕಂಪನಿಗೆ ಹಿಂತಿರುಗಿಸಿದ್ದರು. ಮಾಡಬೇಕಾದ ಪೇಮೆಂಟ್​ಗಳನ್ನೆಲ್ಲ ಮಾಡಿ ಮುಗಿಸಿದ್ದರು. ಪೊಲೀಸರಿಗೆ ಸಾಕ್ಷಿ ಹುಡುಕಲು ಕಷ್ಟವಾಗಬಾರದೆಂದು ಮೊಬೈಲ್​ನ ಲಾಕ್​ ಸಿಸ್ಟಂನೆಲ್ಲ ತೆಗೆದು ಇಟ್ಟಿದ್ದರು. ಕಾರು, ಬೈಕ್​ನ ಕೀಗಳನ್ನು ಫ್ರಿಡ್ಜ್​ ಮೇಲಿಟ್ಟಿದ್ದರು. ಎಲ್ಲವನ್ನೂ ಪ್ರೀ ಪ್ಲಾನ್ ಮಾಡಿ ಈ ನಿರ್ಧಾರಕ್ಕೆ ಬಂದಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.

ಇದನ್ನೂ ಓದಿ: Justice Is Due ಎಂದು ಕತ್ತಿಗೆಗೆ ಬೋರ್ಡ್ ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ, ಸಾಯಲು ಟೈಮ್​ ಟೇಬಲ್ ಹಾಕಿದ್ದ

ಆತ್ಮಹತ್ಯೆಗೂ ಮೊದಲು ಬೆಂಗಳೂರಿನ ಇಂಜಿನಿಯರ್ ಸೂಸೈಡ್ ನೋಟ್ ಅನ್ನು ಹಲವಾರು ಜನರಿಗೆ ಇಮೇಲ್ ಮೂಲಕ ಕಳುಹಿಸಿದ್ದಾರೆ. ಅದನ್ನು ಅವರು ಭಾಗವಾಗಿರುವ ಎನ್‌ಜಿಒಗೆ ಸಂಬಂಧಿಸಿದ ವಾಟ್ಸಾಪ್ ಗುಂಪಿನಲ್ಲಿ ಕೂಡ ಹಂಚಿಕೊಂಡಿದ್ದಾರೆ.


ಉತ್ತರ ಪ್ರದೇಶದ 34 ವರ್ಷದ ವ್ಯಕ್ತಿಯಾಗಿರುವ ಅತುಲ್ ತಮ್ಮ ಸಾವಿಗೆ ತಮ್ಮ ಹೆಂಡತಿ ಆಕ್ಸೆಂಚರ್​​ನಲ್ಲಿ ಉದ್ಯೋಗಿಯಾಗಿರುವ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದ ಅತುಲ್ ಸುಭಾಷ್ ಎಂಬಾತ 24 ಪುಟಗಳ ಸೂಸೈಡ್ ನೋಟ್ ಬರೆದಿದ್ದು, ಅದರಲ್ಲಿ ಪತ್ನಿ ಮತ್ತು ಆಕೆಯ ಸಂಬಂಧಿಕರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಅತುಲ್ ಸುಭಾಷ್ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಅವರ ಪತ್ನಿ ಉತ್ತರ ಪ್ರದೇಶದಲ್ಲಿ ಅವರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅವರು ವೀಡಿಯೊದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ತಾವು ರೆಕಾರ್ಡ್​ ಮಾಡಿದ ವಿಡಿಯೋದಲ್ಲಿ ಮತ್ತು ಸೂಸೈಡ್ ನೋಟ್​ನಲ್ಲಿ ಅವರು “ಪ್ರಸ್ತುತ ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಿಟೂ ರೀತಿಯಲ್ಲೇ ಮೆನ್​ಟೂ ಎಂಬ ಹ್ಯಾಶ್​ಟ್ಯಾಗ್​ ಅಭಿಯಾನ ಶುರುವಾಗಿದೆ. ಅತುಲ್ ಸಾವಿಗೆ ಕಾರಣರಾದ ನಿಖಿತಾ ಅವರನ್ನು ಕೂಡಲೇ ಬಂಧಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಂಬಂಧಿಸಿದ ಪುರುಷರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ, ಬಂಧಿಸಲಾಗುತ್ತದೆ. ಅದೇ ರೀತಿ ಮಹಿಳೆಯನ್ನೂ ವಿಚಾರಗಣೆಗೆ ಒಳಪಡಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಕಾನೂನಿನಲ್ಲಿ ಪುರುಷರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೂಡ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಅತುಲ್ ಹೇಳಿದ್ದೇನು?:

ನನ್ನ ವಿರುದ್ಧ ನನ್ನ ಪತ್ನಿ 9 ಪ್ರಕರಣಗಳನ್ನು ದಾಖಲಿಸಿದ್ದಾಳೆ. 6 ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿ ಮತ್ತು 3 ಹೈಕೋರ್ಟ್‌ನಲ್ಲಿವೆ ಎಂದು ಅತುಲ್ ಸೂಸೈಡ್​ ನೋಟ್​ನಲ್ಲಿ ತಿಳಿಸಿದ್ದಾರೆ. 2022ರಲ್ಲಿ ಅವರು, ಅವರ ಪೋಷಕರು ಮತ್ತು ಅವರ ಸಹೋದರನ ವಿರುದ್ಧ ದಾಖಲಿಸಲಾದ ಪ್ರಕರಣಗಳಲ್ಲಿ ಒಂದರಲ್ಲಿ ಕೊಲೆ, ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಲೈಂಗಿಕತೆಯಂತಹ ಆರೋಪಗಳು ಸೇರಿವೆ ಎಂದು ಅವರು ಹೇಳಿದ್ದಾರೆ. ಆದರೆ, ನಂತರ ಅವರ ಪತ್ನಿ ಆ ಕೇಸ್ ಅನ್ನು ಹಿಂಪಡೆದಿದ್ದರು.

ಇದನ್ನೂ ಓದಿ: ವರದಕ್ಷಿಣೆಯಾಗಿ ನೀಡಿದ್ದ ಬೈಕ್​ನ ಕಂತನ್ನು ಅತ್ತೆ-ಮಾವ ಕಟ್ಟದಿದ್ದಕ್ಕೆ ಅಳಿಯ ಆತ್ಮಹತ್ಯೆ

ಮತ್ತೊಂದು ಪ್ರಕರಣದಲ್ಲಿ, ತನ್ನ ಹೆಂಡತಿ ತನ್ನಿಂದ ದೊಡ್ಡ ಮೊತ್ತದ ಹಣವನ್ನು ಬೇಡಿಕೆಯಿಟ್ಟಿದ್ದರಿಂದ ತನ್ನ ತಂದೆಯ ಸಾವಿಗೆ ಕಾರಣ ಎಂದು ಆರೋಪಿಸಿ ತಾನು ಹಿಂದೆ ಸಲ್ಲಿಸಿದ್ದ ಕೊಲೆ ಆರೋಪಗಳನ್ನು ಸುಳ್ಳು ಎಂದು ಅವರ ಪತ್ನಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಧುಮೇಹ ಸೇರಿದಂತೆ ದೀರ್ಘಕಾಲದ ಕಾಯಿಲೆಗಳೊಂದಿಗೆ ಸುದೀರ್ಘ ಹೋರಾಟದ ನಂತರ ತನ್ನ ತಂದೆ 2019ರಲ್ಲಿ ನಿಧನರಾದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ತನಗೆ ಮತ್ತು ಮಗನಿಗೆ ಮಾಸಿಕ 2 ಲಕ್ಷ ರೂ. ಜೀವನಾಂಶ ನೀಡುವಂತೆ ಪತ್ನಿ ಬೇಡಿಕೆ ಇಟ್ಟಿದ್ದಾಗಿ ಅತುಲ್ ಸುಭಾಷ್ ಹೇಳಿಕೊಂಡಿದ್ದಾರೆ. ಅವರ ಪತ್ನಿ ಆರಂಭದಲ್ಲಿ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ನಂತರ ಅವರು ಹಿಂತೆಗೆದುಕೊಂಡರು. ಆತನ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ಎರಡು ಅರ್ಜಿಗಳನ್ನು ಸಲ್ಲಿಸಿದ್ದಾಳೆ ಎನ್ನಲಾಗಿದೆ.

ಉತ್ತರ ಪ್ರದೇಶದ ಜೌನ್‌ಪುರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿರುವ ವ್ಯಕ್ತಿಗಳಿಂದ ಲಂಚ ಸ್ವೀಕರಿಸುತ್ತಾರೆ ಎಂದು ಟೆಕ್ಕಿ ಅತುಲ್ ಆರೋಪಿಸಿದ್ದಾರೆ. ನನ್ನ ಹೆಂಡತಿ ತನ್ನ ಮತ್ತು ಅವನ ಕುಟುಂಬದ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಿದ್ದಾಳೆಂದು ನ್ಯಾಯಾಧೀಶರಿಗೆ ತಿಳಿಸಿದಾಗ ಅವರು ಅದನ್ನು ನಿರಾಕರಿಸಿದರು ಎಂದಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳಿಂದಾಗಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಾನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದಾಗ ಅದಕ್ಕೆ ನನ್ನ ಹೆಂಡತಿ ನೀವು ಅದೇ ರೀತಿ ಏಕೆ ಸಾಯಬಾರದು? ಎಂದು ಪ್ರಶ್ನಿಸಿದ್ದಳು. ಅದಕ್ಕೆ ನ್ಯಾಯಾಧೀಶರು ನಕ್ಕರು ಎಂದು ಅತುಲ್ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಇತ್ಯರ್ಥಪಡಿಸಲು ನ್ಯಾಯಾಧೀಶರು 5 ಲಕ್ಷ ರೂಪಾಯಿ ಲಂಚವನ್ನು ಕೇಳಿದ್ದಾರೆ ಎಂದು ಅವರು ಆರೋಪಿಸಿದರು.

ಹಾಗೇ, ನನ್ನ ಮಗುವಿನ ಪಾಲನೆಯನ್ನು ನನ್ನ ಹೆತ್ತವರಿಗೆ ನೀಡಬೇಕೆಂದು ಅತುಲ್ ಸುಭಾಷ್ ವಿನಂತಿಸಿದ್ದಾರೆ. ನನ್ನ ಶವದ ಬಳಿ ನನ್ನ ಹೆಂಡತಿ ಅಥವಾ ಅವಳ ಕುಟುಂಬವನ್ನು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Tue, 10 December 24