
ಎಲ್ಲರ ಬದುಕು ಒಂದೇ ರೀತಿ ಇರಲ್ಲ, ಕೆಲವರದ್ದು ಶ್ರೀಮಂತಿಕೆಯ ಬದುಕು, ಇನ್ನು ಕೆಲವರದ್ದು ಕಷ್ಟ ಪಟ್ಟು ದುಡಿದರೆ ಮಾತ್ರ ಹೊಟ್ಟೆ ತುಂಬಲು ಸಾಧ್ಯ. ಬದುಕು ಹೇಗೆಯೇ ಇರಲಿ, ಏನೇ ಬರಲಿ ಕಷ್ಟ ಪಟ್ಟು ಬದುಕು ಕಟ್ಟಿಕೊಳ್ಳುವ ಛಲವಿದ್ರೆ ಅಸಾಧ್ಯ ಅನ್ನೋ ಮಾತೋ ಇಲ್ಲ. ಹೌದು, ಮುಂಬೈನ (Mumbai) ಬಿಎಂಸಿ ಆಸ್ಪತ್ರೆ ಬಳಿ 11 ವರ್ಷಗಳಿಂದ ವಡಾಪಾವ್ ಅಂಗಡಿ ಇಟ್ಟುಕೊಂಡು ಎಲ್ಲರಿಗೂ ಮಾದರಿಯಾಗುವಂತೆ ಬದುಕಿ ತೋರಿಸಿದ್ದಾರೆ ಈ ಮಹಿಳೆ. ಈ ಬಗ್ಗೆ ಇಶಿಕಾ ಧನ್ಮೆಹರ್, (Ishika Dhanmeher) ಲಿಂಕ್ಡ್ ಇನ್‌ನಲ್ಲಿ ತಮ್ಮ ತಾಯಿಯ ಆರಂಭದ ದಿನಗಳು ಹೇಗಿತ್ತು, ಏನೆಲ್ಲಾ ಕಷ್ಟಗಳನ್ನು ಅನುಭವಿಸಿದರು ಇಂಚಿಚಾಗಿ ವಿವರಿಸಿದ್ದಾಳೆ. ತನ್ನ ತಾಯಿಯನ್ನು ಕಂಡಾಗ ನನಗೆ ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ. ಈಕೆ ಮಾಡಿದ ಪೋಸ್ಟ್ ಬಳಕೆದಾರರ ಮನಸ್ಸನ್ನು ಗೆದ್ದುಕೊಂಡಿದೆ.
Ishika Dhanmeher ಹೆಸರಿನ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಇಶಿಕಾ ತನ್ನ ಹಾದಿಯ ಯಶಸ್ಸಿನ ಹಾದಿ ಎಷ್ಟು ಕಠಿಣವಾಗಿತ್ತು ಎಂದು ಹೇಳಿದ್ದಾಳೆ. ತನ್ನ ತಾಯಿಯ ಸಣ್ಣದಾದ ಅಂಗಡಿಯ ಫೋಟೋ ಹಂಚಿಕೊಂಡು ವ್ಯಾಪಾರದ ಹಿಂದಿನ ಹೋರಾಟದ ಹಾದಿಯ ಬಗ್ಗೆ ಹಂಚಿಕೊಂಡಿದ್ದಾಳೆ. ನನ್ನ ಅಮ್ಮ ವಡಾಪಾವ್ ಅಂಗಡಿ ಶುರು ಮಾಡಿದಾಗ ಅಷ್ಟು ಸುಲಭ ಯಾವುದು ಇರಲಿಲ್ಲ. ಕೆಟ್ಟ ಮನಸ್ಸಿನ ವ್ಯಕ್ತಿಗಳು ನಾನಾ ರೀತಿಯ ತೊಂದರೆ ಕೊಟ್ಟರು. ಅನೇಕ ಸಲ ಅಂಗಡಿಯನ್ನು ಕೆಡವಿಡಿಯೂ ಹಾಕಿದ್ರು. ಆಸ್ಪತ್ರೆ ಸಿಬ್ಬಂದಿಗಳಿಂದ ವಡಾ ಪಾವ್ ಮಾರಾಟ ತಡೆಯಲು ನಾನಾ ಪ್ರಯತ್ನಗಳನ್ನು ನಡೆಸಿದ್ದರು. ಎಷ್ಟೋ ಸಲ ಅಂಗಡಿಯಲ್ಲಿದ್ದ ವಸ್ತುಗಳು ಕಳವು ಆಗಿದ್ದವು. ತನ್ನ ಸುತ್ತಮುತ್ತಲಿನ ಜನರಿಂದ ಬೇಡವಾದ ಮಾತುಗಳು ಹೀಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಯ್ತು. ಇದೆಲ್ಲಾ ಮಹಿಳೆಯಿಂದ ಸಾಧ್ಯನಾ ಎನ್ನುವ ಪ್ರಶ್ನೆಗಳು ಬಂದಿದ್ದವು. ಆದರೆ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೇ ತನ್ನಿಂದ ಸಾಧ್ಯ ಎನ್ನುವ ನಂಬಿಕೆ ನನ್ನ ತಾಯಿಗೆ ಇತ್ತು ಎಂದಿದ್ದಾರೆ.
ಆತ್ಮ ವಿಶ್ವಾಸದಿಂದ ತನ್ನ ಕೈಯಾರೆ ಮಾಡಿದ ವಡಾ ಪಾವನ್ನು ಗ್ರಾಹಕರಿಗೆ ನೀಡುತ್ತಿದ್ದಳು. ಅಮ್ಮನ ವಡಾ ಪಾವ್ ರುಚಿಗೆ ಎಲ್ಲರೂ ಫಿದಾ ಆಗೇ ಹೋದರು. ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ನಿಧಾನವಾಗಿ ಎಲ್ಲರ ಪ್ರೀತಿಯನ್ನು ಸಂಪಾದಿಸಿಕೊಂಡಳು. ತನ್ನ ತಾಯಿಯ ವಿಶೇಷವಾಗಿಸುವ ವಿಷಯವೆಂದರೆ ಓದಿಲ್ಲ, ಆದರೆ ಗ್ರಾಹಕರ ಜೊತೆಗೆ ಹಿಂಜರಿಕೆಯಿಲ್ಲದೇ ಮಾತನಾಡುತ್ತಾರೆ. ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಐದು ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಾರೆ. ಮರಾಠಿ, ಹಿಂದಿ, ಗುಜರಾತಿ, ತೆಲುಗು ಮತ್ತು ಅಲ್ಪ ಸ್ವಲ್ಪ ಇಂಗ್ಲಿಷ್ ಯಾವುದೇ ಹಿಂಜರಿಕೆಯಿಲ್ಲದೇ ಮಾತನಾಡುತ್ತಾರೆ ಎಂದು ಇಲ್ಲಿ ವಿವರಿಸಿದ್ದಾಳೆ.
ಇಶಿಕಾ ಹೇಳುವಂತೆ ಅವಳು ಚುರುಕು ಸ್ವಭಾವದವಳು, ಅವಳು ನಗುವುದನ್ನು ನಿಲ್ಲಿಸುವುದಿಲ್ಲ. ಆದರೆ ಅವಳು ಮಾಡುವ ಕೆಲಸವನ್ನು ಪ್ರೀತಿಸುತ್ತಾಳೆ. ನಾನು ಸ್ಟಾಲ್ ಗೆ ಭೇಟಿ ನೀಡಿದಾಗಲೆಲ್ಲಾ ತನ್ನ ಹಳೆಯ ಸ್ನೇಹಿತರನ್ನು ಭೇಟಿಯಾದವರಂತೆ ಜನರು ಅವಳೊಂದಿಗೆ ಮಾತನಾಡಲು ಉತ್ಸುಕರಾಗಿರುವುದನ್ನು ನಾನು ನೋಡುತ್ತೇನೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ:Viral: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವ್ಯಕ್ತಿ, ಈತ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಅದ್ಭುತ ಈ ಮಹಿಳೆ, ನಿಜಕ್ಕೂ ಇವರ ಬದುಕು ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ. ಇನ್ನೊಬ್ಬರು ನಿಜವಾದ ಸೂಪರ್ ವಿಮೆನ್ ಮಾತ್ರ ಇನ್ನೊಬ್ಬರನ್ನು ಬೆಳೆಸಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ತಾಯಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಸಂಬಂಧಗಳನ್ನು ನಿರ್ಮಿಸುವುದು ಹಾಗೂ ನಿರ್ವಹಿಸುವುದು ವ್ಯವಹಾರಕ್ಕೆ ಮಾತ್ರವಲ್ಲದೇ ವೈಯುಕ್ತಿಕ ಬೆಳವಣಿಗೆಗೂ ಕಾರಣವಾಗುತ್ತದೆ. ನಿಮ್ಮ ತಾಯಿ ಎಲ್ಲರಿಗೂ ಸ್ಫೂರ್ತಿ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Thu, 14 August 25