
ಸಾಮಾನ್ಯವಾಗಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ದೊಡ್ಡವರಾದ ನಮಗೆಯೇ ಸಿಕ್ಕಾಪಟ್ಟೆ ಭಯವಾಗುತ್ತದೆ. ಇನ್ನೂ ಪುಟಾಣಿ ಮಕ್ಕಳ ವಿಷಯ ಕೇಳಬೇಕೇ, ಖಂಡಿತವಾಗಿಯೂ ಆ ಮಕ್ಕಳು ಭಯ ಮತ್ತು ಕಿರಿಕಿರಿಯಿಂದ ಜೋರಾಗಿ ಅಳುತ್ತಾರೆ. ಹೀಗೆ ವಿಮಾನ ಪ್ರಯಾಣದ ಸಂದರ್ಭದಲ್ಲಿ ಮಕ್ಕಳು ಅಳುವಂತಹದ್ದು ಸಾಮಾನ್ಯ. ಆದ್ರೆ ಮಕ್ಕಳ ಈ ಚೀರಾಟ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಹೀಗಿರುವಾಗ ಇಲ್ಲೊಬ್ರು ನವಜಾತ ಶಿಶುವಿನ ತಾಯಿ ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್ ಗಿಫ್ಟ್ ಒಂದನ್ನು ನೀಡಿದ್ದಾರೆ. ಗೂಡೀಸ್ ಬ್ಯಾಗ್ ಜೊತೆ ಹೃದಯಸ್ಪರ್ಶಿ ಸಂದೇಶವೊಂದನ್ನು ಬರೆದು ಸಹ ಪ್ರಯಾಣಿಕರಿಗೆ ಕೊಟ್ಟಿದ್ದು, ತಾಯಿ ಕೊಟ್ಟ ಈ ಕ್ಯೂಟ್ ಗಿಫ್ಟ್ ಕಂಡು ಪ್ರಯಾಣಿಕರು ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
“ಇದು ನನ್ನ ಮೊದಲ ವಿಮಾನಯಾನ. ನಾನು ಉತ್ತಮ ನಡವಳಿಕೆಯನ್ನು ತೋರುತ್ತೇನೆ ಎಂದು ಒಪ್ಪಂದ ಮಾಡಿಕೊಂಡಿದ್ದೇನೆ. ಆದರೆ ನಾನು ಯಾವುದೇ ಭರವಸೆಗಳನ್ನು ನೀಡಲು ಸಾಧ್ಯವಿಲ್ಲ. ನನ್ನ ಕಿವಿಗಳಲ್ಲಿ ನೋವು ಕಾಣಿಸಿಕೊಂಡರೆ ನಾನು ನಾನು ಅಳಬಹುದು. ಆಗ ನನ್ನೊಂದಿಗೆ ನೀವು ತಾಳ್ಮೆಯಿಂದ ಇರುತ್ತೀರಿ ಎಂದು ಭಾವಿಸುತ್ತೇನೆ. ಧನ್ಯವಾದ” ಎಂದು ಮಗುವಿನ ಪರವಾಗಿ ಭಾವನಾತ್ಮಕ ಸಂದೇಶವನ್ನು ಬರೆದು ತಾಯಿಯೊಬ್ಬರು ವಿಮಾನದಲ್ಲಿ ಸಹ ಪ್ರಯಾಣಿಕರಿಗೆ ಗೂಡೀಸ್ ಬ್ಯಾಗ್ ಹಂಚಿದ್ದಾರೆ.
ಈ ಕುರಿತ ವಿಡಿಯೋವನ್ನು ಎಲಿಯಾಟ್ ನಾರ್ರಿಸ್ (elliottnorris) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಕಣ್ಣಂಚಲಿ ನೀರು ಬಂತು, ವಿಮಾನದಲ್ಲಿ ನವಜಾತ ಶಿಶುವಿನ ತಾಯಿ ಈ ಗೂಡೀಸ್ ಬ್ಯಾಗ್‌ನ್ನು ನಮ್ಗೆ ಕೊಟ್ರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಮಗುವಿನ ಸಲುವಾಗಿ ತಾಯಿಯೊಬ್ಬರು ವಿಮಾನದಲ್ಲಿ ಸಹಪ್ರಯಾಣಿಕರಿಗೆಲ್ಲರಿಗೂ ಕೊಟ್ಟ ಗೂಡೀಸ್ ಬ್ಯಾಗ್ ಹಾಗೂ ಅದರಲ್ಲಿದ್ದ ಸಂದೇಶವನ್ನು ಕಂಡು ಭಾವುಕನಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಾವಿ ಮಾವ ಕೊಟ್ಟ ಉಡುಗೊರೆ ಬಗ್ಗೆ ವ್ಯಂಗ್ಯವಾಡಿದ ಯುಪಿಎಸ್‌ಸಿ ಆಕಾಂಕ್ಷಿ; ರದ್ದಾದ ಮದುವೆ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಂತೂ ತುಂಬಾ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಆಕೆ ಗ್ರೇಟ್ ತಾಯಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ