ಸದಾ ವಿವಾದದ ಸುಳಿಯಲ್ಲೇ ಸುತ್ತಾಡುವ ಸ್ವಯಂಘೋಷಿತ ದೇವ ಮಾನವ, ಧರ್ಮಗುರು, ಕೈಲಾಸ ದೇಶ ಸ್ಥಾಪಕ ನಿತ್ಯಾನಂದ ಸ್ವಾಮಿ ತನ್ನ ದೇಶವನ್ನು ಕೊರೊನಾದಿಂದ ರಕ್ಷಿಸಿಕೊಳ್ಳಲು ಭಾರತೀಯ ಪ್ರವಾಸಿಗರಿಗೆ ಕೈಲಾಸ ಪ್ರವೇಶ ನಿರ್ಬಂಧಿಸಿದ್ದಾನೆ. ತಾನೊಬ್ಬ ದೇವ ಮಾನವ, ಶಿವನ ಅಪರಾವತಾರ, ತನ್ನಿಂದ ಯಾವ ಚಮತ್ಕಾರ ಬೇಕಾದರೂ ನಡೆಯಬಲ್ಲದು ಎಂದು ಹೇಳಿಕೊಳ್ಳುವ ನಿತ್ಯಾನಂದ ಕೊರೊನಾ ವೈರಾಣುವಿಗೆ ಬೆದರಿದಂತೆ ಕಾಣುತ್ತಿದ್ದು ಈತನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಾಸ್ಪದ ವಸ್ತುವಾಗಿ ಹರಿದಾಡುತ್ತಿದೆ.
ಕೈಲಾಸ ದೇಶಕ್ಕೆ ಭಾರತೀಯರು ಮಾತ್ರವಲ್ಲದೇ ಬ್ರೆಜಿಲ್, ಯುರೋಪ್ ಹಾಗೂ ಮಲೇಶಿಯಾದಿಂದ ಆಗಮಿಸುವವರಿಗೂ ಪ್ರವೇಶ ನಿರ್ಬಂಧಿಸಲಾಗಿದ್ದು, ಈ ಬಗ್ಗೆ ನಿತ್ಯಾನಂದ ಸ್ವಾಮಿ ವಿಡಿಯೋ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾನೆ. ಸದ್ಯ ಸ್ವಯಂ ನಿರ್ಮಿತ ರಾಷ್ಟ್ರ ಕೈಲಾಸದಲ್ಲಿ ನೆಲೆಯೂರಿರುವ ಸ್ವಘೋಷಿತ ದೇವ ಮಾನವ ನಿತ್ಯಾನಂದ, ತನ್ನ ಸಂದೇಶಗಳನ್ನು, ಆಲೋಚನೆಗಳನ್ನು ಭಕ್ತಾದಿಗಳಿಗೆ ತಲುಪಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದು, ಅದು ನೆಟ್ಟಿಗರಿಗೆ ಭರಪೂರ ಮನರಂಜನೆಯನ್ನೂ ಒದಗಿಸುತ್ತಿದೆ.
ವಿವಾದದ ಮೂಲಕವೇ ಪ್ರಚಲಿತಕ್ಕೆ ಬಂದ ನಿತ್ಯಾನಂದ ಮೊದಲಿನಿಂದಲೂ ಅನೇಕ ಆರೋಪಗಳನ್ನು ಎದುರಿಸುತ್ತಿದ್ದು, 2019ರಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಮೇಲೆ ಭಾರತದಿಂದ ಕಣ್ಮರೆಯಾಗಿದ್ದಾನೆ. ನಂತರ ಈಕ್ವೇಡರ್ ಸಮೀಪದ ದ್ವೀಪವೊಂದನ್ನು ತನ್ನ ರಾಷ್ಟ್ರವನ್ನಾಗಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾತ ಅದಕ್ಕೆ ಕೈಲಾಸವೆಂದು ನಾಮಕರಣವನ್ನೂ ಮಾಡಿದ್ದ. ಅಷ್ಟೇ ಅಲ್ಲದೇ ಕೈಲಾಸದಲ್ಲಿ ರಿಸರ್ವ್ ಬ್ಯಾಂಕ್ ಒಂದನ್ನು ಸ್ಥಾಪಿಸಿ ಅಲ್ಲಿಗೆ ಪ್ರತ್ಯೇಕ ಕರೆನ್ಸಿ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದ.
ಸದ್ಯ ಇಡೀ ವಿಶ್ವವೇ ಕೊರೊನಾ ವೈರಾಣುವಿನ ಹೊಡೆತಕ್ಕೆ ಸಿಲುಕಿ ಬೆಚ್ಚಿಬಿದ್ದಿದ್ದು ಅದರಿಂದ ಪಾರಾಗುವುದಕ್ಕೆ ದಾರಿ ಹುಡುಕುತ್ತಿರುವ ಹೊತ್ತಿನಲ್ಲಿ ನಿತ್ಯಾನಂದ ಇಂಥದ್ದೊಂದು ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆದಿರುವ ಕೆಲವರು ಬಹುಶಃ ಈ ಜಗತ್ತಿನಲ್ಲಿ ನಿತ್ಯಾನಂದನಷ್ಟು ಯಶಸ್ವಿಯಾಗಿ ಯಾರೂ ಕೊರೊನಾ ವೈರಾಣುವನ್ನು ಮಣಿಸಿರಲಿಕ್ಕಿಲ್ಲ, ಈ ವಿಚಾರದಲ್ಲಿ ನಿತ್ಯಾನಂದನ ಸಲಹೆ ಕೇಳಿದರೂ ತಪ್ಪಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:
ಎಲ್ಲಿದ್ದಾನೆ Nithyananda Swamiji? ತಲೆಮರೆಸಿಕೊಂಡಿರುವ ನಿತ್ಯಾನಂದ ಸ್ವಾಮಿ ಹುಡುಕುವಲ್ಲಿ ವಿಫಲವಾದ್ರಾ ಅಧಿಕಾರಿಗಳು
ಹೊಸ ವರ್ಷಾಚರಣೆ ಅಫರ್! ಶಿವನ ದರ್ಶನ ಮಾಡಿಸುತ್ತೇನೆ; ಕೈಲಾಸ ದೇಶಕ್ಕೆ ಬರುವಂತೆ ಭಕ್ತರಿಗೆ ನಿತ್ಯಾನಂದನ ಆಹ್ವಾನ..