Viral Video: ದೆಹಲಿ ಮೆಟ್ರೋ; ಈ ಎರಡೂ ರೀಲ್​​ಗಳ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದೆ

| Updated By: ಶ್ರೀದೇವಿ ಕಳಸದ

Updated on: Jul 29, 2023 | 3:15 PM

Delhi Metro : ರಿತಿಕ್​ನ 'ಸಾಂಸೋ ಕೀ ಮಾಲಾ ಪೇ' ರೀಲ್​​, 'ಈಕೆಗೆ ಐದು ರೂಪಾಯಿ ಭಿಕ್ಷೆ ಕೊಡಿ' ಎಂದೆನ್ನಿಸಿಕೊಂಡ ಸೀಮಾ ಕನೋಜಿಯಾನ ಡ್ಯಾನ್ಸ್​​ ರೀಲ್ ಇಲ್ಲಿವೆ. ಇವೆರಡೂ ಮೆಟ್ರೋ ರೈಲಿನಲ್ಲಿಯೇ ಚಿತ್ರೀಕರಣಗೊಂಡಂಥವು.

Viral Video: ದೆಹಲಿ ಮೆಟ್ರೋ; ಈ ಎರಡೂ ರೀಲ್​​ಗಳ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದೆ
ದೆಹಲಿಯ ಮೆಟ್ರೋದಲ್ಲಿ ನುಸ್ರತ್ ಫತೇ ಅಲೀ ಖಾನ್​ರ ಸಾಂಸೋಕೀ ಮಾಲಾ ಪೇ ಹಾಡುತ್ತಿರುವ ರಿತಿಕ್
Follow us on

Nusrat Fateh Ali Khan : ಸುಮಧುರವಾದ ಸಂಗೀತ ಅಥವಾ ಮನಸ್ಸನ್ನು ಅರಳಿಸುವಂಥ ಇನ್ನ್ಯಾವ ಕಲೆ (Art) ನಿಮ್ಮ ಅನುಭವಕ್ಕೆ ಬಂದರೆ ನಿಮಗರಿವಿಲ್ಲದೆಯೇ ಅವುಗಳ ಸೆಳೆತಕ್ಕೆ ಒಳಗಾಗಿರುತ್ತೀರಿ. ಎಷ್ಟೋ ಸಲ ನೀವಿರುವ ಜಾಗವನ್ನೇ ಮರೆತಿರುತ್ತೀರಿ. ಪ್ರಯಾಣದ ಸಂದರ್ಭದಲ್ಲಿಯೇ ಇಂತಹ ಅನುಭವಗಳಿಗೆ ತೆರೆದುಕೊಳ್ಳುವುದು ಹೆಚ್ಚು. ಅನಾದಿ ಕಾಲದಿಂದಲೂ ಮನುಷ್ಯ ಇಂಥದೆಲ್ಲದಕ್ಕೂ ಸಾಕ್ಷಿಯಾಗುತ್ತ ಬಂದಿದ್ದಾನೆ. ಈ ಕಾಲದಲ್ಲಿಯೂ ಉತ್ತಮ ಅಭಿರುಚಿಯಿಂದ ಕೂಡಿದ ಯಾವ ಕಲೆಯನ್ನೂ ಜನರು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇದೀಗ ದೆಹಲಿ ಮೆಟ್ರೋದಲ್ಲಿ ಚಿತ್ರೀಕರೀಸಿರುವ ಈ ರೀಲ್​ ನೋಡಿ. ಯುವಗಾಯಕನೊಬ್ಬ ನುಸ್ರತ್ ಫತೇ ಅಲಿ ಖಾನರನ್ನು ಆವಾಹಿಸಿಕೊಂಡಿದ್ದಾನೆ.

ಈ ಯುವಕನ ಭಾವಪೂರ್ಣ ಗಾಯನಕ್ಕೆ ಪ್ರಯಾಣಿಕರು, ನೆಟ್ಟಿಗರು ಫಿದಾ ಆಗಿದ್ದಾರೆ. ರಿತಿಕ್​ ಎಂಬ ಈ ಯುವಕಲಾವಿದನ ಕಂಠಮಾಧುರ್ಯದ ಸೆಳವಿನಲ್ಲಿ ತೇಲಿದ್ದಾರೆ. ‘ಸಾನ್ಸೋ ಕೀ ಮಾಲಾ’ ಗೀತೆ ಈತನ ಕಂಠದಲ್ಲಿ ಮತ್ತೆ ಮತ್ತೆ ಕೇಳುವಂತೆ ಮಾಡಿದೆ. ಇವರ ಸ್ನೇಹಿತರು ಗಿಟಾರ್​ ಸಾಥ್​ ನೀಡಿ ಈ ಗೀತೆಯ ಮೆರಗನ್ನು ಹೆಚ್ಚಿಸಿದ್ದಾರೆ. ಶಾಂತಪೂರ್ಣವಾದ ಈ ಪ್ರಸ್ತುತಿ ಅಲ್ಲಿದ್ದವರೆಲ್ಲರನ್ನೂ ಮೌನವಾಗಿ ಹಿಡಿದಿಟ್ಟಿದೆ.

ಇದನ್ನೂ ಓದಿ : Viral Video: ಬಂಡೀಪುರ; ಸ್ಕ್ರೀನ್ ಬಿಟ್ಟು ಕಾಡಿನ ದಾರಿ ಹಿಡಿಯಬೇಕು ಎನ್ನಿಸುತ್ತಿಲ್ಲವೆ?

ಆದರೆ ಜನರ ಚಿತ್ತವನ್ನು ಕದಡುವಂಥ ಡ್ಯಾನ್ಸ್​  ರೀಲ್​​​ಗಳನ್ನು ನೆಟ್ಟಿಗರೂ ಈಗೀಗ ಸಾರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ ಎನ್ನುವುದನ್ನು ನೀವು ಕೂಡ ಬಲ್ಲಿರಿ. ದೆಹಲಿ ಮೆಟ್ರೋದಲ್ಲಿ ಪ್ರತೀದಿನವೂ ರೀಲಿಗರ ಹಾವಳಿಯಿಂದ ಪ್ರಯಾಣಿಕರು ಬೇಸತ್ತು ಪೊಲೀಸರನ್ನು ಟ್ಯಾಗ್ ಮಾಡುವುದನ್ನೂ ನೋಡುತ್ತಿದ್ದೀರಿ. ಅಮವಾಸ್ಯೆಗೋ ಹುಣ್ಣಿಮೆಗೋ ಇಂಥ ರೀಲಿಗರ ವಿರುದ್ಧ ಕ್ರಮ ಕೈಗೊಂಡು ಪೊಲೀಸರು ಜನರ ಕಣ್ಣೊರೆಸಿದಂತೆ ಮಾಡುತ್ತಿದ್ದಾರಷ್ಟೇ. ರಿತಿಕ್​ನ ಹಾಡು ಕೇಳಿ ಉಲ್ಲಸಿತಗೊಂಡ ನಿಮ್ಮ ಮನಸ್ಸು ಸೀಮಾ ಕನೋಜಿಯಾ ರೀಲ್​ ನೋಡಾಗ ಹೇಗೆ ಪ್ರತಿಕ್ರಿಯಿಸುತ್ತದೆ?

ಚಿತ್ರಗೀತೆಗಳಿಗೆ ಬೇಕಾಬಿಟ್ಟಿ ಕುಣಿಯುತ್ತಿರುವ ಹುಡುಗ ಹುಡುಗಿಯರಿಗಿಂತ ರಿತಿಕ್​ ಹೆಚ್ಚು ಸೂಕ್ಷ್ಮ ಎನ್ನಿಸುತ್ತಿದ್ದಾನೆ, ಅವನಿಗೆ ನಿಜಕ್ಕೂ ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸಿದ್ದಾರೆ ಅನೇಕ ನೆಟ್ಟಿಗರು. ಹಾಗೆಯೇ ಸೀಮಾ ಕನೋಜಿಯಾ ರೀಲ್​ನಡಿ, ಈ ಹುಡುಗಿಗೆ ಯಾವ ರೋಗ ಬಂದಿದೆ ಎಂದು ಜನ ಯೋಚಿಸುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಲಾವಿದರನ್ನು ಸ್ಕ್ರೀನಿಂಗ್​ಗೆ ಒಳಪಡಿಸಿ ರೀಲ್ ಮಾಡಲು ಅವಕಾಶ ಕೊಡಲಿ ಬೇಕಿದ್ದರೆ ಎಂದು ಈ ಹಿಂದೆ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಳ್ಳೆಯ ಅಭಿರುಚಿಯಿಂದ ಕೂಡಿದ ಪ್ರಸ್ತುತಿಗೆ ಎಂದಿಗೂ ಮನ್ನಣೆ ಇದ್ದೇ ಇದೆ. ಏನು ಮಾಡುವುದು ಎಲ್ಲರ ಹಿನ್ನೆಲೆಯೂ ಮನಸ್ಥಿತಿಯೂ ಅಭಿರುಚಿಯೂ ಒಂದೇ ರೀತಿ ಇರಲು ಸಾಧ್ಯವೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 3:09 pm, Sat, 29 July 23