Viral News: ತನ್ನ ಕೋಟಿಗಟ್ಟಲೆ ಆಸ್ತಿಯನ್ನು ರಿಕ್ಷಾ ಚಾಲಕನಿಗೆ ದಾನ ಮಾಡಿದ ವೃದ್ಧೆ! ಕಾರಣ ಗೊತ್ತೇ?
ಒಡಿಶಾದ ವೃದ್ಧೆಯೋರ್ವರು ತನ್ನ ಕೋಟಿಗಟ್ಟಲೆ ಆಸ್ತಿಯನ್ನು ಆಟೋರಿಕ್ಷಾ ಚಾಲಕನಿಗೆ ದಾನ ಮಾಡಿದ್ದಾರೆ. ಕಾರಣವೇನಿರಬಹುದು? ಇಂಟರೆಸ್ಟಿಂಗ್ ಸುದ್ದಿ ಓದಿ.
ಒಡಿಶಾದ (Odisha) 63 ವರ್ಷದ ವೃದ್ಧೆಯೋರ್ವರು ತನ್ನ ಕುಟುಂಬಕ್ಕೆ 25 ವರ್ಷಗಳಿಂದ ಸೇವೆ ಮಾಡಿದ ಆಟೋರಿಕ್ಷಾ ಚಾಲಕನ (Auto Driver) ಪ್ರಾಮಾಣಿಕತೆಯನ್ನು ಮೆಚ್ಚಿ ತನ್ನೆಲ್ಲಾ ಆಸ್ತಿಯನ್ನು ಅವರಿಗೆ ದಾನ ಮಾಡಿದ್ದಾರೆ. ಬರೋಬ್ಬರಿ ಒಂದು ಕೋಟಿ ಮೌಲ್ಯದ ಆಸ್ತಿಯನ್ನು (Property) ರಿಕ್ಷಾ ಚಾಲಕನ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಘಟನೆ ಒಡಿಶಾದ ಕಟಕ್ನಲ್ಲಿ ನಡೆದಿದೆ. ವೃದ್ಧೆಯ ಹೆಸರು ಮಿನಾತಿ ಪಟ್ನಾಯಕ್. ಅವರು ರಿಕ್ಷಾ ಚಾಲಕ ಬುಧಾ ಸಮಲ್ ಅವರಿಗೆ ತಮ್ಮ ಆಸ್ತಿಯನ್ನು ನೀಡಿದ್ದಾರೆ. ಮಿನಾತಿ ಪಟ್ನಾಯಕ್ ಎಂಬ ವೃದ್ಧೆ ತಮಗೆ ಸೇರಿದ್ದ ಮೂರು ಅಂತಸ್ತಿನ ಮನೆ, ಚಿನ್ನಾಭರಣಗಳು ಹಾಗೂ ತನ್ನೆಲ್ಲಾ ಆಸ್ತಿಗಳನ್ನು ದಾನ ಮಾಡಿದ್ದಾರೆ. ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಮಿನಾತಿ ಪಟ್ನಾಯಕ್ ಅವರು ತಮ್ಮ ಪತಿಯನ್ನು ಕಳೆದುಕೊಂಡರು. ಈ ವರ್ಷ ಮಗಳು ಕೋಮಲ್ ಹೃದಯಾಘಾತದಿಂದ ಮೃತಪಟ್ಟರು. ಹಾಗಾಗಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಸತತ 25 ವರ್ಷಗಳಿಂದ ಸೇವೆ ಸಲ್ಲಿಸಿದ ಬಡ ಆಟೋರಿಕ್ಷಾ ಚಾಲಕನಿಗೆ ಆಸ್ತಿಯನ್ನು ನೀಡಿದ್ದಾರೆ.
ನನ್ನ ಪತಿ ಹಾಗೂ ಮಗಳನ್ನು ಕಳೆದುಕೊಂಡ ನಾನು ಒಬ್ಬಂಟಿಯಾಗಿದ್ದೇನೆ. ದುಃಖದಲ್ಲಿ ನನ್ನ ಜೀವನವನ್ನು ಕಳೆಯುತ್ತಿದ್ದೇನೆ. ನನ್ನ ಕಷ್ಟಕಾಲದಲ್ಲಿ ಸಂಬಂಧಿಕರು ಯಾರೂ ನನಗೆ ಸಹಾಯ ಮಾಡಲಿಲ್ಲ. ಇಂತಹ ಸಮಯದಲ್ಲಿಯೂ ರಿಕ್ಷಾ ಚಾಲಕ ನನ್ನ ಬೆಂಬಲಕ್ಕೆ ನಿಂತರು. ಏನನ್ನೂ ಕೇಳದೇ ನನ್ನ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಿದ್ದರು ಎಂದು ಮಿನಾತಿ ಪಟ್ನಾಯಕ್ ಹೇಳಿದ್ದಾರೆ.
ನನ್ನ ಸಂಬಂಧಿಕರ ಬಳಿ ಆಸ್ತಿಯಿದೆ. ಅವರ ಜೀವನಕ್ಕೆ ಸಾಕು. ನನ್ನ ಮರಣದ ಬಳಿಕ ನನ್ನೆಲ್ಲಾ ಆಸ್ತಿ ರಿಕ್ಷಾ ಚಾಲಕ ಬುಧಾ ಸಮಲ್ ಹಾಗೂ ಅವರ ಕುಟುಂಬಕ್ಕೆ ನೀಡಲು ಬಯಸಿದ್ದೆ ಎಂದು ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. ನನ್ನ ಆಸ್ತಿಯನ್ನು ಅವರಿಗೆ ನೀಡುವ ಮೂಲಕ ನಾನೇನೂ ದೊಡ್ಡ ಸಾಧನೆ ಮಾಡುತ್ತಿಲ್ಲ. ನನ್ನ ಮಗಳು ಶಾಲೆಗೆ ಹೋಗುವಾಗ ಅವರು ಆಟೋ ಚಾಲಕರಾಗಿ ನನ್ನ ಕುಟುಂಬಕ್ಕೆ ಸಹಾಯ ಮಾಡಿದ್ದರು. ಹಾಗಾಗಿ ನನ್ನೆಲ್ಲಾ ಆಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದು ಮಿನಾತಿ ಪಟ್ನಾಯಕ್ ಹೇಳಿದ್ದಾರೆ.
ಮಿನಾತಿ ಅವರು ತಮ್ಮೆಲ್ಲಾ ಆಸ್ತಿಯನ್ನು ಕಾನೂನುಬದ್ಧವಾಗಿ ಆಟೋರಿಕ್ಷಾ ಚಾಲಕ ಬುಧಾ ಸಮಲ್ ಅವರ ಹೆಸರಿಗೆ ಬರೆದಿದ್ದಾರೆ. ಈ ವಿಷಯ ತಿಳಿದ ಬುಧಾ ಅವರು ಪ್ರತಿಕ್ರಿಯಿಸಿ, ಮಿನಾತಿ ಅವರ ಈ ನಿರ್ಧಾರ ಕಂಡು ನಾನು ದಿಗ್ಭ್ರಮೆಗೊಂಡೆ. ಇನ್ನು ಮುಂದೆಯೂ ಅವರ ಸೇವೆಯಲ್ಲಿ ನಾನು ಎಂದಿಗೂ ನಿರತನಾಗಿರುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Viral News: 47 ಲಕ್ಷ ರೂ. ಜೊತೆ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿಯ ಹೆಂಡತಿ ಪರಾರಿ!
Viral Video: ಸಫಾರಿಗೆ ಹೋದಾಗ ಸಿಂಹವನ್ನು ಕೆಣಕಿದ ವ್ಯಕ್ತಿ; ಆಮೇಲೇನಾಯ್ತು? ವಿಡಿಯೋ ನೋಡಿ